ನವದೆಹಲಿ: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಘಟನೆಗಳು ವರದಿಯಾಗುತ್ತಿರುವ ಈಹೊತ್ತಲ್ಲಿ ತಾನು ಈ ರೀತಿಯ ಪರಿಸ್ಥಿತಿಗೆ ಸಿಲುಕಿಕೊಳ್ಳದಂತೆ ಹೆಚ್ಚಿನ ಜಾಗರೂಕತೆ ವಹಿಸುತ್ತೇನೆ ಎಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಿ, ನಾನು ಏನಾದರೂ ಹೇಳುವ ಮುನ್ನ ಅತೀವ ಜಾಗ್ರತೆ ವಹಿಸುತ್ತಿದ್ದು, ಅನಗತ್ಯ ವಿವಾದಗಳಿಗೆ ಸಿಲುಕದಂತೆ ಎಚ್ಚರವಹಿಸುತ್ತೇನೆ ಎಂದಿದ್ದಾರೆ.
ಫೇಸ್‌ಬುಕ್ ನಲ್ಲಿ ಸುಮಾರು 20 ಮಿಲಿಯನ್ ಗಿಂತಲೂ ಹೆಚ್ಚು, ಟ್ವಿಟರ್ ನಲ್ಲಿ 17.5 ಮಿಲಿಯನ್ ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಿ ಬ್ಲಾಗ್‌ಗಳನ್ನೂ ಸಕ್ರಿಯರಾಗಿದ್ದಾರೆ. 73ರ ಹರೆಯದ ಬಿಗ್ ಬಿಯನ್ನು ಸೋಷ್ಯಲ್ ಮೀಡಿಯಾ ಪರ್ಸನ್ ಆಫ್ ದ ಇಯರ್ ಎಂಬ ಪ್ರಶಸ್ತಿಯನ್ನು ನೀಡಿಯೂ ಗೌರವಿಸಲಾಗಿತ್ತು.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಗ್ ಬಿ, ನಮ್ಮಂತ ಸೆಲೆಬ್ರಿಟಿಗಳು ಬೇಗನೆ ವಿವಾದಕ್ಕೆಡೆಯಾಗುತ್ತಾರೆ. ನಾವು ಏನು ಹೇಳಿದರೂ ವಿವಾದವಾಗುತ್ತಿದೆ ಎಂಬ ಅರಿವು ನಮಗಿರುವಾಗ ಮಾತುಗಳನ್ನಾಡುವ ಮುನ್ನ ಎಚ್ಚರವಹಿಸಲೇ ಬೇಕಾಗುತ್ತದೆ ಎಂದಿದ್ದಾರೆ.