
ಅಹ್ಮದಾಬಾದ್: ಹೀಟ್ ಸ್ಟ್ರೋಕ್ ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಾರುಖ್ ಖಾನ್ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಐಪಿಎಲ್ ಪಂದ್ಯ ವೀಕ್ಷಣೆಗೆಂದು ಗುಜರಾತ್ ನ ಅಹ್ಮದಾಬಾದ್ ಗೆ ಬಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಹೀಟ್ ಸ್ಟ್ರೋಕ್ ಗೆ ತುತ್ತಾಗಿ ಅಹ್ಮದಾಬಾದ್ ನ ಕೆಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 2 ದಿನಗಳ ಚಿಕಿತ್ಸೆ ಬಳಿಕ ನಟ ಶಾರುಖ್ ಗುಣಮುಖರಾಗಿದ್ದು, ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಶಾರುಖ್ ಖಾನ್ ಅವರನ್ನು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಅವರು ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ" ಎಂದು ಅಹಮದಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ. ಆದರೆ ಶಾರುಖ್ ಖಾನ್ ಆರೋಗ್ಯದ ಬಗ್ಗೆ ಖಾಸಗಿ ಆಸ್ಪತ್ರೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ನಟ ಶಾರುಖ್ ಖಾನ್ ಐಪಿಎಲ್ ಟೂರ್ನಿಯ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯ ವೀಕ್ಷಣೆಗೆ ಅಹ್ಮದಾಬಾದ್ ಗೆ ಆಗಮಿಸಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರನ್ನು ಅಹ್ಮದಾಬಾದ್ ನ ಕೆಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು ಮನೆಗೆ ತೆರಳಿದ್ದಾರೆ.
ಅಂದಹಾಗೆ ನಟ ಶಾರುಖಾ ಖಾನ್ ಐಪಿಎಲ್ ನ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರೂ ಕೂಡ ಆಗಿದ್ದು, ಅವರ ತಂಡ ಹಾಲಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ.
ಬಿಸಿಲ ಬೇಗೆ, ಉಷ್ಣ ಹವೆಯಿಂದ ತತ್ತರಿಸುತ್ತಿರುವ ಗುಜರಾತ್
ಇನ್ನು ಕಳೆದೆರಡು ದಿನಗಳಿಂದ ಗುಜರಾತ್‌ನ ಹಲವು ಭಾಗಗಳು ಬಿಸಿಗಾಳಿಯಿಂದ ತತ್ತರಿಸಿ ಹೋಗಿದೆ. ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಂಗಳವಾರ ಮತ್ತು ಬುಧವಾರದಂದು ಅಹ್ಮದಾಬಾದ್ ನಗರವು 'ಹೀಟ್‌ವೇವ್' ಗೆ ತುತ್ತಾಗಿತ್ತು. ಅಂದು ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ಕ್ರಮವಾಗಿ 45.2 ಮತ್ತು 45.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು ಎಂದು ಮಾಹಿತಿ ನೀಡಿದೆ.
Advertisement