

ಕೊಂಚ ಹುಷಾರಾಗಿರಿ. 'ಟೋಪಿವಾಲಾ' ಬರುತ್ತಿದ್ದಾನೆ! ಉಪೇಂದ್ರ ನಿರ್ದೇಶನದ ಮತ್ತೊಂದು ಸಿನಿಮಾಕ್ಕೆ ಕೆಲಕಾಲ ಕಾಯಬೇಕು ನಿಜ. ಆದರೆ ಈ ಚಿತ್ರದಲ್ಲಿ ಉಪೇಂದ್ರ ಝಲಕ್ ಅನ್ನು ಖಂಡಿತಾ ನಿರೀಕ್ಷಿಸಬಹುದು. ಅವರ ನಿರ್ದೇಶನದ ಸಿನಿಮಾ ಅಲ್ಲದಿದ್ದರೂ, ಕಥೆ ಮತ್ತು ಚಿತ್ರಕಥೆ ಬರೆದಿರುವವರು ಅವರೇ.
ನಿರ್ದೇಶಕ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್.ಜೆ. ಶ್ರೀನಿ ಸಂಭಾಷಣೆ ಬರೆದಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಉಪ್ಪಿ ಸ್ಟೈಲ್ ಕಮೆಂಟ್ ಇದೆ; ಸಖತ್ ಕಿಕ್ ಕೊಡೋ ಡೈಲಾಗ್‌ಗಳಿವೆ ಎನ್ನುವುದು ಚಿತ್ರತಂಡದ ಮಾತು.
ಹೆಚ್ಚು ದಿನ ಕಾಯಬೇಕಿಲ್ಲ. ಚಿತ್ರದ ಹಾಡುಗಳು ಮಾರುಕಟ್ಟೆಗೆ ಬಂದಿವೆ ಅಂದರೆ ಸಿನಿಮಾ ಬಿಡುಗಡೆ ದಿನ ಸಮೀಪದಲ್ಲಿದೆ ಎಂದೇ ಅರ್ಥ. ಮಾರ್ಚ್ 1 ಅಥವಾ 7ನೇ ತಾರೀಖಿನಂದು ತೆರೆ ಕಾಣಿಸಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ ನಿರ್ಮಾಪಕರು. ಪೂರ್ವಭಾವಿಯಾಗಿ ಪ್ರೇಮಿಗಳ ದಿನದ ಮುನ್ನಾದಿನ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿರುವ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹಾಡುಗಳ ಸಿ.ಡಿ ಬಿಡುಗಡೆಯಾಗಿದೆ. ಆಡಿಯೋ ಮಾರುಕಟ್ಟೆಯಲ್ಲಿ 'ಟೋಪಿವಾಲಾ'ನ ಸದ್ದು ಶುರುವಾಗಿದೆ. ಫೆ.23ಕ್ಕೆ ಕನಕಪುರದಲ್ಲಿ ಅದ್ಧೂರಿ ಸಮಾರಂಭದಲ್ಲಿ ಮತ್ತೊಮ್ಮೆ ಬಿಡುಗಡೆ ಮಾಡುವ ಆಲೋಚನೆಯೂ ನಿರ್ಮಾಪಕರಿಗೆ ಇದೆ.
'ಟೋಪಿವಾಲಾ ಶಾಂಗ್ರೀಲಾ' ಹಾಡನ್ನು ಯೂಟ್ಯೂಬ್‌ನಲ್ಲಿ ಬಿಟ್ಟಿದ್ದಾರೆ ನಿರ್ದೇಶಕರು. ಮೊದಲ ದಿನವೇ 5,000 ಹಿಟ್‌ಗಳು. ಅಲ್ಲಿಗೆ ವಿ.ಹರಿಕೃಷ್ಣರ ಸಂಗೀತವೂ ಹಿಟ್ ಆಗುವ ಸೂಚನೆ ಸಿಕ್ಕಂತಾಗಿದೆ. ಯೋಗರಾಜ ಭಟ್ ಬರೆದಿರುವ ಈ ವಿಶೇಷ ಹಾಡಿಗೆ ನಾಯಕ ಉಪೇಂದ್ರ ಜತೆ ಹೆಜ್ಜೆ ಹಾಕಿದ್ದಾಳೆ ಮುಕ್ತಿ ಮೋಹನ್ ಎನ್ನುವ ಬಳಕುವ ಬಾಲೆ. ಉತ್ತರದ ಈ ಹುಡುಗಿ ಕಿರುತೆರೆ ರಿಯಾಲಿಟಿ ಶೋ 'ಝಲಕ್ ದಿಖಲಾಜಾ' ವಿಜೇತೆ. ಜಾಕಿ ಭಾವನಾ ನಾಯಕಿ. ನಾಲ್ಕು ಹಾಡುಗಳಲ್ಲಿ ಉಪೇಂದ್ರ ಮತ್ತು ಶ್ರೀನಿ ಒಂದೊಂದು ಗೀತೆ ಬರೆದಿದ್ದಾರೆ. ಮತ್ತೊಂದನ್ನು ಇಡೀ ತಂಡ ಒಟ್ಟಾಗಿ ಚರ್ಚಿಸಿ ಬರೆದಿದೆ.
ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಮತ್ತು ಕನಕಪುರ ಶ್ರೀನಿವಾಸ್ ಅವರಿಗೆ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಂಬಿಕೆ. ಅದಕ್ಕೆ ಕಾರಣ ದೈತ್ಯಪ್ರತಿಭೆ ಉಪ್ಪಿ ಮತ್ತು ಯುವ ನಿದೇರ್ಶಕ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್.ಜೆ. ಶ್ರೀನಿ ಕಾಂಬಿನೇಷನ್. 'ಇದು ಮ್ಯಾಚ್ ವಿನ್ನಿಂಗ್ ಕಾಂಬಿನೇಷನ್. ಈಗಿನ ಟ್ರೆಂಡ್‌ಗೆ ಅನುಗುಣವಾಗಿರುವ ಕಥೆ ಮತ್ತು ಅದಕ್ಕೆ ಅನುಗುಣವಾಗಿರುವ ನಿರೂಪಣೆ ಯುವಜನರಿಗೆ ಇಷ್ಟವಾಗಲಿದೆ' ಅನ್ನೋದು ಅವರ ವಿಶ್ವಾಸ. ಇವರಿಬ್ಬರೂ ಆರ್.ಎಸ್. ಪ್ರೊಡಕ್ಷನ್ಸ್‌ನಲ್ಲಿ ನಿರ್ಮಿಸುತ್ತಿರುವ 12ನೇ ಚಿತ್ರವಿದು. ನಿದೇರ್ಶಕ ಶ್ರೀನಿವಾಸ್ ಕೂಡ ಸಾಮಾನ್ಯರೇನಲ್ಲ. 'ಸಿಂಪ್ಲಿ ಕೈಲಾವೇಸಂ' ಎನ್ನುವ ಕಿರುಚಿತ್ರ ನಿರ್ದೇಶಿಸಿ, 2011ರಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ 'ಪ್ಲಾಟಿನಮ್ ರೆಮಿ ಅವಾರ್ಡ್' ಗೆದ್ದವರು. ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮೊದಲಿಗ ಕೂಡ. ಎ.ಎಸ್. ಮೂರ್ತಿಯವರ 'ಟಿಪಿಕಲ್ ಆರತಿ' ನಾಟಕದಿಂದ ಪ್ರೇರಿತರಾಗಿ, ಟಿ.ಪಿ.ಕೈಲಾಸಂ ಮತ್ತು ಅವರೇ ಸೃಷ್ಟಿಸಿದ ಪಾತ್ರಗಳ ನಡುವಿನ ತಿಕ್ಕಾಟ ಕುರಿತ ಕಥೆ ಹೊಂದಿತ್ತು. ಕೈಲಾಸಂ ಕುರಿತು ನಿರ್ಮಾಣವಾದ ಮೊದಲ ಚಿತ್ರ ಕೂಡ. ಅಲ್ಲಿ ಇವರ ಜತೆಯಾಗಿದ್ದ ಛಾಯಾಗ್ರಾಹಕ ಶ್ರೀಶ ಕುಡುವಳ್ಳಿ, ಸಂಕಲನಕಾರ ಶ್ರೀ ಸೇರಿದಂತೆ ಅದೇ ತಂಡ 'ಟೋಪಿವಾಲಾ'ಕ್ಕೂ ದುಡಿದಿದೆ.
- ರಾಜೇಶ್ ಹೆಗಡೆ