
ಲಾಸ್ ಏಂಜಲೀಸ್: ಕನ್ನಡ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವ ಸಿಕ್ಕಿದೆ. ಈ ಸ್ಟಾರ್ ಪಟ್ಟ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ.
ಹಾಲಿವುಡ್ ವಾಕ್ ಆಫ್ ಫೇಮ್ ನ್ನು ನಿರ್ವಹಿಸುವ ಅಧಿಕೃತ ಸಂಸ್ಥೆಯಾದ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ.
"ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್‌ನ ವಾಕ್ ಆಫ್ ಫೇಮ್ ಆಯ್ಕೆ ಸಮಿತಿಯಿಂದ ಮೋಷನ್ ಪಿಕ್ಚರ್ಸ್, ಟೆಲಿವಿಷನ್, ಲೈವ್ ಥಿಯೇಟರ್/ಲೈವ್ ಪರ್ಫಾರ್ಮೆನ್ಸ್, ರೇಡಿಯೋ, ರೆಕಾರ್ಡಿಂಗ್ ಮತ್ತು ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ವಿಭಾಗಗಳಲ್ಲಿ ಮನರಂಜನಾ ವೃತ್ತಿಪರರ ಹೊಸ ಗುಂಪನ್ನು ಹಾಲಿವುಡ್ ವಾಕ್ ಆಫ್ ಫೇಮ್ ಗೌರವ ಸ್ವೀಕರಿಸಲು ಆಯ್ಕೆ ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
"2026 ರ ವಾಕ್ ಆಫ್ ಫೇಮ್ ಗೆ ನಿಮ್ಮನ್ನು ಸ್ವಾಗತಿಸಲು ನಮಗೆ ಗೌರವವಿದೆ!" ಎಂದು ಸಂಸ್ಥೆ ಹೇಳಿಕೊಂಡಿದೆ.
ದೀಪಿಕಾ ಪಡುಕೋಣೆ ಎಮಿಲಿ ಬ್ಲಂಟ್, ಟಿಮೋಥಿ ಚಲಮೆಟ್, ಮರಿಯನ್ ಕೋಟಿಲ್ಲಾರ್ಡ್, ಸ್ಟಾನ್ಲಿ ಟುಸಿ, ರಾಮಿ ಮಲೆಕ್, ರಾಚೆಲ್ ಮ್ಯಾಕ್ ಆಡಮ್ಸ್, ಡೆಮಿ ಮೂರ್, ಚಲನಚಿತ್ರ ನಿರ್ಮಾಪಕರು ಕ್ರಿಸ್ ಕೊಲಂಬಸ್ ಮತ್ತು ಟೋನಿ ಸ್ಕಾಟ್ ಸೇರಿದಂತೆ ಹಲವಾರು ಜನಪ್ರಿಯ ಹಾಲಿವುಡ್ ನಟರೊಂದಿಗೆ ಈ ಗೌರವ ಸ್ವೀಕರಿಸಲಿದ್ದಾರೆ.
ಕಿರುತೆರೆ ಉದ್ಯಮದಿಂದ, "ದಿ ಆಫೀಸ್" ರಚನೆಕಾರ ಗ್ರೆಗ್ ಡೇನಿಯಲ್ಸ್, ಸಾರಾ ಮಿಚೆಲ್ ಗೆಲ್ಲರ್, ಚೆಫ್ ಗಾರ್ಡನ್ ರಾಮ್ಸೆ, ಬ್ರಾಡ್ಲಿ ವಿಟ್‌ಫೋರ್ಡ್ ಮತ್ತು ನೋಹ್ ವೈಲ್ ಅವರನ್ನು ಗೌರವಿಸಲಾಗುವುದು.
ಹಾಲಿವುಡ್ ವಾಕ್ ಆಫ್ ಫೇಮ್ ಮನರಂಜನಾ ಉದ್ಯಮದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿ ಸಂಭ್ರಮಿಸುತ್ತದೆ, ಇದರಲ್ಲಿ ಲಾಸ್ ಏಂಜಲೀಸ್‌ನ ಹಾಲಿವುಡ್ ಬೌಲೆವಾರ್ಡ್ ಮತ್ತು ವೈನ್ ಸ್ಟ್ರೀಟ್‌ನ 2,700 ಕ್ಕೂ ಹೆಚ್ಚು ಕಲಾವಿದರನ್ನು ಸೇರಿಸಲಾಗಿದೆ, ಇದು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಪ್ರಪಂಚದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವ ಚಲನಚಿತ್ರ, ದೂರದರ್ಶನ, ಸಂಗೀತ, ರೇಡಿಯೋ ಮತ್ತು ನೇರ ಪ್ರದರ್ಶನದ ಪ್ರಪಂಚದ ಕಲಾವಿದರನ್ನು ಗೌರವಿಸುತ್ತದೆ.
ಜೂನ್ 14, 2024 ರಂದು ನಡೆದ ಸಭೆಯಲ್ಲಿ ಸಮಿತಿಗೆ ನೂರಾರು ನಾಮನಿರ್ದೇಶನಗಳಲ್ಲಿ ಹಲವು ಕಲಾವಿದರನ್ನು ಆಯ್ಕೆ ಮಾಡಿ ಅದೇ ದಿನ ಹಾಲಿವುಡ್ ಚೇಂಬರ್‌ನ ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲಾಯಿತು.
ದೀಪಿಕಾ ಸಾಧನೆ
2007 ರಲ್ಲಿ "ಓಂ ಶಾಂತಿ ಓಂ" ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ ದೀಪಿಕಾ ಪಡುಕೋಣೆ ಭಾರತದ ಅಗ್ರ ತಾರೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಅವರು "ಲವ್ ಆಜ್ ಕಲ್", "ಪಿಕು", "ಬಾಜಿರಾವ್ ಮಸ್ತಾನಿ", "ಗೋಲಿಯೋಂ ಕಿ ರಾಸ್ಲೀಲಾ ರಾಮ್-ಲೀಲಾ", "ಪದ್ಮಾವತ್", "ಛಪಾಕ್" ಮತ್ತು "ಗೆಹರಾಯಿಯಾನ್" ನಂತಹ ಚಿತ್ರಗಳಲ್ಲಿ ನಟಿಸಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದರು.
ಹಾಲಿವುಡ್‌ನಲ್ಲಿ, ಅವರು ವಿನ್ ಡೀಸೆಲ್ ಜೊತೆ 2017 ರ ಆಕ್ಷನ್ ಚಿತ್ರ "XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್" ನಲ್ಲಿ ನಟಿಸಿದರು.
2018 ರಲ್ಲಿ ಟೈಮ್ ನಿಯತಕಾಲಿಕೆಯ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ದೀಪಿಕಾ ಹೆಸರಿಸಲ್ಪಟ್ಟರು ಮತ್ತು TIME100 ಇಂಪ್ಯಾಕ್ಟ್ ಪ್ರಶಸ್ತಿಯನ್ನು ಪಡೆದರು. 2022 ರಲ್ಲಿ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದ ಮುಖ್ಯ ಸ್ಪರ್ಧಾ ತೀರ್ಪುಗಾರರಾಗಿ ಸೇವೆ ಸಲ್ಲಿಸಿದರು.
ದೀಪಿಕಾ ಪಡುಕೋಣೆ ಪ್ರಸ್ತುತ ಅಲ್ಲು ಅರ್ಜುನ್ ಜೊತೆ ಅಟ್ಲೀ ನಿರ್ದೇಶನದ ಹೆಸರಿಡದ ಚಿತ್ರ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
Advertisement