
ಮುಂಬೈ: ಸೌಂದರ್ಯ ಹೆಚ್ಚಿಸಿಕೊಳ್ಳಲು ನಟ-ನಟಿಯರು ಮಾಡುವ ಹರಸಹಾಸ ಕೆಲವೊಮ್ಮೆ ಉಲ್ಟಾ ಹೊಡೆದು ಇರುವ ಅಂದ ಕೂಡ ಕೆಡುತ್ತದೆ. ಬಾಲಿವುಡ್ ನಲ್ಲಿ ಇದಕ್ಕೆ ಸಾಕಷ್ಟು ಉದಾಹರಣಗಳಿದ್ದು, ಇದೀಗ ವಿವಾದಿತ ನಟಿ ಉರ್ಫಿ ಜಾವೆದ್ ಮಾಡಿಕೊಂಡ ಎಡವಟ್ಟು ಭಾರಿ ವೈರಲ್ ಆಗುತ್ತಿದೆ.
ಹೌದು.. ರಿಯಾಲಿಟಿ ಶೋ ತಾರೆ ಮತ್ತು ಸಾಮಾಜಿಕ ಮಾಧ್ಯಮದ ವಿವಾದಾತ್ಮಕ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಲಿಪ್ ಫಿಲ್ಲರ್‌ಗಳನ್ನು ತೆಗೆಸಿದ್ದಾರೆ. ಈ ಲಿಪ್ ಫಿಲ್ಲರ್‌ಗಳನ್ನು ಕರಗಿಸುವ ಮೊದಲು ಮತ್ತು ನಂತರ ಚಿತ್ರಗಳು ಇದೀಗ ಭಾರಿ ವೈರಲ್ ಆಗುತ್ತಿದೆ.
ಈ ಕುರಿತ ಫೋಟೋ ಮತ್ತು ವಿಡಿಯೋಗಳನ್ನು ಸ್ವತಃ ನಟಿಯೇ ಹಂಚಿಕೊಂಡಿದ್ದು, ನಟಿ 18 ನೇ ವಯಸ್ಸಿನಲ್ಲಿ ಹಾಕಿಸಲಾಗಿದ್ದ ಲಿಪ್ ಫಿಲ್ಲರ್‌ಗಳನ್ನು ಒಂಬತ್ತು ವರ್ಷಗಳ ನಂತರ ಅವುಗಳನ್ನು ಕರಗಿಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಅಂತೆಯೇ ಈ ಲಿಪ್ ಫಿಲ್ಲರ್ ಗಳನ್ನು ಕರಗಿಸುವ ಹಾದಿ ತುಂಬಾ ಕಠಿಣ ಮತ್ತು ನೋವಿನಿಂದ ಕೂಡಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಉರ್ಫಿ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಆಪ್ತರು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
ಈ ಲಿಪ್ ಫಿಲ್ಲರ್‌ಗಳ ಕರಗಿಸುವ ಪ್ರಕ್ರಿಯೆಯಲ್ಲಿ ಉರ್ಫಿ ತೆಗೆದುಕೊಂಡ ಚಿಕಿತ್ಸೆ ಬಳಿಕ ಆಕೆಯ ತುಟಿಗಳು ಮತ್ತು ಮುಖ ಊದಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಉರ್ಫಿ ಎಚ್ಚರಿಕೆ ನೀಡಿದ್ದು, 'ದಯವಿಟ್ಟು ಈ ವೀಡಿಯೊವನ್ನು ಜಾಗ್ರತೆಯಿಂದ ನೋಡಿ. ಲಿಪಿ ಫಿಲ್ಲರ್ ಗಳ ಬಗ್ಗೆ ಎಚ್ಚರಿಕೆ ಇರಲಿ. ಅವು ಸೌಂದರ್ಯ ಹೆಚ್ಚಳದ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರಪಬಹುದು.
ಆದ್ದರಿಂದ ನಾನು ನನ್ನ ಲಿಪ್ ಫಿಲ್ಲರ್‌ಗಳನ್ನು ಕರಗಿಸಲು ನಿರ್ಧರಿಸಿದೆ. ಮುಖ್ಯ 2-3 ಗಂಟೆಗಳ ಕಾಲ ನೀವು ಸ್ವಾಭಾವಿಕವಾಗಿ ನೋವು ಅನುಭವಿಸಬಹುದು. (2-3 ವಾರಗಳ ನಂತರ, ನಾನು ಅವುಗಳನ್ನು ಮತ್ತೆ ಮಾಡುತ್ತೇನೆ ಎಂದು ವೈದ್ಯರು ಹೇಳಿದ್ದಾರೆ. ಅದು ತುಂಬಾ ನೋವಿನಿಂದ ಕೂಡಿತ್ತು ಎಂದು ಉರ್ಫಿ ಹೇಳಿಕೊಂಡಿದ್ದಾರೆ.
ಮತ್ತೆ ಲಿಪ್ ಫಿಲ್ಲರ್ ಹಾಕಿಸುತ್ತೇನೆ ಎಂದ ಉರ್ಫಿ
ಅಚ್ಚರಿ ಎಂದರೆ ಇಷ್ಟೆಲ್ಲಾ ಕಸರತ್ತಿನ ಬಳಿಕ ಉರ್ಫಿ ಲಿಪ್ ಫಿಲ್ಲರ್ ತಂಟೆಗೆ ಹೋಗಲ್ಲ ಎಂದು ಹೇಳಿಲ್ಲ. ಬದಲಿಗೆ ಕೆಲವು ದಿನಗಳ ಬಳಿಕ ಅವರು ಮತ್ತೆ ತುಟಿಗಳಿಗೆ ಫಿಲ್ಲರ್ ಮಾಡಿಸಲಿದ್ದಾರಂತೆ. ಆದರ ಈ ಬಾರಿ ನ್ಯಾಚುರಲ್ ಆಗಿ ಮಾಡಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಂತಿಮವಾಗಿ ತಮ್ಮ ತುಟಿಗಳಿಗೆ ಯಾವ ಸ್ಥಿತಿ ಬಂದಿದೆ ಎಂಬುದನ್ನು ಶೀಘ್ರವೇ ತಿಳಿಸುವುದಾಗಿ ಅವರು ಹೇಳಿದ್ದಾರೆ.
ಉರ್ಫಿ ಜಾವೇದ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ವಿಡಿಯೋ 8 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ.
Advertisement