

ಮೈ ಹೂ ನಾ...
'ಸಂಜು ವೆಡ್ಸ್ ಗೀತಾ' ನಂತರ ಅದೇ ತಾಂತ್ರಿಕ ತಂಡ ಇಟ್ಟುಕೊಂಡು ಮತ್ತೊಂದು ಸಿನಿಮಾ ಮಾಡಿದ್ದಾರೆ ನಾಗಶೇಖರ್. ನೈಜ ಘಟನೆ ಆಧರಿಸಿದ ಸಿನಿಮಾ ಇದು ಎನ್ನುವ ಅವರು, ಆ ಘಟನೆ ಯಾವುದು ಎನ್ನುವ ಗುಟ್ಟು ಬಿಡುವುದಿಲ್ಲ.
'ಈ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದೀನಿ ಅಂದರೆ ಕಡಿಮೆಯಾಗುತ್ತದೇನೋ. ಊಟ, ನಿದ್ದೆ ಸೇರಿದಂತೆ ವೈಯಕ್ತಿಕ ಆಸೆಗಳನ್ನು ಬದಿಗೊತ್ತಿ ಹತ್ತಿಪ್ಪತ್ತು ಮಂದಿಯ ತಂಡ ಕಟ್ಟಿಕೊಂಡು ಪ್ರೀತಿಯಿಂದ ಬೆವರು ಸುರಿಸಿ ಮಾಡಿರುವ ಚಿತ್ರ ಇದು...' ಒಂದೇ ಉಸಿರಿನಲ್ಲಿ ಹೇಳಿದರು ನಿರ್ದೇಶಕ ನಾಗಶೇಖರ್.
ಹಾಗೆ ಅವರು ಪ್ರೀತಿಯಿಂದ ಮಾಡಿದ ಚಿತ್ರ 'ಮೈನಾ'. ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ಯಾವುದೇ ನಿರೀಕ್ಷೆ, ಅಬ್ಬರದ ಧ್ವನಿಗಳ ನೆರವಿಲ್ಲದೆ ಗೆದ್ದ ನಿರ್ದೇಶಕ ಅವರು. ಗಾಂಧಿನಗರಕ್ಕೆ 'ಗ್ಯಾರಂಟಿ ಪ್ರಾಪರ್ಟಿ' ಎನ್ನಿಸಿಕೊಂಡವರು. ಈಗ ಮತ್ತೊಂದು ಅಂಥದೇ ಪ್ರೇಮ ಕಾವ್ಯದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇಲ್ಲೂ ನೈಜ ಘಟನೆಯೊಂದು ಚಿತ್ರಕ್ಕೆ ಪ್ರೇರಣೆಯಾಗಿದೆ.
ಅಂದಹಾಗೆ ಆ ಘಟನೆ ಯಾವುದು? ಎನ್ನುವ ಪ್ರಶ್ನೆಗೆ ಉತ್ತರವನ್ನು ಗುಟ್ಟಾಗಿಯೇ ಇಡುವ ನಾಗಶೇಖರ್, 'ಒಂದು ಸಣ್ಣ ಎಳೆಯನ್ನಿಟ್ಟುಕೊಂಡು ಚಿತ್ರಕಥೆ ಮಾಡಲು ಹೋದಾಗ ನಿಜಕ್ಕೂ ದೊಡ್ಡ ಚಾಲೆಂಜ್ ನನ್ನ ಮುಂದೆ ಬಂತು. ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಹಲವು ಅಂಶಗಳಿವೆ. ಮುಖ್ಯವಾಗಿ ಸಂಗೀತ, ಹಾಡು, ಕ್ಯಾಮೆರಾ, ಗ್ರಾಫಿಕ್ಸ್ ಮತ್ತು ಚಿತ್ರೀಕರಣದ ಸ್ಥಳಗಳು. ಇಡೀ ಚಿತ್ರ ತುಂಬಾ ಎನರ್ಜಿಯಿಂದ ಕೂಡಿದೆ' ಎನ್ನುತ್ತಾರೆ.
