

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮುಂದುವರಿಸಿದೆ.
ಬಿಡುಗಡೆಯಾದ ಮೊದಲ ವಾರದಲ್ಲೇ ಜಾಗತಿಕವಾಗಿ 1,000 ಕೋಟಿ ರೂ. ಗಳಿಕೆಯ ಗಡಿ ದಾಟಿದ್ದ ಸಿನಿಮಾ, 11ನೇ ದಿನದ ಅಂತ್ಯಕ್ಕೆ ವಿಶ್ವಾದ್ಯಂತ 1,384.50 ಕೋಟಿ ರೂ. ಗಳಿಸಿದೆ.
ಈ ಮೂಲಕ 'ಧುರಂಧರ್ 2' ಚಿತ್ರದ ಒಟ್ಟು ಜಾಗತಿಕ ಗಳಿಕೆಯನ್ನೂ ಚಿತ್ರ ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಭಾರತದಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. Sacnilk ವರದಿಯ ಪ್ರಕಾರ, 11ನೇ ದಿನ ಭಾರತದಲ್ಲಿ 75 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ನಿವ್ವಳ ಗಳಿಕೆ 760.60 ಕೋಟಿ ರೂ. ತಲುಪಿದೆ. ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 909 ಕೋಟಿ ರೂ. ಆಗಿದೆ.
11ನೇ ದಿನ 75 ಕೋಟಿ ರೂ. ಗಳಿಕೆ
11ನೇ ದಿನದ ಗಳಿಕೆಯಲ್ಲಿ ಹಿಂದಿ ಆವೃತ್ತಿಯೇ ಸಿಂಹಪಾಲು ಪಡೆದಿದೆ. 18,536 ಪ್ರದರ್ಶನಗಳ ಮೂಲಕ 55 ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 919 ಪ್ರದರ್ಶನಗಳಿಂದ 5.75 ಕೋಟಿ ರೂ., ತಮಿಳಿನಲ್ಲಿ 1,146 ಪ್ರದರ್ಶನಗಳಿಂದ 5 ಕೋಟಿ ರೂ. ಹಾಗೂ ಮಲಯಾಳಂನಲ್ಲಿ 5 ಕೋಟಿ ರೂ. ಗಳಿಸಿದೆ. ತೆಲುಗು ಆವೃತ್ತಿಯಿಂದ 4.75 ಕೋಟಿ ರೂ. ಆದಾಯ ಬಂದಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. 11ನೇ ದಿನ ವಿದೇಶಗಳಲ್ಲಿ 40 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, ಒಟ್ಟು ವಿದೇಶಿ ಗಳಿಕೆ 475.50 ಕೋಟಿ ರೂ.ಗೆ ಏರಿಕೆಯಾಗಿದೆ. ಇದರಿಂದ ಚಿತ್ರದ ಜಾಗತಿಕ ಒಟ್ಟು ಗಳಿಕೆ 1,384.50 ಕೋಟಿ ರೂ. ತಲುಪಿದೆ.
'ಧುರಂಧರ್ 2' ದಾಖಲೆ ಹಿಂದಿಕ್ಕಿದ 'ರಾಮಾಯಣ'
11ನೇ ದಿನದ ಜಾಗತಿಕ ಗಳಿಕೆಯಲ್ಲಿ 'ರಾಮಾಯಣ' ಸಿನಿಮಾ 'ಧುರಂಧರ್ 2' ಅನ್ನು ಹಿಂದಿಕ್ಕಿದೆ. 'ಧುರಂಧರ್ 2' ಚಿತ್ರವು 11ನೇ ದಿನ 18 ಕೋಟಿ ರೂ. ಗಳಿಸಿತ್ತು. ಆ ಚಿತ್ರದ ಒಟ್ಟು ವಿದೇಶಿ ಗಳಿಕೆ 341 ಕೋಟಿ ರೂ. ಆಗಿದ್ದು, ಜಾಗತಿಕ ಒಟ್ಟು ಗಳಿಕೆ 1,354.92 ಕೋಟಿ ರೂ. ತಲುಪಿತ್ತು. ಈ ಅಂಕಿಅಂಶಗಳ ಪ್ರಕಾರ 'ರಾಮಾಯಣ' ಈಗ ಅದಕ್ಕಿಂತ ಹೆಚ್ಚಿನ ಗಳಿಕೆ ದಾಖಲಿಸಿದೆ.
