ಸಿಂಪಲ್ ಹುಡುಗಿಯ ಆತ್ಮಸಾಕ್ಷಿ

2014ರ ಚಿತ್ರರಂಗ ಹಾಗೂ ಸಾಹಿತ್ಯರಂಗ ಎರಡಕ್ಕೂ ಒಂದು ರೀತಿಯಲ್ಲಿ ಕವಿ ನಾ.ಡಿಸೋಜ ಅವರೇ ಮುನ್ನುಡಿ ಬರೆಯಲಿದ್ದಾರೆ. ಅತ್ತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಇತ್ತ ದಶಕದ ಹಿಂದಿನ ಅವರ ಕತೆ 'ಪಾಪನಿವೇದನೆ' ಆಧಾರಿತ 'ಆತ್ಮಸಾಕ್ಷಿ' ಚಿತ್ರದ ಬಿಡುಗಡೆ.
ಹೌದು. ಆತ್ಮಸಾಕ್ಷಿ ನಾ.ಡಿಸೋಜ ಅವರ ಕತೆಯನ್ನು ಆಧರಿಸಿದ ಚಿತ್ರ. ಮೂರು ವರ್ಷದ ಹಿಂದೆಯೇ ಪ್ರಾರಂಭವಾಗಿ, ಅರ್ಥಿಕ ಮುಗ್ಗಟ್ಟಿನಿಂದ ತಡವಾಗಿ, ಕೊನೆಗೂ ಈ ವರ್ಷಾರಂಭದಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿದೆ.
ಕಳೆದ ವರ್ಷದ ಶುರುವಿನಲ್ಲಿ ತೆರೆಕಂಡ ಸುಪರ್ ಹಿಟ್ ಚಿತ್ರ 'ಸಿಂಪಲ್ಲಾಗೊಂದ್..' ನಾಯಕಿ ಶ್ವೇತಾ ಶ್ರೀವಾತ್ಸವ್ರ ಮೊದಲ ಚಿತ್ರ ಇದು. ಇದೂಕೂಡ ಅದೇ ಸೀಸನ್ನಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಯಶಸ್ಸನ್ನು ನಿರೀಕ್ಷಿಸೋದ್ರಲ್ಲಿ ತಪ್ಪೇನಿಲ್ಲ.
ಆದರೆ ಚಿತ್ರದ ನಾಯಕ ಹಾಗೂ ನಿರ್ದೇಶಕ ಕಮ್ ನಿರ್ಮಾಪಕ ಮನುಗೆ ಈ ರೀತಿ ಶಕುನದಲ್ಲಿ ನಂಬಿಕೆ ಇಲ್ಲ. ಚಿತ್ರ ಚೆನ್ನಾಗಿದೆ. ನಾ.ಡಿಸೋಜ ಅವರ ಕತೆ ಎಂದಿಗೂ ಪ್ರಸ್ತುತ ಆಗಿರೋದ್ರಿಂದ, ಲೇಟಾದ್ರೂ ಜನಕ್ಕೆ ಇಷ್ಟವಾಗುತ್ತೆ ಅಂತಾರೆ.
ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದಿಸುತ್ತಾ, ಡಾ. ನಾಡಿಸೋಜ ಅವರೊಂದಿಗೆ ಚಿತ್ರದ ಬಗ್ಗೆ ಮಾತಾಡಿದಾಗ ಕವಿ ಮನಸು ಹೇಳಿದ್ದಿಷ್ಟು
ಇದು ನಿಮ್ಮ ಕತೆ ಆಧರಿಸಿ ಆಗುತ್ತಿರೋ ನಾಲ್ಕನೇ ಚಿತ್ರ ಅಲ್ವಾ?
ಹೌದು . ಕಾಡಿನ ಬೆಂಕಿ, ದ್ವೀಪ, ಬೆಟ್ಟದಪುರದ ದಿಟ್ಟ ಮಕ್ಕಳು ಹಾಗೂ ಈಗ ಆತ್ಮಸಾಕ್ಷಿ.
ಕತೆ ಬರೆಯುವಾಗ ಇದು ಚಲನ ಚಿತ್ರವಾಗಬಹುದು ಎಂಬ ಊಹೆ ಇತ್ತೇ?
ಇಲ್ಲ ಇವೆಲ್ಲ ನನ್ನ ಕಲ್ಪನೆಯಲ್ಲಿ ಬರೀ ಕತೆಯಾಗಿ ಹುಟ್ಟಿದ್ದು. ಇದು ಚಿತ್ರವಾಗಬಹುದು ಅನಿಸಿದ್ದು ಹಾಗೂ ಚಿತ್ರವಾಗಿಯೂ ಇಷ್ಟವಾಗಿದ್ದರೆ ಅದರ ಶ್ರೇಯ ಎಲ್ಲ ನಿರ್ದೇಶಕರಿಗೆ ಸಲ್ಲಬೇಕಾದ್ದು.
ಚಿತ್ರಕ್ಕಾಗಿಯೇ ಕತೆ ಮಾಡಿಕೊಡಿ ಅಂತ ಆಫರ್ ಬಂದಿದುಂಟಾ?
ಇಲ್ಲ. ಆದರೆ ನನ್ನ ಹಲವು ಕತೆಗಳನ್ನು ಚಿತ್ರ ಮಾಡೋ ಆಸೆಯಿಂದ ಸಿನಿಮಾಮಂದಿ ಬಂದು ಚರ್ಚಿಸಿದ್ದುಂಟು. ಅದರಲ್ಲಿ ಈವರೆಗೆ ಸಿನಿಮಾ ಆಗಿದ್ದು ಬರೀ ನಾಲ್ಕು.
ನಿಮ್ಮ ಕತೆಗಳು ಸಿನಿಮಾ ಆದಾಗೆಲ್ಲ ಅದು ಸುದ್ದಿ ಮಾಡಿದೆ. ಪ್ರಶಸ್ತಿ ಪಡೆದಿದೆ. ಈ ಚಿತ್ರದ ಬಗ್ಗೆ ಆ ನಿರೀಕ್ಷೆಗಳಿವೆಯಾ?
ಪ್ರಶಸ್ತಿಗಾಗಿ ನಾನು ಕತೆ ಬರೆದಿಲ್ಲ. ಚಿತ್ರಕ್ಕೆ ಪ್ರಶಸ್ತಿ ಬರಲಿ ಎಂದೂ ನಿರೀಕ್ಷಿಸಿಲ್ಲ. ನನ್ನ ಕತೆ ಚಿತ್ರವಾದಾಗ ಅದರ ಆಶಯಕ್ಕೆ ನ್ಯಾಯ ಸಂದರೆ ಸಂತೋಷ. ಚಿತ್ರ ನಿರ್ಮಿಸಿದವರಿಗೆ ಆರ್ಥಿಕ ಲಾಭವಾದರೆ ನಂಗೂ ಸಮಾಧಾನ.
ಈ ಹಿಂದೆ ನಿಮ್ಮ ಕತೆಗಳನ್ನು ಖ್ಯಾತರು ನಿರ್ದೇಶಿಸಿದ್ದರು. ಆತ್ಮಸಾಕ್ಷಿ ಹೊಸಬರ ನಿರ್ದೇಶನದಲ್ಲಿ ಬರುತ್ತಿದೆ. ಯಾವ ಮಾನದಂಡದ ಮೇಲೆ ನಿಮ್ಮ ಕತೆ ನೀಡಿದಿರಿ?
ಮನು ಅವರಿಗೆ ಇದು ಮೊದಲ ಸಿನಿಮಾ ಹೌದು. ಆದರೆ ಅವರ ಕಲಿಕೆ ಮತ್ತು ಸಿನಿಮಾ ಜ್ಞಾನ ಗಮನಿಸಿ ಅವರ ಪ್ರತಿಭೆಯ ಬಗ್ಗೆ ವಿಶ್ವಾಸ ಇಟ್ಟು ಕತೆ ಕೊಟ್ಟಿದ್ದೇನೆ.
ನಿಮ್ಮ ಕತೆಯ ಆಶಯಕ್ಕೆ ಭಂಗ ಬರದಂತೆ ಚಿತ್ರ ಬಂದಿದೆ ಎಂಬ ನಂಬಿಕೆ ಇದೆಯೇ?
ಚಲನಚಿತ್ರ ಹಾಗೂ ಈ ಕಾಲಕ್ಕೆ ಬೇಕಾದ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದೇನೆ. ಸಮಾಜಕ್ಕೆ ಒಂದು ಮೆಸೇಜ್ ