ಸಿನಿಮಾ ಲೇಖನ

ಸಚಿನ್ ಮತ್ತು ವೆಂಕಟೇಶ್ ಪ್ರಸಾದ್ ಮತ್ತೆ ಬ್ಯಾಟಿಂಗ್!

ಸಚಿನ್ ಮತ್ತು ವೆಂಕಟೇಶ್ ಪ್ರಸಾದ್ ಮತ್ತೆ ಬ್ಯಾಟಿಂಗ್!
Published On :

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ವೆಂಕಟೇಶ್ ಪ್ರಸಾದ್ ನಿವೃತ್ತರಾಗಿ ಬಹಳ ದಿನಗಳೇ ಆದವು. ಆದರೂ, ಮತ್ತೆ ಸಚಿನ್ ಹಾಗೂ ವೆಂಕಟೇಶ್ ಪ್ರಸಾದ್ ಬ್ಯಾಟ್ ಹಿಡಿದು ಗ್ರೌಡ್‌ಗೆ ಇಳಿದಿದ್ದಾರೆ. ಇಬ್ಬರ ಬ್ಯಾಟಿಂಗ್ ಹಿಂದಿನಂತೆ ಅಬ್ಬರಿಸುತ್ತದೋ ಇಲ್ಲವೋ. ಆದರೆ, ಬ್ಯಾಟ್‌ನೊಂದಿಗೆ ಫೀಲ್ಡ್‌ಗೆ ಇಳಿದಿದ್ದಾರೆ. ಅಂದಹಾಗೆ ಈ ಸಚಿನ್ ತೆಂಡೂಲ್ಕರ್ ಅಲ್ಲ. ವೆಂಕಟೇಶ್ ಪ್ರಸಾದ್ ಮಾತ್ರ ವೆಂಕಟೇಶ್ ಪ್ರಸಾದ್ ಅವರೇ. ಈ ಇಬ್ಬರು ಬ್ಯಾಟಿಂಗ್ ಶುರು ಮಾಡಿದ್ದು ಗ್ರೌಡ್‌ನಲ್ಲಿ ಎನ್ನುವುದು ನಿಜ. ಆದರೆ, ಕ್ರಿಕೆಟ್ ಗ್ರೌಡ್‌ನಲ್ಲಿ ಅಲ್ಲ ಎನ್ನುವುದು ಸತ್ಯ. 'ಎಂಥ ಮಾರೆಯ್ರೆ, ಕನ್‌ಫ್ಯೂಸ್ ಆಗ್ತಾ ಉಂಟಲ್ಲ?'.