ಥ್ರಿಲ್ ಆಗಿ ಸಾಗುವ ಈ ಚಿತ್ರದ ಲೊಕೇಶನ್ಗಳನ್ನು ನೋಡಿದವರು 'ಇದು ಯಾವ ದೇಶದ್ದು' ಎಂದು ಕೇಳಿದವರೇ ಹೆಚ್ಚು. ಸತತ 14 ವರ್ಷ ನಿಷೇಧಕ್ಕೊಳಗಾಗಿರುವ ಕುದುರೆಮುಖದ ಅತ್ಯಂತ ದುರ್ಗಮ ಪ್ರದೇಶದಲ್ಲಿ ಜೀವದ ಹಂಗು ತೊರೆದು ಚಿತ್ರೀಕರಣ ಮಾಡಿದ್ದಾರೆ. ಒಂದು ದೃಶ್ಯದ ಚಿತ್ರೀಕರಣದಲ್ಲಂತೂ ಇಡೀ ತಂಡ ವೈಕುಂಠ ಸೇರಬೇಕಿತ್ತು. ಅಂಥ ಅಪಾಯಕಾರಿ ಹಾಗೂ ಅಪರೂಪದ ಸ್ಥಳಗಳನ್ನು ಹುಡುಕಿ ನಾಗಶೇಖರ್ 'ಮೈನಾ' ಚಿತ್ರೀಕರಣ ಮಾಡಿದ್ದಾರೆ.
ತುಂಬಾ ಸರಳ ಕಥೆ. ಆದರೆ ಅದನ್ನು ವಿಶೇಷ ಮೇಕಿಂಗ್ಗೆ ಅಳವಡಿಸಿದ್ದೇನೆ. ಒಂದು ಕಾಲದಲ್ಲಿ 35ಕ್ಕೂ ಹೆಚ್ಚು ಸರಣಿ ಕೊಲೆಗಳನ್ನು ಮಾಡಿದ್ದ ವ್ಯಕ್ತಿಯ ಜೀವನದ ಕಥೆ ಇದು. ಆದರೆ ಆತ ಯಾಕೆ ಹಾಗೆ ಕ್ರಿಮಿನಲ್ ಆದ? ಯಾಕಾಗಿ ಕೊಲೆಗಳನ್ನು ಮಾಡುತ್ತಿದ್ದ? ಅಷ್ಟು ಕೊಲೆಗಳನ್ನು ಮಾಡಿದವನ ಜೀವನದಲ್ಲಿ ಪ್ರೀತಿ ಉಂಟಾದಾಗ ಆತ ಮುಂದೆ ಏನಾಗುತ್ತಾನೆ... ಹೀಗೆ ಹತ್ತು ಹಲವು ಕುತೂಹಲಕಾರಿ ಅಂಶಗಳೊಂದಿಗೆ ಕಥೆ ಕಟ್ಟಿದ್ದೇನೆ ಎನ್ನುತ್ತಾರೆ.
ಹಲವು ದಿನಗಳಿಂದ ಒಂದು ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದಾಗ 'ಮೈನಾ' ಕಥೆ ಸಿಕ್ಕಿದೆ. ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಅವರ ತನಿಖೆಯಲ್ಲಿ ಹೊರ ಬಂದ ಈ ಸರಣಿ ಕೊಲೆಗಾರನ ಜೀವನದ ಪುಟಗಳನ್ನು ತಿಳಿದುಕೊಂಡ ನಾಗಶೇಖರ್ ಅದರ ಜತೆಗೆ ತಮ್ಮದೇ ಕ್ರಿಯೇಟಿವ್ ಚಿತ್ರ ಮಾಡಿದ್ದಾರೆ. ಅಂದ ಮಾತ್ರಕ್ಕೆ ಪೂರ್ತಿ ಕಥೆನೇ ಅದಲ್ಲ. ಕಥೆಗೆ ಪೂರಕವಾಗಿ ಮಹತ್ತರ ಮಾಹಿತಿಗಳನ್ನು ಬಿ.ಬಿ.ಅಶೋಕ್ ಕುಮಾರ್ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ಅವರು. ಈ ಕಾರಣಕ್ಕಾಗಿ 'ಮೈನಾ' ನಿಜಕ್ಕೂ ವಿಭಿನ್ನ' ಎನ್ನುವ ಭರವಸೆ ನಾಗಶೇಖರ್ ಅವರದ್ದು.
ಚಿತ್ರದ ನಾಯಕ ಚೇತನ್, ನಾಯಕಿ ನಿತ್ಯಾ ಮೆನನ್. ಪ್ರಮುಖ ಪಾತ್ರಧಾರಿಗಳಾಗಿ ಸುಹಾಸಿನಿ, ಸಾಧುಕೋಕಿಲ, ರಂಗಾಯಣ ರಘು, ಸುಮನ್ ರಂಗನಾಥ್, ರವಿವರ್ಮ ಮುಂತಾದವರು ಅಭಿನಯಸಿದ್ದಾರೆ.
ಸಿನಿಮಾ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ. ಚಿತ್ರಕಥೆ ತುಂಬಾ ಭಿನ್ನವಾಗಿದ್ದು, ಚಿತ್ರ ನೋಡಿ ಹೊರಬಂದಾಗ ಇಷ್ಟು ಬೇಗ ಸಿನಿಮಾ ಮುಗಿಯಿತೆ? ಎನ್ನುವಷ್ಟರ ಮಟ್ಟಿಗೆ ಚಿತ್ರ ಚುರುಕಾಗಿ ಸಾಗುತ್ತದೆ ಎನ್ನುತ್ತಾರೆ.
120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮೈನಾ' ಬಿಡುಗಡೆಯಾಗುತ್ತಿದೆ. ಹೊರ ರಾಜ್ಯಗಳಲ್ಲೂ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಹಾಕುತ್ತಿದ್ದಾರೆ.
'ಸಂಜು ವೆಡ್ಸ್ ಗೀತಾ' ನಂತರ ಅದೇ ತಾಂತ್ರಿಕ ತಂಡ ಇಟ್ಟುಕೊಂಡು ಮತ್ತೊಂದು ಸಿನಿಮಾ ಮಾಡಿದ್ದಾರೆ ನಾಗಶೇಖರ್. ನೈಜ ಘಟನೆ ಆಧರಿಸಿದ ಸಿನಿಮಾ ಇದು ಎನ್ನುವ ಅವರು, ಆ ಘಟನೆ ಯಾವುದು ಎನ್ನುವ ಗುಟ್ಟು ಬಿಡುವುದಿಲ್ಲ. <
ಸರಣಿ ಕೊಲೆಗಾರ
'ಮೈನಾ' ಚಿತ್ರಕ್ಕೆ ಪ್ರೇರಣೆಯಾದ ಆ ಘಟನೆ ಯಾವುದೂ ಎಂಬುದನ್ನು ಈಗಲೂ ರಹಸ್ಯವಾಗಿಡಲಾಗಿದೆ. ಯಾಕೆಂದರೆ ಸದರಿ ಘಟನೆಗೆ ಸಂಬಂಧಿಸಿದ ಇಬ್ಬರು ಪ್ರೇಮಿಗಳು ಈಗಲೂ ಸುಖವಾಗಿ ಬಾಳುತ್ತಿದ್ದಾರೆ. ಹೆಸರು ಹೇಳಿದರೆ ಅವರ ಜೀವನಕ್ಕೆ ತೊಂದರೆಯಾಗುತ್ತದೆ. ಅವರ ನೆಮ್ಮದಿಯ ಜೀವನ ಹಾಳು ಮಾಡಿದಂತೆ ಆಗುತ್ತದೆ ಎನ್ನುತ್ತಾರೆ ನಾಗಶೇಖರ್. ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ತನಿಖೆ ಮಾಡಿದ್ದಾರೆ ಎನ್ನಲಾದ ಈ ಪ್ರಕರಣವನ್ನು ಆಧರಿಸಿ 'ಮೈನಾ' ಚಿತ್ರಕ್ಕೆ ಕುದುರೆಮುಖದಲ್ಲಿ ಚಿತ್ರೀಕರಣ ನಡೆಸಿದ್ದನ್ನು ನೋಡಿದಾಗ ಈ ಘಟನೆ ಮತ್ತು ವ್ಯಕ್ತಿ ಮಲೆನಾಡಿನ ಪ್ರದೇಶಕ್ಕೆ ಸಂಬಂಧಪಟ್ಟವರು ಇರಬಹುದೇ? ಇದು ಆಫ್ ದಿ ರೆಕಾರ್ಡ್ ಮಾತು.
ಹಲವು ವರ್ಷಗಳ ಹಿಂದೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲ, ಮಲೆನಾಡಿನ ಸುತ್ತಮುತ್ತ ಅಗಾಧವಾದ ಸಂಚಲನ ಮೂಡಿದಈ ಘಟನೆಯ ಕೇಂದ್ರ ವ್ಯಕ್ತಿ ಒಬ್ಬ ಸರಣಿ ಕೊಲೆಗಾರ. ಆತನ ಬದುಕಿನಲ್ಲಿ ನಡೆದ ಒಂದು ಸಣ್ಣ ಘಟನೆಯೊಂದು ಈ ಚಿತ್ರಕ್ಕೆ ಪ್ರೇರಣೆಯಾಗಿದೆಯಂತೆ.
-ಆರ್.ಕೇಶವಮೂರ್ತಿ