ಚಾರ್‌ಮಿನಾರ್ ಚಂದ್ರು 5ನೇ ಶಿಖರ

ಚಾರ್‌ಮಿನಾರ್ ಚಂದ್ರು 5ನೇ ಶಿಖರ
Updated on: 

ಚಂದ್ರು ನಿರ್ದೇಶನದ ಐದನೇ ಸಿನಿಮಾ ಇಂದು (ಫೆ.8) ತೆರೆ ಕಾಣುತ್ತಿದೆ. ನಿನ್ನೆಯಷ್ಟೇ ಬರ್ತ್‌ಡೆ ಆಚರಿಸಿಕೊಂಡಿರುವ ಚಂದ್ರುಗೆ ಜನ್ಮದಿನದ ಭರ್ಜರಿ ಉಡುಗೊರೆಯೇ ಸಿಕ್ಕಿದೆ. ಅದು ಏನು ಗೊತ್ತಾ? ಬಿಡುಗಡೆಗೆ ಮುನ್ನವೇ ತಮಿಳು, ತೆಲುಗಿಗೆ ರೀಮೇಕ್ ಆಗುತ್ತಿದೆ 'ಚಾರ್‌ಮಿನಾರ್‌'. ಅದು ಚಂದ್ರು ಎಂಬ ಕನ್ನಡದ ಛಲವಂತ ಹುಡುಗನ ಪ್ರತಿಭೆ, ತಾಕತ್ತು.

ಕೇಶಾವರದ ಆರ್.ಚಂದ್ರು ನಿರ್ದೇಶನದ ಸಿನಿಮಾ ಎಂದರೆ ಪ್ರೇಕ್ಷಕರಷ್ಟೇ ಅಲ್ಲ, ಗಾಂಧಿನಗರದವರಿಗೂ ಒಂದಷ್ಟು ಕುತೂಹಲ. ಬಿಡುಗಡೆ ದಿನ ಘೋಷಣೆಯಾಗುತ್ತಿದ್ದಂತೆ ಚಿತ್ರದ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ಕೂಡ ಶುರುವಾಗುತ್ತದೆ. ನೈಜ ಘಟನೆಗಳನ್ನೇ ಕಥಾ ವಸ್ತುವಾಗಿ ಆರಿಸಿಕೊಳ್ಳುವುದು, ಅದಕ್ಕೆ ತಕ್ಕಂತೆ ನವಿರು ನಿರೂಪಣೆ ಅವರ ವಿಶೇಷ. ಕುರುಚಲು ಗಡ್ಡ, ಹಣೆಯಲ್ಲಿ ಕುಂಕುಮದ 'ಟ್ರೇಡ್‌ಮಾರ್ಕ್‌'ನ ಚಂದ್ರು ಈ ಸಲ 'ಚಾರ್‌ಮಿನಾರ್‌' ಮೂಲಕ ಭಾರೀ ಸದ್ದನ್ನೇ ಮಾಡುತ್ತಿದ್ದಾರೆ.
ತೆರೆ ಕಾಣುವ ಮುನ್ನವೇ ಪಕ್ಕದ ತಮಿಳು, ತೆಲುಗುಗಳಲ್ಲಿಯೂ ಈ ಸಿನಿಮಾ ಸುದ್ದಿ ಮಾಡುತ್ತಿದೆ. ಉಭಯ ಭಾಷೆಗಳಿಗೆ ರೀಮೇಕ್ ಆಗುತ್ತಿರುವುದು ಮಾತ್ರವಲ್ಲ, ತೆಲುಗಿನಲ್ಲಿ ನಾಗಾರ್ಜುನ ಪುತ್ರ ನಾಗಚೈತನ್ಯ ನಾಯಕ ಎನ್ನುವುದು ಬಹುತೇಕ ನಿಶ್ಚಯವಾಗಿದೆ. 'ಪಯ್ಯಾ' ಖ್ಯಾತಿಯ ತಮಿಳು ನಿರ್ದೇಶಕ ಲಿಂಗಸ್ವಾಮಿ ಅವರಂತೂ 'ಎಲ್ಲಿಯೂ ಚಾರ್‌ಮಿನಾರ್ ತೋರಿಸದೇ ಪ್ರೇಮಕಥೆ ಹೆಣೆದಿದ್ದೀಯ. ನೋಡಿದ ಪ್ರತಿಯೊಬ್ಬರಿಗೂ ಇದು ನಮ್ಮ ಸಿನಿಮಾ ಅನ್ನೋ ಭಾವನೆ ಬರುತ್ತೆ' ಎಂದು ಬೆನ್ನು ತಟ್ಟಿದ್ದಾರೆ. 'ಚಾರ್‌ಮಿನಾರ್‌' ಮೂಲಕವೇ ನಿರ್ಮಾಪಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಂದ್ರುಗೆ ಎಲ್ಲವೂ ಶುಭಶಕುನದಂತೆಯೇ ತೋರುತ್ತಿದೆ.

