

ನವದೆಹಲಿ: ರಣವೀರ್ ಸಿಂಗ್ ನಟಿಸಿರುವ ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ₹300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿರುವ ಈ ಚಿತ್ರ ಗುರುವಾರ (ಮಾರ್ಚ್ 19) ಬಿಡುಗಡೆಯಾಗಿದ್ದು, ಇದು ಧಾರ್ ಅವರ 2025ರಲ್ಲಿ ಬಿಡುಗಡೆಯಾದ 'ಧುರಂಧರ್' ಚಿತ್ರದ ಮುಂದುವರಿದ ಭಾಗವಾಗಿದೆ.
ಈ ಚಿತ್ರವು ದಾಖಲೆಯ ಆರಂಭಿಕ ಪ್ರದರ್ಶನವನ್ನು ನೀಡಿದ್ದು, ಬುಧವಾರ ಪೇಯ್ಡ್ ಪ್ರಿವ್ಯೂಗಳಿಂದ ₹43 ಕೋಟಿ ಮತ್ತು ಮೊದಲ ದಿನ ₹102.55 ಕೋಟಿ ಗಳಿಸಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರದ ಸಂಗ್ರಹ ₹339.27 ಕೋಟಿ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರದ ಒಟ್ಟು ಸಂಗ್ರಹವು ₹404.54 ಕೋಟಿ ಆಗಿದೆ.
ಗ್ಯಾಂಗ್ ವಾರ್‌ಗಳು ಮತ್ತು ಹಿಂಸಾತ್ಮಕ ಟರ್ಫ್ ಕದನಗಳ ಇತಿಹಾಸ ಹೊಂದಿರುವ ಕರಾಚಿಯ ಲಿಯಾರಿ ಪಟ್ಟಣದಲ್ಲಿ ನೆಲೆಗೊಂಡಿರುವ 'ಧುರಂಧರ್', ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ ಮೇಲಿನ ದಾಳಿ ಮತ್ತು 26/11 ಮುಂಬೈ ದಾಳಿಯಂತಹ ಭೌಗೋಳಿಕ ರಾಜಕೀಯ ಮತ್ತು ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ರಹಸ್ಯ ಗುಪ್ತಚರ ಕಾರ್ಯಾಚರಣೆಗಳ ಸುತ್ತ ಸುತ್ತುತ್ತದೆ.
ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧಾರ್ ನಿರ್ಮಿಸಿದ ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
Advertisement