ಬದುಕುತ್ತಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ: ಪತಿ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಪ್ರತಿಕ್ರಿಯೆ
ಬದುಕುತ್ತಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ. ಈ ಹಿಂದೆಯೂ ನಾನು ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲೂ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೇನೆ.
Published: 23rd July 2021 11:14 AM | Last Updated: 23rd July 2021 01:55 PM | A+A A-

ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ
ಬದುಕುತ್ತಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ. ಈ ಹಿಂದೆಯೂ ನಾನು ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲೂ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೇನೆ.
ನನ್ನ ಜೀವನವನ್ನು ಯಾವುದೂ ವಿಚಲಿತಗೊಳಿಸುವುದಿಲ್ಲ'' ಎಂದು ಬರೆದಿರುವ ಪುಸ್ತಕ ಫೋಟೋವನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಹೊರಹಾಕಿದ್ದಾರೆ.
ಅಶ್ಲೀಲ ಸಿನಿಮಾಗಳ ನಿರ್ಮಾಣದ ಆರೋಪದಡಿಯಲ್ಲಿ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ ನಂತರ ನಟಿ ಶಿಲ್ಪಾ ಶೆಟ್ಟಿ ತಮ್ಮ ಮೊದಲ ಪ್ರತಿಕ್ರಿಯೆ ಪೋಸ್ಟ್ ಮಾಡಿದ್ದಾರೆ. ಪತಿ ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೌನಕ್ಕೆ ಶರಣಾಗಿದ್ದರು. ಇದೀಗ ಪತಿಯ ಬಂಧನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ.
'ನಮಗೆ ನೋವು ಕೊಟ್ಟವರ ಬಗ್ಗೆ, ಅನುಭವಿಸಿದ ಹತಾಶೆ ಬಗ್ಗೆ, ದುರಾದೃಷ್ಟದ ಬಗ್ಗೆ ನಾವು ಸದಾ ಕೋಪದಿಂದಲೇ ಹಿಂದಿರುಗಿ ನೋಡುತ್ತೇವೆ. ಮುಂದೆ ಕೆಲಸ ಕಳೆದುಕೊಳ್ಳಬಹುದು, ಕಾಯಿಲೆ ಬರಬಹುದು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಳ್ಳಬಹುದು ಎಂಬ ಭಯದಿಂದಲೇ ಭವಿಷ್ಯವನ್ನು ನೋಡುತ್ತೇವೆ. ಆದರೆ, ಈ ಕ್ಷಣದಲ್ಲಿ ನಾವು ಬದುಕಬೇಕು. ಈ ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದನ್ನು ಬಿಟ್ಟು ಈ ಕ್ಷಣದ ಬಗ್ಗೆ ನಾವು ಜಾಗೃತವಾಗಿರಬೇಕು ಎಂದು ತಿಳಿಸಿದ್ದಾರೆ.
ಬದುಕಿನಲ್ಲಿ ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದನ್ನು ತಿಳಿಸುವ ಪುಸ್ತಕದ ಫೋಟೋವೊಂದನ್ನು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಪದಿಂದ ಹಿಂತಿರುಗಿ ನೋಡಬೇಡಿ, ಅಥವಾ ಭಯದಿಂದ ಭವಿಷ್ಯವನ್ನು ನೋಡಬೇಡಿ, ಆದರೆ ಸದಾ ಜಾಗೃತವಾಗಿರಿ'' ಎಂದು ಜೇಮ್ಸ್ ಥರ್ಬರ್ ಬರೆದಿರುವ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್ ಮಾಡಿದ್ದಾರೆ.