ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಸಿನಿಮಾಗೆ ಸಂಕಷ್ಟ; ರಾಜ್ಯದಲ್ಲಿ ಚಿತ್ರ ನಿಷೇಧಿಸುವಂತೆ ಒತ್ತಾಯ
ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿನಯದ ಥ್ಯಾಂಕ್ ಗಾಡ್ ಚಿತ್ರವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಚಿತ್ರದಲ್ಲಿನ ಪಾತ್ರವರ್ಗ ಮತ್ತು ನಿರ್ದೇಶಕ ಇಂದ್ರ ಕುಮಾರ್ ವಿರುದ್ಧ ಉತ್ತರ ಪ್ರದೇಶದಲ್ಲಿ ದೂರು ದಾಖಲಾಗಿದೆ. ಇದೀಗ ಕರ್ನಾಟಕದಲ್ಲೂ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
Published: 16th September 2022 03:48 PM | Last Updated: 16th September 2022 04:15 PM | A+A A-

ಥ್ಯಾಂಕ್ ಗಾಡ್ ಚಿತ್ರದ ಪೋಸ್ಟರ್
ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿನಯದ ಥ್ಯಾಂಕ್ ಗಾಡ್ ಚಿತ್ರವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಚಿತ್ರದಲ್ಲಿನ ಪಾತ್ರವರ್ಗ ಮತ್ತು ನಿರ್ದೇಶಕ ಇಂದ್ರ ಕುಮಾರ್ ವಿರುದ್ಧ ಉತ್ತರ ಪ್ರದೇಶದಲ್ಲಿ ದೂರು ದಾಖಲಾಗಿದೆ. ಇದೀಗ ಕರ್ನಾಟಕದಲ್ಲೂ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.
ಚಿತ್ರದ ಟ್ರೈಲರ್ ಅನ್ನು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಿದೆ. ಟ್ರೈಲರ್‌ನಲ್ಲಿ ಕಂಡುಬರುವಂತೆ, ಮರಣದ ನಂತರ ಪ್ರತಿಯೊಬ್ಬರ ಪಾಪ ಮತ್ತು ಪುಣ್ಯಗಳನ್ನು ಲೆಕ್ಕಾಚಾರ ಮಾಡುವ ಭಗವಾನ್ ಚಿತ್ರಗುಪ್ತ ಮತ್ತು ಸಾವಿನ ನಂತರ ವ್ಯಕ್ತಿಗಳ ಆತ್ಮವನ್ನು ತೆಗೆದುಕೊಂಡು ಹೋಗುವ ಯಮನನ್ನು ಆಧುನಿಕ ವೇಷಭೂಷಣಗಳಲ್ಲಿ ಚಿತ್ರಿಸಲಾಗಿದೆ. ಹೀಗಾಗಿ ರಾಜ್ಯದ ಹಿಂದೂ ಜನಜಾಗೃತಿ ಸಮಿತಿ ಈಗ ಚಿತ್ರದ ಟ್ರೈಲರ್‌ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಮಾತನಾಡಿ, ಟ್ರೈಲರ್‌ನಲ್ಲಿ ನಟರು ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುತ್ತಿರುವುದು ಕಂಡುಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮನನ್ನು ಅಣಕಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಟ್ರೈಲರ್ ಬಿಡುಗಡೆಯಾಗುವವರೆಗೂ ಸೆನ್ಸಾರ್ ಮಂಡಳಿ ನಿದ್ದೆ ಮಾಡುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಬಾರದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಚಿತ್ರಕ್ಕೆ ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಗಳು ನಿಷೇಧ ಹೇರಬೇಕು ಎಂದು ಒತ್ತಾಯಿಸಿರುವ ಸಮಿತಿ, ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; 'ತಾನಾಜಿ' ಅಜಯ್ ದೇವಗನ್, 'ಸೂರರೈ ಪೋಟ್ರು' ಸೂರ್ಯ ಶ್ರೇಷ್ಠ ನಟ
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಮಾತನಾಡಿ, 'ಇಂದು ಬಾಲಿವುಡ್ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಕೆಲಸವನ್ನು ಮಾಡಿದೆ. ಪಿಕೆ ಚಿತ್ರದ ಬಳಿಕ ಇದೀಗ ಥ್ಯಾಂಕ್ ಗಾಡ್ ಸಿನಿಮಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದೆಂಬುದು ಬಾಲಿವುಡ್‌ಗೆ ಏಕೆ ಅರ್ಥವಾಗುವುದಿಲ್ಲ. ಹೀಗಾಗಿ ಹಿಂದೂ ಜನಜಾಗೃತಿ ಸಮಿತಿಯು ಚಲನಚಿತ್ರವನ್ನು ವಿರೋಧಿಸುತ್ತದೆ' ಎಂದಿದ್ದಾರೆ.
'ಚಿತ್ರವು ಹಿಂದೂ ಧಾರ್ಮಿಕ ಪರಿಕಲ್ಪನೆಗಳು ಮತ್ತು ದೇವತೆಗಳನ್ನು ಲೇವಡಿ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ. ಈ ಚಿತ್ರದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಪೂರ್ಣ ಚಲನಚಿತ್ರದಲ್ಲಿ ಈಗಿನ ಸಂಭಾಷಣೆಗಳಿಗಿಂತ ಹೆಚ್ಚು ಆಕ್ಷೇಪಾರ್ಹ ಸಂಭಾಷಣೆಗಳು ಇರುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ' ಎಂದು ಹೇಳಿದರು.
ಥ್ಯಾಂಕ್ ಗಾಡ್ ಸಿನಿಮಾ ಅಕ್ಟೋಬರ್ 25 ರಂದು ಬಿಡುಗಡೆಯಾಗಲಿದೆ.