ಬ್ರಿಟಿಷ್ ಲೈಬ್ರರಿಯಲ್ಲಿ ಡಾ.ರಾಜ್

ಇನ್ನೇನು ಆ ವ್ಯಕ್ತಿ ಕಂಪೌಂಡ್ ಹೊರಗೆ ಕಾಲಿಡಬೇಕು. 'ಒಂದು ನಿಮಿಷ ನಿಲ್ಲಿ' ಎಂಬ ಧ್ವನಿ. ಪಕ್ಕದಲ್ಲಿದ್ದ ಮಲ್ಲಿಗೆ ಗಿಡದಿಂದ ಹೂವೊಂದನ್ನು ಕಿತ್ತ ಡಾ.ರಾಜ್ಕುಮಾರ್ ಅದನ್ನು ಮುಷ್ಟಿಯಲ್ಲಿಟ್ಟುಕೊಂಡರು. 'ನೋಡಿ. ನಾನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡರೂ ಮಲ್ಲಿಗೆಯ ಸುವಾಸನೆ ಸುತ್ತೆಲ್ಲ ಹರಡುವುದನ್ನು ತಡೆಯಲು ಯಾರಿಂದಲಾದರೂ ಸಾಧ್ಯವೆ? ಮಾನವೀಯತೆ ಎನ್ನುವುದು ಕೂಡ ಮಲ್ಲಿಗೆಯ ಪರಿಮಳದಂತೆ. ವ್ಯಕ್ತಿಯಲ್ಲಿ ಒಳ್ಳೆಯತನ ಇದ್ದರೆ ಒಳ್ಳೆಯ ವ್ಯಕ್ತಿಗಳು ಅವರತ್ತ ಆಕರ್ಷಿತರಾಗುತ್ತಾರೆ. ನಮ್ಮ ಶ್ರೀಗಂಧದಂತೆಯೇ ನಮ್ಮ ಕನ್ನಡಿಗರು ಕೂಡ. ಅವರ ಸರಳತೆ, ಔದಾರ್ಯ ಮತ್ತು ಎಲ್ಲರನ್ನೂ ಪ್ರೀತಿಸುವ ಧೋರಣೆಯಿಂದಲೇ ಕನ್ನಡಿಗರು, ಕನ್ನಡ ವಿಶ್ವಖ್ಯಾತವಾಗಿದೆ' ಎಂದರು ಮೇರು ನಟ. ಅತ್ಯಂತ ಸರಳವಾಗಿ ಬಹುದೊಡ್ಡ ಸಂದೇಶವೊಂದನ್ನು ಅವರು ವಿವರಿಸಿದ್ದರು. ಈಗ ಕನ್ನಡದ ಈ ಮಲ್ಲಿಗೆಯ ಘಮ ಇಂಗ್ಲೆಂಡ್ನಲ್ಲಿ. ಸಮುದ್ರದಾಚೆ ಚಂದನವನದ ಶ್ರೀಗಂಧದ ಕಂಪು. ಕನ್ನಡಿಗರ ಮನೆ, ಮನಗಳಲ್ಲಿ ಬೇರೂರಿರುವ ವರನಟ ಡಾ.ರಾಜ್ಕುಮಾರ್ ಕುರಿತ ಮಾಹಿತಿ ಈಗ ಬ್ರಿಟಿಷ್ ಲೈಬ್ರರಿಯಲ್ಲಿಯೂ ಲಭ್ಯ. ಪುನೀತ್ ರಾಜ್ಕುಮಾರ್ ಮತ್ತು ಪ್ರಕೃತಿ ಎನ್. ಬನವಾಸಿ ಬರೆದಿರುವ 'ಡಾ.ರಾಜ್ಕುಮಾರ್- ದಿ ಪರ್ಸನ್ ಬಿಹೈಂಡ್ ದಿ ಪರ್ಸನಾಟಿಲಿ' ಕೃತಿ ಬಗ್ಗೆ ನಿಮಗೆ ಗೊತ್ತೇ ಇದೆ. ಬೆಂಗಳೂರಿನ ಪಾರ್ವತಮ್ಮ ಪಬ್ಲಿಕೇಶನ್ಸ್ ಪ್ರಕಟಿಸಿರುವ ಕೃತಿಯನ್ನು ರಾಜ್ಕುಮಾರ್ ಕುಟುಂಬದ ಆಪ್ತರಾಗಿರುವ ಆರ್.ಮಂಜು ನಾಥ್ ಚವ್ಹಾಣ್ ಮತ್ತು ಡಾ.ಸೌಮ್ಯಾ ಮಂಜುನಾಥ್ ಚವ್ಹಾಣ್ ಅವರು ಲಂಡನ್ನಲ್ಲಿರುವ ಬ್ರಿಟಿಷ್ ಲೈಬ್ರರಿಗೆ ಇತ್ತೀಚೆಗೆ ಹಸ್ತಾಂತರಿಸಿದರು. ಕೃತಿ ಸ್ವೀಕರಿಸಿದ ಬ್ರಿಟಿಷ್ ಲೈಬ್ರರಿಯ ಏಷ್ಯನ್ ಮತ್ತು ಆಫ್ರಿಕನ್ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಡಾ.ಕ್ಯಾಥರೀನ್ ಎಗ್ಲೆಟಾನ್ ಅವರನ್ನು ಇದೇ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ರಾಜ್ಕುಮಾರ್ ಅವರು ಹೇಗೆ ಕನ್ನಡ ಸಂಸ್ಕೃತಿ ಮತ್ತು ಸಿನಿಮಾದ ರಾಯಭಾರಿಯಾಗಿ ನಿಲ್ಲುತ್ತಾರೆ ಎನ್ನುವ ಕುರಿತು ಚವ್ಹಾಣ್ ವಿವರವಾದ ಮಾಹಿತಿ ನೀಡಿದರು. ಉರ್ದು ವಿಭಾಗದ ಕ್ಯುರೇಟರ್ ಲೀನಾ, ಭಾಷಾ ಅಧ್ಯಯನ ವಿಭಾಗದ ಕ್ಯುರೇಟರ್ ಶ್ರೀಮತಿ ಎನ್.ಪೆರ್ಸಾದ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