'ಮೈಲಾರಿ'ಯಲ್ಲಿ ತಮ್ಮದೇ ಬದುಕಿನ ಎಳೆ ಇಟ್ಟುಕೊಂಡಿದ್ದರು. ಇಲ್ಲಿಯೂ ಹಾಗೆಯೇ. ತಾವು ಓದಿದ ಶಿಡ್ಲಘಟ್ಟದ ಸರಸ್ವತಿ ಕಾನ್ವೆಂಟ್‌ನಲ್ಲಿ ಎರಡು ವರ್ಷ ಹಿಂದೆ ಹಳೆ ವಿದ್ಯಾರ್ಥಿಗಳ ಸಮಾರಂಭದಲ್ಲಿ ಗೆಳೆಯನೊಬ್ಬ ಹಂಚಿಕೊಂಡ ಪ್ರೇಮಕಥೆಯನ್ನೇ 'ಚಾರ್‌ಮಿನಾರ್‌' ಮಾಡಿದ್ದಾರೆ. ಅಂದು ಭಾವುಕರಾಗಿ, 'ಯಾರ್ಯಾರನ್ನೋ ಏನೇನೋ ಮಾಡಿ ತಾವು ಮಾತ್ರ ತಾವಾಗಿಯೇ ಇರುವ ಏಕೈಕ ವ್ಯಕ್ತಿ ಎಂದರೆ ಗುರು' ಎಂದು ಕಣ್ಣೀರಿಟ್ಟಿದ್ದವರು ಈ ಸಿನಿಮಾವನ್ನು ಕರುನಾಡಿನ ಸಮಸ್ತ ಗುರುವೃಂದಕ್ಕೆ ಅರ್ಪಿಸಿದ್ದಾರೆ.
ಹಿಂದಿನ ಚಿತ್ರಗಳಂತೆ ಇದೂ ಪ್ರೇಮಕಥೆಯೇ. ಆದರೆ, 'ಪ್ರೀತಿ ಮಾಡೋದಿದ್ರೆ ಚಾರ್‌ಮಿನಾರ್ ಸಿನಿಮಾ ಥರ ಮಾಡ್ಬೇಕು' ಅನ್ನೋ ಕ್ರೇಜ್ ಹುಟ್ಟಿಕೊಳ್ಳುತ್ತೆ ಅನ್ನೋದು ಚಂದ್ರು ನಂಬಿಕೆ. 'ಸ್ಕೂಲ್‌ಡೇಸ್‌ನಲ್ಲಿ ಲವ್ ಮಾಡಿ ಮಿಸ್ ಮಾಡ್ಕೊಂಡಿರೋ ಹುಡುಗೀನ ನನ್ ಸಿನಿಮಾದಲ್ಲಿ ಹುಡುಕಿ ಕೊಡ್ತೀನಿ', 'ಕರೆಕ್ಟಾಗಿ ಹಾರ್ಟ್ ಮುಟ್ಕೊಂಡು ಹೇಳಿ, ನೀವು ಎಷ್ಟು ಹುಡುಗೀರಿಗೆ ಡವ್ ಹೊಡೆದಿಲ್ಲ', 'ಒಮ್ಮೆ ಒಬ್ಬನ್ನ ಪ್ರೀತಿಸಿದ್ರೆ ನನ್ಮಗಂದು ಕುಷ್ಠ ರೋಗ ಬಂದ್ರೂ ಅವನ್ನೇ ಪ್ರೀತಿಸ್ಬೇಕು' ಅನ್ನೋ ಹಾರ್ಟ್ ಟಚಿಂಗ್ ಘೋಷಣೆಗಳು ಅವರ ಪೋಸ್ಟರ್‌ನಲ್ಲಿ ಎದ್ದುಕಾಣುತ್ತಿವೆ. ಅವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುತ್ತವೆ ಅನ್ನೋ ವಿಶ್ವಾಸದಲ್ಲಿದ್ದಾರೆ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಆರ್. ಚಂದ್ರು ಕೇಶಾವರ.
