ಮುಂಬೈ: ಬಾಲಿವುಡ್ ನ ಖ್ಯಾತ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಭಾಗವಹಿಸಿದ್ದ ವರ್ಣರಂಜಿತ 62ನೇ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಸಂಜೆ ಮುಂಬೈಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಟ ಶಾರೂಕ್ ಖಾನ್ ನಿರ್ವಹಿಸಿದ್ದರು.
ದಂಗಲ್ ಚಿತ್ರದ ಅಭಿನಯಕ್ಕಾಗಿ ಈ ವರ್ಷದ ಉತ್ತಮ ನಟ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿಗೆ 'ಬಾಲಿವುಡ್ ಪರ್ಫೆಕ್ಷನಿಸ್ಟ್' ಎಂದು ಹೆಸರಾಗಿರುವ ಅಮೀರ್ ಖಾನ್ ಪಾತ್ರರಾದರೆ, ಉತ್ತಮ ನಟಿ ಪ್ರಶಸ್ತಿ ಉಡ್ತಾ ಪಂಜಾಬ್ ಚಿತ್ರದ ನಟನೆಗೆ ನಟಿ ಆಲಿಯಾ ಭಟ್ ಗೆ ಸಂದಿದೆ.
ನೀರ್ಜಾ ಚಿತ್ರದ ಉತ್ತಮ ಅಭಿನಯಕ್ಕಾಗಿ ವಿಮರ್ಶಕರ ಉತ್ತಮ ನಟಿ ಪ್ರಶಸ್ತಿ ಸೋನಮ್ ಕಪೂರ್ ಪಾಲಾದರೆ, ಆಲಿಘರ್ ಮತ್ತು ಉಡ್ತಾ ಪಂಜಾಬ್ ಚಿತ್ರಗಳ ನಟನೆಗಾಗಿ ನಟರ ವಿಭಾಗದಲ್ಲಿ ಶಾಹಿದ್ ಕಪೂರ್ ಮತ್ತು ಮನೋಜ್ ಬಾಜಪಯೀ ಅವರಿಗೆ ಸಂದಿದೆ.
ನೀರ್ಜಾ ಚಿತ್ರ ನಿರ್ದೇಶಕ ರಾಮ್ ಮಾದ್ವನಿ ಉತ್ತಮ ಚಿತ್ರ ವಿಭಾಗದಲ್ಲಿ ವಿಮರ್ಶಕರ ಮೆಚ್ಚುಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರಣ್ ಜೋಹರ್ ಅವರ ಏ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ 4 ಪ್ರಶಸ್ತಿ ಲಭಿಸಿದೆ.
ಅ ದಿಲ್ ಹೈ ಮುಷ್ಕಿಲ್ ಟೈಟಲ್ ಸಾಂಗ್ ಗೆ ಅರ್ಜಿತ್ ಸಿಂಗ್ ಗೆ ಉತ್ತಮ ಪುರುಷ ಹಿನ್ನೆಲೆ ಗಾಯಕ, ಪ್ರೀತಂಗೆ ಉತ್ತಮ ಸಂಗೀತ ನಿರ್ದೇಶಕ ಮತ್ತು ಉತ್ತಮ ಮ್ಯೂಸಿಕ್ ಆಲ್ಬಂ ಪ್ರಶಸ್ತಿ ಸಿಕ್ಕಿದೆ. ಅಮಿತಾಬ್ ಭಟ್ಟಾಚಾರ್ಯಗೆ ಚಿತ್ರದ ಉತ್ತಮ ಸಂಗೀತ ಸಾಹಿತ್ಯಕ್ಕೆ ಗೌರವ ಲಭಿಸಿದೆ.
ಸುಲ್ತಾನ್ ಚಿತ್ರದ ಜಗ್ ಘೂಮೆಯಾ ಹಾಡಿಗೆ ನೇಹಾ ಬಾಸಿನ್ ಗೆ ಉತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸಿಕ್ಕಿದೆ.
