

ನವದೆಹಲಿ: ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿದ್ದು, 27 ಕೋಟಿ ರೂಪಾಯಿಗಳ ಆರಂಭಿಕ ಗಳಿಕೆಯೊಂದಿಗೆ ಉತ್ತಮ ಆರಂಭ ಪಡೆದ ಚಿತ್ರ ಇದೀಗ ಮೊದಲ ಶನಿವಾರ ಮತ್ತಷ್ಟು ಬೆಳವಣಿಗೆ ಕಂಡಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಧುರಂಧರ್ ಚಿತ್ರ ಬಿಡುಗಡೆಯಾದ ಎರಡನೇ ದಿನದಂದು 31 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಒಟ್ಟು 58 ಕೋಟಿ ರೂಪಾಯಿ ಗಳಿಕೆ ಕಂಡಿದೆ.
ಶನಿವಾರ ಒಟ್ಟಾರೆಯಾಗಿ ಥಿಯೇಟರ್‌ನಲ್ಲಿ ಶೇ 39.63ರಷ್ಟು ಜನರು ಈ ಆ್ಯಕ್ಷನ್ ಡ್ರಾಮಾವನ್ನು ವೀಕ್ಷಿಸಿದ್ದಾರೆ. ಬೆಳಗಿನ ಪ್ರದರ್ಶನಗಳು ಶೇ 17.26 ರಷ್ಟು, ಮಧ್ಯಾಹ್ನದ ಪ್ರದರ್ಶನಗಳು ಶೇ 35.46 ರಷ್ಟು, ಸಂಜೆ ಪ್ರದರ್ಶನಗಳು ಶೇ 42.65 ರಷ್ಟು ಮತ್ತು ರಾತ್ರಿ ಪ್ರದರ್ಶನಗಳು ಶೇ 63.16 ರಷ್ಟು ವೀಕ್ಷಣೆ ಪಡೆದಿವೆ.
ಪ್ರಮುಖ ನಗರಗಳ ಪೈಕಿ ಪುಣೆಯಲ್ಲಿ ಶೇ 49.50 ರಷ್ಟು ಜನರು ಚಿತ್ರವನ್ನು ವೀಕ್ಷಿಸಿದ್ದಾರೆ. ಚಿತ್ರಕ್ಕೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಪ್ರದರ್ಶನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಶೀಘ್ರದಲ್ಲೇ 100 ಕೋಟಿ ರೂ.ಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ.
ರಣವೀರ್ ಸಿಂಗ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಬಿಡುಗಡೆಯಾದಾಗ 11.1 ಕೋಟಿ ರೂ. ಆರಂಭಿಕ ಗಳಿಕೆ ಕಂಡಿತ್ತು. ಎರಡನೇ ದಿನ 16.05 ಕೋಟಿ ರೂ.ಗಳನ್ನು ಸಂಗ್ರಹಿಸಿತು ಮತ್ತು ಭಾರತದಲ್ಲಿ ಸುಮಾರು 182 ಕೋಟಿ ರೂ.ಗಳನ್ನು ಗಳಿಸಿತು.
ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ವಾರ್ 2 ಮತ್ತು ವಿಕ್ಕಿ ಕೌಶಲ್ ನಟನೆಯ ಛಾವಾ ನಂತರ ಇದು ವರ್ಷದ ಮೂರನೇ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Advertisement