
ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ 2024ರ ಜೂನ್ 23ರಂದು ತಮ್ಮ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ವಿವಾಹವಾಗಿದ್ದರು. ಇದೀಗ ನಟಿ ತಮ್ಮ ಮದುವೆ ಸುತ್ತಲಿನ ವದಂತಿಗಳು ಮತ್ತು ಊಹಾಪೋಹಗಳ ಕುರಿತು ಮಾತನಾಡಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರ ವಿವಾಹದ ನಿರ್ಧಾರವು ಸಾರ್ವಜನಿಕವಾಗಿ ಹಲವು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿತ್ತು. ಇದೀಗ ಅವೆಲ್ಲವಕ್ಕೂ ನಟಿ ಸೋನಾಕ್ಷಿ ತೆರೆ ಎಳೆದಿದ್ದಾರೆ.
ಇತ್ತೀಚೆಗೆ Hauterrflyಗೆ ನೀಡಿದ ಸಂದರ್ಶನದಲ್ಲಿ, ತನ್ನ ತಂದೆ ಸಾಧ್ಯವಾದಷ್ಟು ನನಗೆ ಬೆಂಬಲ ನೀಡುತ್ತಿದ್ದರು. ತನ್ನ ಸಹೋದರರ ಅನುಪಸ್ಥಿತಿಯ ಬಗ್ಗೆ ನಾನು ಅಷ್ಟೇನು ಯೋಚಿಸಲಿಲ್ಲ. ಜಹೀರ್ ಕುಟುಂಬದಿಂದ ಇಸ್ಲಾಂಗೆ ಮತಾಂತರಗೊಳ್ಳುವಂತೆ ಯಾವುದೇ ಒತ್ತಡವನ್ನು ಎಂದಿಗೂ ಎದುರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನನಗೆ ಮತ್ತು ಜಹೀರ್‌ಗೆ ಧರ್ಮವು ಎಂದಿಗೂ ಸಮಸ್ಯೆಯಾಗಿ ಕಂಡಿಲ್ಲ. ಜಹೀರ್ ಮತ್ತು ನಾನು ನಿಜವಾಗಿಯೂ ಧರ್ಮದ ಬಗ್ಗೆ ಗಮನ ಹರಿಸುತ್ತಿರಲಿಲ್ಲ. ನಾವು ಪರಸ್ಪರ ಪ್ರೀತಿಸುವ ಮತ್ತು ಪರಸ್ಪರ ಮದುವೆಯಾಗಲು ಬಯಸುವ ಇಬ್ಬರು ವ್ಯಕ್ತಿಗಳಾಗಿದ್ದೆವು. ಅವರು ಅವರ ಧರ್ಮವನ್ನು ನನ್ನ ಮೇಲೆ ಹೇರಲಿಲ್ಲ ಮತ್ತು ನಾನು ಕೂಡ ನನ್ನ ಧರ್ಮವನ್ನು ಅವರ ಮೇಲೆ ಹೇರಲಿಲ್ಲ. ಈ ವಿಚಾರದ ಕುರಿತು ನಮ್ಮ ನಡುವೆ ಚರ್ಚೆಯೂ ಆಗಿಲ್ಲ' ಎಂದು ಹೇಳಿದ್ದಾರೆ.
'ನಾವಿಬ್ಬರೂ ಪರಸ್ಪರರ ಸಂಸ್ಕೃತಿಗಳನ್ನು ಗೌರವಿಸುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ. ಅವರು ತಮ್ಮ ಮನೆಯಲ್ಲಿನ ಕೆಲವು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ನಾನು ಅವರ ಮನೆಯಲ್ಲಿನ ಕೆಲವು ಸಂಪ್ರದಾಯಗಳನ್ನು ಅನುಸರಿಸುತ್ತೇನೆ. ಅವರು ನನ್ನ ಮನೆಯಲ್ಲಿನ ದೀಪಾವಳಿ ಪೂಜೆಯಲ್ಲಿ ಭಾಗವಹಿಸುತ್ತಾರೆ ಮತ್ತು ನಾನು ಅವರ ಮನೆಯ ಆಚರಣೆಗಳಲ್ಲಿ ಭಾಗವಹಿಸುತ್ತೇನೆ. ನಮ್ಮ ನಡುವೆ ಇದುವೇ ಮುಖ್ಯವಾಗಿದೆ' ಎಂದು ಅವರು ಹೇಳಿದರು.
'ಬೇರೆ ಬೇರೆ ಧರ್ಮಗಳಿಗೆ ಸೇರಿದವರು ಮದುವೆಯಾಗಲು ಉತ್ತಮ ಮಾರ್ಗವೆಂದರೆ, ವಿಶೇಷ ವಿವಾಹ ಕಾಯ್ದೆ. ಅಲ್ಲಿ ನಾನು ಹಿಂದೂ ಮಹಿಳೆಯಾಗಿ ನನ್ನ ಧರ್ಮವನ್ನು ಬದಲಾಯಿಸುವ ಅಗತ್ಯವಿಲ್ಲ ಮತ್ತು ಅವರು ಮುಸ್ಲಿಂ ಪುರುಷನಾಗಿಯೇ ಉಳಿಯಬಹುದು. ಅದು ತುಂಬಾ ಸರಳವಾಗಿದೆ. 'ನಮ್ಮ ಧರ್ಮಕ್ಕೆ ಮತಾಂತರಗೊಳ್ಳುತ್ತೀರಾ?' ಎಂದು ನನ್ನನ್ನು ಎಂದಿಗೂ ಕೇಳಿಲ್ಲ. ನಾವು ಪರಸ್ಪರ ಪ್ರೀತಿಸುತ್ತೇವೆ ಮತ್ತು ನಾವು ಮದುವೆಯಾಗಿದ್ದೇವೆ' ಎಂದು ತಿಳಿಸಿದರು.
'ಅನಗತ್ಯ ಒತ್ತಡದಿಂದ ದೂರ ಉಳಿಯಲು ನಾನು ಮತ್ತು ಜಹೀರ್ ನಮ್ಮ ಮದುವೆಗೆ ಮುನ್ನ ಇನ್‌ಸ್ಟಾಗ್ರಾಂ ಕಾಮೆಂಟ್‌ಗಳನ್ನು ಮ್ಯೂಟ್ ಮಾಡಲು ನಿರ್ಧರಿಸಿದ್ದೆವು. ನನ್ನ ಜೀವನದ ಬಹು ಪ್ರಮುಖವಾದ ದಿನದಂದು, ನಾನು ಈ ಅಸಂಬದ್ಧತೆಯ ವಿಚಾರಗಳ ಹತ್ತಿರ ಇರಲು ಬಯಸಲಿಲ್ಲ' ಎಂದು ಹೇಳಿದರು.
ಏಳು ವರ್ಷ ಡೇಟಿಂಗ್ ಮಾಡಿದ್ದ ಸೋನಾಕ್ಷಿ ಮತ್ತು ಜಹೀರ್ ಕಳೆದ ವರ್ಷ ಜೂನ್ 23 ರಂದು ವಿವಾಹವಾದರು.
Advertisement