2ನೇ ವಾರಾಂತ್ಯದಲ್ಲಿ ಭರ್ಜರಿ ಏರಿಕೆ
ಚಿತ್ರದ ಎರಡನೇ ವಾರಾಂತ್ಯದ ಗಳಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಹಿಂದಿ ಆವೃತ್ತಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, 'ರಾಮಾಯಣ' ಹಿಂದಿ ಆವೃತ್ತಿ ಎರಡನೇ ಶನಿವಾರದಂದು 500 ಕೋಟಿ ರೂ. ಗಳಿಕೆಯ ಗಡಿ ದಾಟಿದೆ. ಭಾನುವಾರ 600 ಕೋಟಿ ರೂ. ಮೈಲಿಗಲ್ಲನ್ನೂ ತಲುಪುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಶನಿವಾರದ ಗಳಿಕೆಗಿಂತ 2ನೇ ಶನಿವಾರದ ಗಳಿಕೆ ಹೆಚ್ಚಾಗಿದೆ. ಉತ್ತಮ ಮೌಖಿಕ ಪ್ರಚಾರದಿಂದಾಗಿ ಎರಡನೇ ವಾರಾಂತ್ಯದಲ್ಲಿ ಚಿತ್ರಕ್ಕೆ ಹೆಚ್ಚಿನ ಪ್ರೇಕ್ಷಕರು ಬರುತ್ತಿದ್ದಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
8 ದಿನದಲ್ಲೇ 1,000 ಕೋಟಿ ರೂ. ಕ್ಲಬ್ ಸೇರಿದ ಸಿನಿಮಾ
ಬಿಡುಗಡೆಯಾದ ಕೇವಲ ಎಂಟು ದಿನಗಳಲ್ಲಿ ಜಾಗತಿಕವಾಗಿ 1,000 ಕೋಟಿ ರೂ. ಗಳಿಕೆ ಮಾಡಿದ 'ರಾಮಾಯಣ', ಈ ಸಾಧನೆ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ 'ದಂಗಲ್', 'ಬಾಹುಬಲಿ 2', 'ಪುಷ್ಪ 2', 'ಧುರಂಧರ್ 2', 'ಆರ್‌ಆರ್‌ಆರ್', 'ಕೆಜಿಎಫ್ 2', 'ಜವಾನ್', 'ಪಠಾಣ್' ಹಾಗೂ 'ಕಲ್ಕಿ 2898 ಎಡಿ' ಚಿತ್ರಗಳಿವೆ.
'ಬಾಹುಬಲಿ 2' ಚಿತ್ರಕ್ಕೆ ಈ ಮೈಲಿಗಲ್ಲು ತಲುಪಲು ಸುಮಾರು 10ರಿಂದ 11 ದಿನಗಳು ಬೇಕಾಗಿದ್ದವು. ಆದರೆ 'ಧುರಂಧರ್ 2' ಮತ್ತು 'ಪುಷ್ಪ 2' ಕೇವಲ ಏಳು ದಿನಗಳಲ್ಲೇ 1,000 ಕೋಟಿ ರೂ. ಗಳಿಕೆ ಮಾಡಿದ್ದವು.
ಈ ಸಾಧನೆಯೊಂದಿಗೆ ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ 1,000 ಕೋಟಿ ರೂ. ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ 'ರಾಮಾಯಣ' ಪಾತ್ರವಾಗಿದೆ. ಈಗಾಗಲೇ ಅವರ 'ಅನಿಮಲ್' ಚಿತ್ರದ ಜೀವಮಾನದ ಜಾಗತಿಕ ಗಳಿಕೆಯನ್ನೂ 'ರಾಮಾಯಣ' ಹಿಂದಿಕ್ಕಿದೆ ಎಂದು ವರದಿಯಾಗಿದೆ.