ಸಲ್ಮಾನ್ ಖಾನ್ ಓಡದ ಕುದುರೆ ಅಂತ A6 ಚಿತ್ರ ಕೈಬಿಟ್ರಾ ಅಟ್ಲೀ; ಬಾಲಿವುಡ್ ಬಾದ್‌ಶಾ ಆಕ್ರೋಶಕ್ಕೆ ಪತರಗುಟ್ಟಿದ ಸೌತ್ ನಿರ್ದೇಶಕ!
'ಜವಾನ್' ನಿರ್ದೇಶಕ ಅಟ್ಲೀ ಅವರ ಮುಂಬರುವ ಆಕ್ಷನ್ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಆದರೆ ಈಗ ಸಲ್ಮಾನ್ ಖಾನ್ ಮತ್ತು ಅಟ್ಲೀ ಕುಮಾರ್ ಅವರ ಈ ಚಿತ್ರದ ಬಗ್ಗೆ ಒಂದು ಅಪ್‌ಡೇಟ್ ಹೊರಬಂದಿದೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಅಟ್ಲೀ ಕುಮಾರ್ ಅವರ ಈ ಆಕ್ಷನ್ ಚಿತ್ರದಲ್ಲಿ ರಜನಿಕಾಂತ್ ಸಲ್ಮಾನ್ ಖಾನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ರಜನಿಕಾಂತ್ ಚಿತ್ರದಿಂದ ನಿರ್ಗಮಿಸಿದ ನಂತರ, ಈ ಆಕ್ಷನ್ ಚಿತ್ರ A6 ಈಗ ನಿಂತುಹೋಗಿದೆ.
ಸಲ್ಮಾನ್ ಖಾನ್ ಮತ್ತು ಅಟ್ಲೀ ಕುಮಾರ್ ಅವರ ಚಿತ್ರ ಸ್ಥಗಿತಗೊಳ್ಳಲು ಹಲವು ಕಾರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಬಾಲಿವುಡ್ ಹಂಗಾಮಾದಿಂದ ಬಂದಿರುವ ವರದಿಯಲ್ಲಿ ಕೆಲವು ಹೊಸ ಮಾಹಿತಿಗಳನ್ನು ನೀಡಲಾಗಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಸಲ್ಮಾನ್ ಖಾನ್ ಮತ್ತು ರಜನಿಕಾಂತ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರೆ ಮೆಗಾ ಹಿಟ್ ಆಗಲಿದೆ ಎಂದು ವಿಮರ್ಶಕರು ಭವಿಷ್ಯ ನುಡಿದಿದ್ದರು. ಇನ್ನು ದಕ್ಷಿಣದ ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಲು ಉತ್ಸುಕತೆ ತೋರಿಸಿತ್ತು. ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿತ್ತು ಎನ್ನಲಾಗಿತ್ತು.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಜನಿಕಾಂತ್ ಚಿತ್ರದಿಂದ ಹೊರಬಂದಿದ್ದಾರೆ. ಇನ್ನು ಸಲ್ಮಾನ್ ಖಾನ್ಗೆ ಮೊದಲಿನಷ್ಟು ಬೇಡಿಕೆ ಇಲ್ಲ. ಅವರು ಗೆಲುವು ಕಾಣಲು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಅವರ ನಂಬಿ 600 ಕೋಟಿ ರೂಪಾಯಿ ಹೂಡಿಕೆ ಮಾಡೋದು ಎಂದರೆ ಅದು ದೊಡ್ಡ ರಿಸ್ಕ್. ಈ ಕಾರಣಕ್ಕೆ ಸನ್ ಪಿಕ್ಚರ್ಸ್ ಈ ಚಿತ್ರ ನಿರ್ಮಾಣದಿಂದ ಹೊರಬಂದಿದೆ ಎನ್ನಲಾಗಿದೆ. ಮತ್ತೊಂದೆಡೆ ಇದೇ ಚಿತ್ರವನ್ನು ಅಲ್ಲು ಅರ್ಜುನ್ ಗೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ವಿಚಾರ ತಿಳಿದು ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ. ಈ ವಿಷಯ ತಿಳಿದು ಅಟ್ಲೀ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿ ಕ್ಷಮೆಯಾಚಿಸಿದ್ದು 2026ರಲ್ಲಿ ಒಟ್ಟಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಜೊತೆಗೆ, ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಸಿಕಂದರ್' ನ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಒಂದು ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಈ ವರ್ಷದ ಈದ್‌ಗೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