ಧೈರ್ಯವೇ ಬಂಡವಾಳ
2011ರ ಕೊನೆಯಲ್ಲಿ ಶಿಢ್ಲಘಟ್ಟದ ಶಾಲಾ ಸಮಾರಂಭದಲ್ಲಿ 'ನನ್ನ ಮುಂದಿನ ಸಿನಿಮಾ ಚಾರ್‌ಮಿನಾರ್, ಅದಕ್ಕೆ ಕಥೆಯೂ ಇಲ್ಲೇ ಸಿಕ್ಕಿದೆ' ಎಂದು ಘೋಷಿಸಿದ್ದರು ಚಂದ್ರು. ಕಥೆಗೆ ಸಲ್ಲಬೇಕಾದ ಸಂಭಾವನೆಯನ್ನು ಆ ವೇದಿಕೆಯಲ್ಲಿಯೇ ಶಾಲೆಗೆ ನೀಡಿದ್ದರು. ಗೆಳೆಯ ಎಸ್.ಮಂಜುನಾಥ್ ಸಿನಿಮಾ ನಿರ್ಮಾಣಕ್ಕೆ ಒಪ್ಪಿದರು. ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ನಿಲ್ಲಿಸುವ ಪರಿಸ್ಥಿತಿ ಬಂತು. ಧೈರ್ಯ ಮಾಡಿದ ಚಂದ್ರು, ಅವರು ಖರ್ಚು ಮಾಡಿದಷ್ಟು ಹಣ ಪಾವತಿಸಿ ತಾವೇ ನಿರ್ಮಾಣದ ಹೊಣೆ ಹೊತ್ತರು. ಹನ್ನೊಂದು ವರ್ಷ ಹಿಂದೆ ಬರಿಗೈಲಿ ಬೆಂಗಳೂರಿಗೆ ಬಂದ ಹುಡುಗ, ತನ್ನ 33ನೇ ವಯಸ್ಸಿನಲ್ಲಿ ನಿರ್ಮಾಪಕನ ಹಣೆಪಟ್ಟಿ ಹೊತ್ತಿದ್ದು ಹೀಗೆ.

ಚಾರ್‌ಮಿನಾರ್ ಸಿನಿಮಾ ತಾಜ್‌ಮಹಲ್‌ನ ಮುಂದುವರಿದ ಭಾಗ ಎನ್ನುವ ಊಹೆ ಹುಟ್ಟಿಕೊಂಡಿದೆ. ಅದಕ್ಕೂ, ಇದಕ್ಕೂ ಸಂಬಂಧವಿಲ್ಲ. ಇದು ಅದಕ್ಕಿಂತ ಭಿನ್ನವಾದ, ವಿಶಿಷ್ಟ ಪ್ರೇಮಕಥೆಯ ಚಿತ್ರ.
- ಆರ್.ಚಂದ್ರು

-ರಾಜೇಶ್ ಮುಂಡಿಗೇಸರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com