
ಮುಂಬೈ: ತಮ್ಮದೇ ಮನೆಯಲ್ಲಿ ದರೋಡೆಕೋರನಿಂದ ಚಾಕು ಇರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದು ಅವರಿಗೆ ಬರೊಬ್ಬರಿ 6 ಬಾರಿ ಚಾಕು ಇರಿಯಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಲೀಲಾವತಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಯೊಬ್ಬರು ಚಾಕುವಿನಿಂದ ಇರಿದ ಪರಿಣಾಮ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತದ ಮಡುವಿನಲ್ಲಿದ್ದ ಸೈಫ್ ಅಲಿಖಾನ್ ರನ್ನು ನಿನ್ನೆ ಮಧ್ಯರಾತ್ರಿ ಆಟೋದಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು.
6 ಬಾರಿ ಇರಿತ, 2.5-inch ಚಾಕು ಹೊರಕ್ಕೆ
ಬೆನ್ನು ಮೂಳೆ ಬಳಿ ಚಾಕುವಿನಿಂದ ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಖಾನ್ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಖಾನ್ ಅವರ ದೇಹಕ್ಕೆ ಆರು ಬಾರಿ ಇರಿಯಲಾಗಿದೆ, ಎರಡು ಭಾಗಗಳಲ್ಲಿ ಆಳವಾಗಿ ಗಾಯಗಳಾಗಿವೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ, ಜೀವಕ್ಕೆ ಯಾವುದೇ ಅಪಾಯವಿಲ್ಲ. ಬೆನ್ನುಮೂಳೆಯಿಂದ ಬರೊಬ್ಬರಿ 2.5 ಇಂಚಿನ ಚಾಕುವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಖಾನ್ ಅವರ ಆರೋಗ್ಯ ಈಗ ಸ್ಥಿರವಾಗಿದೆ. ನಾಳೆ ಬೆಳಿಗ್ಗೆ ಅವರನ್ನು ಐಸಿಯುನಿಂದ ಹೊರತರುತ್ತೇವೆ’ ಎಂದು ಆಸ್ಪತ್ರೆಯ ಡಾ. ನಿತಿನ್ ಡಾಂಗೆ ತಿಳಿಸಿದ್ದಾರೆ.
ಅಭಿಮಾನಿಗಳಿಗೆ ಪತ್ನಿ ಕರೀನಾ ಕಪೂರ್ ಮನವಿ
‘ಈ ಸಂದರ್ಭದಲ್ಲಿ ಮಾಧ್ಯಮದವರು ಮತ್ತು ಅಭಿಮಾನಿಗಳು ಶಾಂತ ರೀತಿಯಲ್ಲಿ ವರ್ತಿಸಿ, ಉಳಿದ ಕುಟುಂಬ ಸದಸ್ಯರು ಸುರಕ್ಷಿತವಾಗಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಸೈಫ್ ಅಲಿ ಖಾನ್ ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮನವಿ ಮಾಡಿದ್ದಾರೆ.
ಇನ್ನೂ ಯಾವುದೇ ಬಂಧನ ಇಲ್ಲ
ಮುಂಬೈನ ಬಾಂದ್ರಾದಲ್ಲಿರುವ ಖಾನ್ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗುರುವಾರ ಬೆಳಗಿನ ಜಾವ 2.30ರ ಹೊತ್ತಿಗೆ ಘಟನೆ ನಡೆದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.
ಸಿಸಿಟಿವಿ ಪರಿಶೀಲನೆ
ಇನ್ನು ಸೈಫ್ ಅಲಿ ಖಾನ್ ಮನೆ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಘಟನೆ ನಡೆದ ಸೈಫ್ ಅಲಿಖಾನ್ ಮನೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ, ಅಪರಿಚಿತ ಒಳನುಗ್ಗುವವರ ಸಿಸಿಟಿವಿ ದೃಶ್ಯಗಳನ್ನು ಪತ್ತೆಹಚ್ಚಲಾಗಿದ್ದು, ಅಪರಾಧದ ತನಿಖೆಗಾಗಿ ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಒಳನುಗ್ಗುವವರು ನಟನ ಫ್ಲಾಟ್‌ಗೆ ಬಲವಂತವಾಗಿ ಪ್ರವೇಶಿಸಿಲ್ಲ ಅಥವಾ ಒಳಗೆ ನುಗ್ಗಿಲ್ಲ, ಬದಲಿಗೆ ರಾತ್ರಿಯ ವೇಳೆ ಯಾವುದೋ ಸಮಯದಲ್ಲಿ ನುಸುಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ದರೋಡೆಕೋರರಿಗೆ ಸೈಫ್ ಅಳಿಖಾನ್ ಮನೆಯೊಳಗಿನ ಸಿಬ್ಬಂದಿಗಳೇ ನೆರವಾಗಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಬೆಳಗಿನ ಜಾವ 2.30 ರ ಸುಮಾರಿಗೆ ನಡೆದ ಘಟನೆಯ ನಂತರ, ದಾಳಿಕೋರ ತಪ್ಪಿಸಿಕೊಳ್ಳಲು ಮೆಟ್ಟಿಲು ಹತ್ತಿದ್ದ. ಆರನೇ ಮಹಡಿಯಲ್ಲಿ ಆತನ ಸಿಸಿಟಿವಿ ದೃಶ್ಯಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯಲ್ಲಿ ಸೈಫ್ ಅಲಿಖಾನ್ ಮನೆ ಕೆಲಸದಾಕೆಗೂ ಗಲಾಟೆಯ ಸಮಯದಲ್ಲಿ ಚಾಕುವಿನಿಂದ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಥಮಿಕಿ ಚಿಕಿತ್ಸೆ ಬಳಿಕ ಆಕೆ ದಾಳಿ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
Advertisement