
ಮುಂಬೈ: ಸದ್ಯಕ್ಕೆ ತಾನು ಮದುವೆಯಾಗುವುದಿಲ್ಲ ಎಂದು ಬಾಲಿವುಡ್ ನಟಿ ಪ್ರೀತಿ ಜಿಂಟಾ ಸ್ಪಷ್ಟಪಡಿಸಿದ್ದಾರೆ.
ನಟಿ ಪ್ರೀತಿ ಜಿಂಟಾ ಅಮೆರಿಕ ಮೂಲದ ಉದ್ಯಮಿಯನ್ನು ಜನವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಹಲವು ಊಹಾಪೋಹಗಳು ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು. ಆದರೆ ಈ ಎಲ್ಲಾ ಸುದ್ದಿಗಳನ್ನು ನಿರಾಕರಿಸಿರುವ ಗುಳಿಕೆನ್ನೆಯ ನಾಯಕಿ ಸದ್ಯ ಇನ್ನು ಒಂದು ವರ್ಷ ತಾನು ಮದುವೆಯಾಗುವುದಿಲ್ಲ. ಒಂದು ವೇಳೆ ಆ ಬಳಿಕ ಮದುವೆಯಾಗಲು ಇಚ್ಛಿಸಿದರೆ ಖಂಡಿತವಾಗಿಯೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಪ್ರೀತಿ ಜಿಂಟಾ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಮತ್ತು ಪಂಜಾಬ್ ತಂಡದ ಸಹ ಮಾಲೀಕ ಉದ್ಯಮಿ ನೆಸ್ ವಾಡಿಯಾ ಅವರೊಂದಿಗೆ ಜಗಳದಿಂದಾಗಿ ಪ್ರೀತಿ ಜಿಂಟಾ ಸಾಕಷ್ಟು ಸುದ್ದಿಯಾಗಿದ್ದರು. ಆ ಬಳಿಕ ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸಮನ್ ಡೇವಿಡ್ ಮಿಲ್ಲರ್ ರೊಂದಿಗೆ ಪ್ರೀತಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಕೂಡ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದಕ್ಕೆ ಇಂಬು ನೀಡುವಂತೆ ಕೆಲ ಕಾರ್ಯಕ್ರಮಗಳಲ್ಲಿ ಇವರಿಬ್ಬರು ಜೊತೆಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇನ್ನೇನು ಇವರಿಬ್ಬರ ಮದುವೆ ನಿಶ್ಚಿತ ಎನ್ನುವಷ್ಟರಲ್ಲಿಯೇ ಪ್ರೀತಿ ಜಿಂಟಾ ಹೆಸರಿನೊಂದಿಗೆ ಅಮೆರಿಕ ಮೂಲದ ಉದ್ಯಮಿಯೊಬ್ಬರ ಹೆಸರು ತಳುಕುಹಾಕಿಕೊಂಡಿತ್ತು. ಅಲ್ಲದೆ ಪ್ರೀತಿ ಇದೇ ಜನವರಿಯಲ್ಲಿ ಆ ಉದ್ಯಮಿಯನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಸ್ವತಃ ಪ್ರೀತಿ ಜಿಂಟಾ ಅವರ ಸ್ಪಷ್ಟನೆ ನೀಡಿದ್ದು, ತಾವು ಇನ್ನು ಒಂದು ವರ್ಷ ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Advertisement