ಕಪೂರ್ ಅಂಡ್ ಸನ್ಸ್ ಚಿತ್ರಕ್ಕೆ 3 ಪ್ರಶಸ್ತಿ ಸಿಕ್ಕಿದೆ. ರಿಶಿ ಕಪೂರ್ ಗೆ ಉತ್ತಮ ಪೋಷಕ ನಟ, ಆದಿಲ್ ಶೇಖ್ ಗೆ ಉತ್ತಮ ಕೊರಿಯೊಗ್ರಫಿ ಮತ್ತು ಶಕುನ್ ಬಾತ್ರಾ ಮತ್ತು ಆಯೆಷಾ ದೆವಿತ್ರೆಗೆ ಉತ್ತಮ ಕಥೆ ಹಾಗೂ ಉತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ.ಇನ್ನೊಂದೆಡೆ, ನೀರ್ಜಾ ಚಿತ್ರ ಕೂಡ 4 ಪ್ರಶಸ್ತಿ ಗಿಟ್ಟಿಸಿಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಉತ್ತಮ ಪೋಷಕ ನಟಿ ಶಬಾನಾ ಆಜ್ಮಿ, ಉತ್ತಮ ನಿರ್ಮಾಣ ವಿನ್ಯಾಸದಲ್ಲಿ ಅಪರ್ಣಾ ಸೂದ್ ಮತ್ತು ಅನ್ನಾ ಇಪೆ, ಉತ್ತಮ ಸಿನಿಮಾಟೊಗ್ರಫಿ ಪ್ರಶಸ್ತಿಗೆ ಮಿತೇಶ್ ಮುಂಚಂದನಿ ಮತ್ತು ಉತ್ತಮ ಸಂಕಲನ ವಿಭಾಗದಲ್ಲಿ ಮೊನಿಶಾ.ಆರ್.ಬಲ್ದವಾ ಅವರು ಗೌರವಿಸಲ್ಪಟ್ಟಿದ್ದಾರೆ.
ನಿಲ್ ಬ್ಯಾಟಿ ಸನ್ನತಾ ಚಿತ್ರಕ್ಕೆ ಉತ್ತಮ ಚೊಚ್ಚಲ ನಿರ್ದೇಶಕಿ ಪ್ರಶಸ್ತಿಗೆ ಭಾಜನರಾಗಿದ್ದು ಅಶ್ವಿನಿ ಐಯ್ಯರ್ ತಿವಾರಿ. ಇದರಲ್ಲಿ ಸ್ವರ ಭಾಸ್ಕರ್ ನಟಿಸಿದ್ದು ತಮಿಳಿನಲ್ಲಿ ಕೂಡ ನಿರ್ಮಾಣವಾಗಿದೆ.
ಪ್ರತಿಷ್ಠಿತ ಫಿಲ್ಮ್ ಫೇರ್ ಜೀವಿತಾವಧಿ ಸಾಧನೆ ಪ್ರಶಸ್ತಿಗೆ ಶತ್ರುಘ್ನ ಸಿನ್ಹಾ ಅವರನ್ನು ಗೌರವಿಸಲಾಯಿತು. ಅವರ ಪುತ್ರಿ ಸೋನಾಕ್ಷಿ ಸಿನ್ಹಾ ತಂದೆಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಪಡೆದವರ ಪಟ್ಟಿ:
ಉತ್ತನ ನಟ: ಅಮೀರ್ ಖಾನ್, ಚಿತ್ರ ದಂಗಲ್,
ಉತ್ತಮ ನಟಿ: ಆಲಿಯಾ ಭಟ್, ಉಡ್ತಾ ಪಂಜಾಬ್
ವಿಮರ್ಶಕರ ಮೆಚ್ಚುಗೆ ಗಳಿಸಿದ ಉತ್ತಮ ನಟ: ಶಾಹಿದ್ ಕಪೂರ್ ಉಡ್ತಾ ಪಂಜಾಬ್ ಮತ್ತು ಮನೋಜ್ ಬಾಜಪೇಯಿ, ಆಲಿಘರ್ ಚಿತ್ರ
ವಿಮರ್ಶಕರ ಮೆಚ್ಚುಗೆ ಗಳಿಸಿದ ಉತ್ತಮ ನಟಿ: ಸೋನಮ್ ಕಪೂರ್, ನೀರ್ಜಾ ಚಿತ್ರ