ಹೌದು, ಇದು ಸಿನಿಮಾ ವಿಷಯ. 'ಸಚಿನ್ ತೆಂಡೂಲ್ಕರ್ ಅಲ್ಲ' ಎನ್ನುವ ಚಿತ್ರದಲ್ಲಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೋಚ್ ಪಾತ್ರ ಮಾಡುತ್ತಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಂತೆ ದೊಡ್ಡ ಕ್ರಿಕೆಟರ್ ಆಗಬೇಕು ಎಂದುಕೊಳ್ಳುವ ಮುಗ್ದ ಹುಡುಗನೇ ಇಲ್ಲಿ ಸಚಿನ್. ಈ ಹುಡುಗನಿಗೆ ಕ್ರಿಕೆಟ್ ಕಲಿಸಲು ವೆಂಕಶ್ ಪ್ರಸಾದ್ ಗ್ರೌಡ್‌ಗೆ ಇಳಿದ್ದಾರೆ. ಇವರ ಆಟಕ್ಕೆ ನಿರ್ದೇಶಕ ಎಸ್. ಮೋಹನ್ ಕ್ಯಾಮೆರಾ ಹಿಂದೆ ನಿಂತು ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಸಚಿನ್ ಪಾತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಮಾ. ಸ್ನೇಹಿತ್ ಅಭಿನಯಿಸುತ್ತಿದ್ದಾರೆ. ಇನ್ನೂ ಸುಹಾಸಿನಿ, ಸುಧಾರಾಣಿ, ಶ್ರೀನಿವಾಸ್ ಪ್ರಭು ಮತ್ತಿತರರು ಚಿತ್ರದ ಮುಖ್ಯ ಪಾತ್ರಧಾರಿಗಳು. ಬಿ.ಎನ್. ಗಂಗಾಧರ್ ಚಿತ್ರದ ನಿರ್ಮಾಪಕರು. ರಾಜೇಶ್ ರಾಮ್‌ನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಶೂಟಿಂಗ್ ಸ್ಪಾಟ್‌ಗೆ ಮಾಧ್ಯಮದವರನ್ನು ಕರೆಸಿಕೊಂಡ ನಿರ್ದೇಶಕ ಮೋಹನ್ ಮತ್ತು ತಂಡ 'ಸಚಿನ್ ತೆಂಡೂಲ್ಕರ್ ಅಲ್ಲ' ಚಿತ್ರದ ಬಗ್ಗೆ ವಿವರಣೆಗಳನ್ನು ನೀಡಿದರು. ವೆಂಕಟೇಶ್ ಪ್ರಸಾದ್ ಬ್ಲೂ ಬಾಯ್ಸ್‌ನಂತೆ ಕ್ರಿಕೆಟ್ ಡ್ರೆಸ್‌ನಲ್ಲೇ ಇದ್ದರು. ಸುಹಾಸಿನಿ ಬ್ಲಾಕ್ ಟೀ ಶರ್ಟ್‌ನಲ್ಲಿ ಬ್ಲಾಕ್ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಲಕಲಕನೆ ಹೊಳೆಯುತ್ತಿದ್ದರೆ, ಸುಧಾರಾಣಿ ಹದಿನಾರರ ಹುಡುಗಿಯಂತೆ ಮಿಂಚುತ್ತಿದ್ದರು. ಆದರೆ, ಚಿತ್ರದಲ್ಲಿ ಅವರದ್ದು ಪ್ರಿನ್ಸಿಪಾಲ್ ಪಾತ್ರ ಎಂಬುದು ನಿಮ್ಮ ಗಮನಕ್ಕಿರಲಿ. 'ಇಲ್ಲಿವರೆಗೂ ನಾವು ಅಂದುಕೊಂಡಂತೆ ಚಿತ್ರೀಕರಣ ನಡೆದಿದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿಬಂದಿದೆ. ಸುಹಾಸಿನಿ ಹಾಗೂ ವೆಂಕಟೇಶ್ ಪ್ರಸಾದ್ ಅವರೇ ನನ್ನ ಚಿತ್ರದ ಮುಖ್ಯ ಪಿಲ್ಲರ್‌ಗಳಾದರೂ ಇಲ್ಲಿ ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಯಾವುದೇ ಕಾರಣಕ್ಕೂ ಇದು ಮಕ್ಕಳಿಗೆ ಸೀಮಿತವಾದ ಚಿತ್ರವಲ್ಲ. ಮಕ್ಕಳ ಜೊತೆಗೆ ಎಲ್ಲ ವರ್ಗದ ಪ್ರೇಕ್ಷಕರು ನೋಡುವಂಥ ಕಥೆ ಇಲ್ಲಿದೆ' ಎಂದರು ಮೋಹನ್.

ನಿರ್ದೇಶಕ ಮೋಹನ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದರು. ಅವರು ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರ ಮಾಡುತ್ತಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎಂಬುದು ವೆಂಕಟೇಶ್ ಪ್ರಸಾದ್ ಅವರ ಮಾತು. ನಟಿ ಸುಹಾಸಿನಿ ಕೂಡ ಖುಷಿಯಾಗಿದ್ದರು. ಪಾತ್ರ, ಕಥೆ ಚೆನ್ನಾಗಿದೆ. ಅಪರೂಪ ಎನಿಸುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆಂಬ ಸಂತೋಷ ಸುಹಾಸಿನಿ ಅವರದ್ದು. ಮಾ. ಸ್ನೇಹಿತ್‌ರಿಗೆ ಇದು ಹುಡುಗಾಟದ ಅನುಭವವಾದರೂ, ಸ್ನೇಹಿತ್‌ಗೂ ಕಥೆ ಇಷ್ಟವಾಗಿದೆಯಂತೆ. 'ನಾನು ಚಿತ್ರದಲ್ಲಿ ಪ್ರಿನ್ಸಿಪಾಲ್ ಪಾತ್ರ ಮಾಡುತ್ತಿದ್ದೇನೆ. ಸದಾಭಿರುಚಿ ಸಿನಿಮಾ ಇದಾಗಲಿದೆ' ಎಂದರು ಸುಧಾರಾಣಿ. ಬಿ.ಎನ್. ಗಂಗಾಧರ್, ಶ್ರೀನಿವಾಸ್ ಪ್ರಭು ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡರು.
-ಕೇಶವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.