'ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ': ನಟಿ ತನುಶ್ರೀ ದತ್ತಾ ಟೀಕೆಗಳಿಗೆ ಮೌನ ಮುರಿದ ನಾನಾ ಪಾಟೇಕರ್ ಪುತ್ರ ಮಲ್ಹಾರ್!

ನಟಿ ಮತ್ತು ಮಾಜಿ 'ಮಿಸ್ ಇಂಡಿಯಾ ಯೂನಿವರ್ಸ್' ತನುಶ್ರೀ ದತ್ತಾ, 2009ರ 'ಹಾರ್ನ್ 'ಓಕೆ' ಪ್ಲೀಸ್' (Horn 'Ok' Pleassss) ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು.
Tanushree Dutta - Malhar Patekar
ತನುಶ್ರೀ ದತ್ತಾ - ಮಲ್ಹಾರ್ ಪಾಟೇಕರ್
Updated on: 

ನವದೆಹಲಿ: 2018ರಲ್ಲಿ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದಂತೆ, ಇದೀಗ ಮತ್ತೆ ಚರ್ಚೆಗಳು ಹುಟ್ಟಿಕೊಂಡಿದ್ದು, ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಪ್ರತಿಕ್ರಿಯಿಸಿದ್ದಾರೆ.

ಈ ವಿಷಯವು ಕಾನೂನುಬದ್ಧವಾಗಿ ಬಗೆಹರಿದಿದೆ. ಇದನ್ನೇಕೆ ಮತ್ತೆ ಮುನ್ನೆಲೆಗೆ ತರಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಅಕ್ಟೋಬರ್ 8 ರಂದು ಗೋವಾದಲ್ಲಿ ನಾನಾ ಪಾಟೇಕರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದ ನಂತರ, ತನುಶ್ರೀ ದತ್ತಾ ಅವರು ಆರೋಪಗಳು ಬೆಳಕಿಗೆ ಬಂದಾಗಿನಿಂದಲೂ ತಮಗೆ ಬೆದರಿಕೆ ಸೇರಿದಂತೆ ಹಲವು ರೀತಿಯ ತೊಂದರೆಗಳು ಎದುರಾಗಿವೆ ಎಂದು ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.

'ಹಿಂದೂಸ್ತಾನ್ ಟೈಮ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ ಮಲ್ಹಾರ್, ತನುಶ್ರೀ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ ಈ ವಿವಾದದ ಕುರಿತು ಮಾತನಾಡಿದರು.

'ಯಾರ ಹೆಸರನ್ನೂ ಪ್ರಸ್ತಾಪಿಸದೆ ನಾನು ಹೇಳುವುದೇನೆಂದರೆ, ಜನರು ಅನಗತ್ಯವಾಗಿ ಎತ್ತುತ್ತಿರುವ ಪ್ರಕರಣವು ಈಗಾಗಲೇ ಮುಗಿದುಹೋಗಿದೆ. ನ್ಯಾಯಾಂಗವು ಅವರಿಗೆ ಕ್ಲೀನ್ ಚಿಟ್ ನೀಡಿದೆ, ಪ್ರಕರಣ ಮುಗಿದಿದೆ, ಆದರೂ ಜನರು ಇನ್ನೂ ಮಾತನಾಡುತ್ತಲೇ ಇದ್ದಾರೆ. ಅಂತಹ ಜನರಿಗೆ ನಾನು ಏನನ್ನೂ ಹೇಳುವುದಿಲ್ಲ; ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ' ಎಂದಿದ್ದಾರೆ.

Tanushree Dutta - Malhar Patekar
'Evil Dead': ನಾನಾ ಪಾಟೇಕರ್ ಸಾವು; #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಆರೋಪಗಳು

ನಟಿ ಮತ್ತು ಮಾಜಿ 'ಮಿಸ್ ಇಂಡಿಯಾ ಯೂನಿವರ್ಸ್' ತನುಶ್ರೀ ದತ್ತಾ, 2009ರ 'ಹಾರ್ನ್ 'ಓಕೆ' ಪ್ಲೀಸ್' (Horn 'Ok' Pleassss) ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಬೆದರಿಸಿದ್ದಾರೆ ಎಂದು ಆರೋಪಿಸಿದ್ದರು. 2018ರಲ್ಲಿ ಅವರು ಮಾಡಿದ ಈ ಆರೋಪಗಳು, ಭಾರತದ '#MeToo' ಚಳುವಳಿಯಲ್ಲಿ ಪ್ರಮುಖವಾಗಿದ್ದವು.

