ಬಿಡುಗಡೆಗೂ ಮುನ್ನ ಮುಂಗಡ ಬುಕಿಂಗ್‌ನಲ್ಲಿ ₹5 ಕೋಟಿ ಗಳಿಸಿದ 'Ramayana'; ಕನ್ನಡ ಆವೃತ್ತಿ ₹27.11 ಲಕ್ಷ ಗಳಿಕೆ, ಮುಂಬೈನಲ್ಲಿ ಟಿಕೆಟ್ ದರ ₹2,770ಕ್ಕೆ ಏರಿಕೆ!

'ರಾಮಾಯಣ'ವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಯೋಜಿಸಲಾಗಿದೆ. ಮೊದಲ ಭಾಗವು ಈ ವರ್ಷದ ನವೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು ಮುಂದಿನ ವರ್ಷ ಬಿಡುಗಡೆಯಾಗಲಿದೆ.
Ramayana Movie Still
ರಾಮಾಯಣ ಚಿತ್ರದ ಸ್ಟಿಲ್
Updated on: 

ನವದೆಹಲಿ: ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಪೌರಾಣಿಕ ಮಹಾಕಾವ್ಯ 'ರಾಮಾಯಣ'ವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನವೆಂಬರ್ 5 ರಂದು ಬಿಡುಗಡೆಯಾಗಲಿರುವ ಈ ಚಿತ್ರವು, ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಗಮನ ಸೆಳೆಯಲು ಪ್ರಾರಂಭಿಸಿದೆ. ಬುಧವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ, 'ರಾಮಾಯಣ' ಚಿತ್ರವು ಭಾರತದಾದ್ಯಂತ ಮುಂಗಡ ಬುಕಿಂಗ್‌ಗಳ ಮೂಲಕ ₹5.35 ಕೋಟಿ ಗಳಿಕೆ ಕಂಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ 'Sacnilk' ವರದಿ ಮಾಡಿರುವಂತೆ, ಇದುವರೆಗೆ 3,542 ಪ್ರದರ್ಶನಗಳಿಗೆ ಒಟ್ಟು 91,125 ಟಿಕೆಟ್‌ಗಳು ಮಾರಾಟವಾಗಿವೆ. 'ರಾಮಾಯಣ'ದ ಮುಂಗಡ ಬುಕಿಂಗ್ ಸಂಗ್ರಹದಲ್ಲಿ ಹಿಂದಿ ಆವೃತ್ತಿಯ ಪಾಲು ಅತ್ಯಧಿಕವಾಗಿದ್ದು, ಇದು ₹5.07 ಕೋಟಿ, ಅಂದರೆ ಒಟ್ಟು ಮೊತ್ತದ ಸುಮಾರು ಶೇ 95 ರಷ್ಟನ್ನು ಗಳಿಸಿದೆ.

ಡಬ್ ಮಾಡಲಾದ ಆವೃತ್ತಿಗಳ ಪೈಕಿ, ಕನ್ನಡ ಆವೃತ್ತಿಯು ₹27.11 ಲಕ್ಷ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ; ನಂತರದ ಸ್ಥಾನದಲ್ಲಿರುವ ತೆಲುಗು ಆವೃತ್ತಿಯು ₹48,700 ಸಂಗ್ರಹಿಸಿದೆ. ಸದ್ಯ ಈ ಚಿತ್ರದ ಒಟ್ಟಾರೆ ಆಕ್ಯುಪೆನ್ಸಿ (ಪ್ರೇಕ್ಷಕರ ಹಾಜರಾತಿ) ಪ್ರಮಾಣವು ಶೇ 12ರಷ್ಟಿದೆ.

'ರಾಮಾಯಣ' ಚಿತ್ರದ ಮುಂಗಡ ಬುಕಿಂಗ್‌ನಲ್ಲಿ ದೆಹಲಿ-ಎನ್‌ಸಿಆರ್ ಮುಂಚೂಣಿಯಲ್ಲಿದ್ದು, ಇಲ್ಲಿಯವರೆಗೆ 19,607 ಟಿಕೆಟ್‌ಗಳ ಮಾರಾಟದ ಮೂಲಕ ₹1.50 ಕೋಟಿ ಸಂಗ್ರಹವಾಗಿದೆ. ಮುಂಬೈ ನಂತರದ ಸ್ಥಾನದಲ್ಲಿದ್ದು, 15,671 ಟಿಕೆಟ್‌ಗಳ ಮಾರಾಟದಿಂದ ₹1.08 ಕೋಟಿ ಗಳಿಸಿದೆ. ಮುಂಗಡ ಬುಕಿಂಗ್‌ನಲ್ಲಿ ಪುಣೆ (4,474 ಟಿಕೆಟ್‌ಗಳಿಂದ ₹29.65 ಲಕ್ಷ), ಅಹಮದಾಬಾದ್ (3,383 ಟಿಕೆಟ್‌ಗಳಿಂದ ₹28.32 ಲಕ್ಷ) ಮತ್ತು ಕೋಲ್ಕತ್ತಾ (4,393 ಟಿಕೆಟ್‌ಗಳಿಂದ ₹23.65 ಲಕ್ಷ) ಸೇರಿವೆ.

Ramayana Movie Still
ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್ ನಟನೆಯ 'ರಾಮಾಯಣ' ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸುವೇಂದು ಅಧಿಕಾರಿ!

ಮುಂಬೈನ ಲೋವರ್ ಪರೇಲ್‌ನಲ್ಲಿರುವ PVR ಐಕಾನ್: ಫೀನಿಕ್ಸ್ ಪಲ್ಲಾಡಿಯಂನಲ್ಲಿ IMAX 3D ಪ್ರದರ್ಶನಕ್ಕಾಗಿ ದುಬಾರಿ ಬೆಲೆಯಲ್ಲಿ ಟಿಕೆಟ್‌ಗಳು ಮಾರಾಟವಾಗಿವೆ. ಇದು ಭಾರತದಾದ್ಯಂತ ಅತ್ಯಂತ ದುಬಾರಿ ಟಿಕೆಟ್‌ಗಳಾಗಿವೆ. BookMyShow ಪ್ರಕಾರ, ನವೆಂಬರ್ 5 ಮತ್ತು 6 ರಂದು ಸಂಜೆ 6.55 ಮತ್ತು ರಾತ್ರಿ 11ರ ಶೋಗೆ ರೆಕ್ಲೈನರ್ ಸೀಟುಗಳ ಬೆಲೆ ₹2,770 ಆಗಿದೆ. ನಗರದಲ್ಲಿ ಮೊದಲ ಪ್ರದರ್ಶನವನ್ನು ವಡಾಲಾದ ಮಿರಾಜ್ ಸಿನಿಮಾಸ್: IMAX ನಲ್ಲಿ ಬೆಳಿಗ್ಗೆ 6.45ಕ್ಕೆ ನಿಗದಿಪಡಿಸಲಾಗಿದೆ. BKCಯ ಮೈಸನ್ INOX: ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ರಾತ್ರಿ 11.45ಕ್ಕೆ ಕೊನೆಯ ಪ್ರದರ್ಶನ ನಿಗದಿಯಾಗಿದೆ.

'ರಾಮಾಯಣ'ವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ಯೋಜಿಸಲಾಗಿದೆ. ಇದರ ಮೊದಲ ಭಾಗವು ಈ ವರ್ಷದ ನವೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು ಮುಂದಿನ ವರ್ಷ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com