
ನವದೆಹಲಿ: ಸದ್ಯ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ನಟಿ ಕಂಗನಾ ರಣಾವತ್ ಅಭಿನಯದ 'ಎಮರ್ಜೆನ್ಸಿ' ಚಿತ್ರ ಬಿಡುಗಡೆಯನ್ನು ಮುಂದೂಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ನಟಿ ಕಂಗನಾ ರಣಾವತ್ ಅವರನ್ನು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ರಾಜ್ಯದಲ್ಲಿ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.
ಮಣಿಕರ್ಣಿಕಾ ಫಿಲ್ಮ್ಸ್ ಪ್ರೊಡಕ್ಷನ್ ಬುಧವಾರ ಸಂಜೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.
'ನಮ್ಮ ರಾಣಿ ಕಂಗನಾ ರಣಾವತ್‌ಗಾಗಿ ನಮ್ಮ ಹೃದಯಗಳು ಪ್ರೀತಿಯಿಂದ ತುಂಬಿವೆ. ಅವರು ದೇಶಕ್ಕೆ ತಮ್ಮ ಕರ್ತವ್ಯ ಮತ್ತು ದೇಶ ಸೇವೆ ಮಾಡುವ ಬದ್ಧತೆಗೆ ಆದ್ಯತೆ ನೀಡುತ್ತಿರುವುದರಿಂದ ನಮ್ಮ ಬಹು ನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಎಮರ್ಜೆನ್ಸಿ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು' ಎಂದು ಹೇಳಿದೆ.
ಎಮರ್ಜೆನ್ಸಿ ಚಿತ್ರವನ್ನು 2023ರ ನವೆಂಬರ್ 24ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಸದ್ಯ ಕಂಗನಾ ಅವರು ಚುನಾವಣೆ ಕೆಲಸಗಳಲ್ಲಿ ನಿರತರಾಗಿರುವ ಕಾರಣ ಈ ಬಾರಿಯೂ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
‘ಎಮರ್ಜೆನ್ಸಿ’ ಚಿತ್ರ ಭಾರತದ ರಾಜಕೀಯ ಇತಿಹಾಸದ ಕಥಾಹಂದರವನ್ನು ಹೊಂದಿದೆ ಎನ್ನಲಾಗಿದ್ದು, ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ನಟಿಸಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಇದ್ದಾರೆ.
Zee ಸ್ಟುಡಿಯೋಸ್‌ನ ಬೆಂಬಲದೊಂದಿಗೆ, ಎಮರ್ಜೆನ್ಸಿ ಚಿತ್ರವನ್ನು ಮಣಿಕರ್ಣಿಕಾ ಫಿಲ್ಮ್ಸ್ ಪ್ರಸ್ತುತಿಪಡಿಸಿದ್ದು, ರೇಣು ಪಿಟ್ಟಿ ಮತ್ತು ರನೌತ್ ನಿರ್ಮಿಸಿದ್ದಾರೆ.
Advertisement