ನಾನಾ ಪಾಟೇಕರ್ ಈ ಆರೋಪಗಳನ್ನು ನಿರಾಕರಿಸಿದರು. 2018ರಲ್ಲಿ ನಟನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2019ರಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲಾಯಿತು.

ನಾನಾ ಪಾಟೇಕರ್ ಅವರ ನಿಧನದ ನಂತರ ತನುಶ್ರೀ ಆರಂಭದಲ್ಲಿ ತಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ಹೇಳಿದರು. ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡು, 2018ರ ಘಟನೆಗಳು ತಮ್ಮ ಜೀವನದ ಮೇಲೆ ಬೀರಿದ ಪರಿಣಾಮದ ಬಗ್ಗೆ ಮಾತನಾಡಿದರು.

'#MeToo ಚಳುವಳಿಯ ನಂತರ ನಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬುದು ಜನರಿಗೆ ತಿಳಿದಿಲ್ಲ. ವಾರಕ್ಕೆ ಐದು ದಿನ ವ್ಯಾಯಾಮ ಮಾಡುತ್ತಿದ್ದ, ಜಗತ್ತಿನಾದ್ಯಂತ ನಿರ್ಭಯವಾಗಿ ಓಡಾಡುತ್ತಿದ್ದ, ಭದ್ರತೆಯ ಬಗ್ಗೆ ಯಾವುದೇ ಚಿಂತೆಯಿಲ್ಲದೆ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಲ್ಲವಳಾಗಿದ್ದ ನಾನು... #ಮೀಟೂ ನಂತರ ನನ್ನೊಂದಿಗೆ ಅಂತಹ ಘಟನೆಗಳು ನಡೆದಿವೆ. ಅವುಗಳನ್ನು ಇಲ್ಲಿ ಇನ್‌ಸ್ಟಾಗ್ರಾಂನಲ್ಲಿ ವಿವರಿಸಲು ಕೂಡ ಸಾಧ್ಯವಿಲ್ಲ. ಅವುಗಳನ್ನು ಕೇಳಿದರೆ ನಾಚಿಕೆಯಿಂದ ನಿಮ್ಮ ಮುಖವೇ ಕೆಂಪಾಗುತ್ತದೆ. ನನ್ನೊಂದಿಗೆ ಏನೆಲ್ಲ ನಡೆದಿದೆ ಎಂಬುದು ಜನರಿಗೆ ತಿಳಿದಿಲ್ಲ' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

'2024ರಲ್ಲಿ, ಯಾರೋ ನನ್ನ ಕಾರಿನ ಬ್ರೇಕ್‌ಗಳನ್ನು ಕತ್ತರಿಸಿದ್ದರು. #MeToo ಚಳುವಳಿಯ ನಂತರ ದುಷ್ಕರ್ಮಿಗಳು ನಾನು ಹೋಗುವಲ್ಲೆಲ್ಲ ನನ್ನನ್ನು ಹಿಂಬಾಲಿಸುತ್ತಿದ್ದರು' ಎಂದು ಅವರು ಹೇಳಿದರು.

ನಾನಾ ಪಾಟೇಕರ್ ಅವರೊಂದಿಗೆ ನಡೆದ ಘಟನೆ ನಡೆದಾಗ ತಮಗೆ ಕೇವಲ 24 ವರ್ಷ ವಯಸ್ಸಾಗಿತ್ತು ಎಂದು ಆ ನಟಿ ಆರೋಪಿಸಿದ್ದಾರೆ.

ನಾನಾ ಪಾಟೇಕರ್ ಅವರ ಸಾವಿನ ನಂತರ, ಇನ್‌ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ 'ಎವಿಲ್ ಡೆಡ್' (evil dead) ಎಂಬ ಪದವನ್ನು ಬಳಸಿದ್ದಕ್ಕಾಗಿ ತನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೂ ಗುರಿಯಾದರು. ಅವರ ಈ ಹೇಳಿಕೆ ಆನ್‌ಲೈನ್‌ನಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಯಿತು.

ಭಾರತೀಯ ಚಿತ್ರರಂಗದಲ್ಲಿ ದಶಕಗಳ ಕಾಲ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದ ನಾನಾ ಪಾಟೇಕರ್, ಅಕ್ಟೋಬರ್ 8 ರಂದು ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

Tanushree Dutta - Malhar Patekar
'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com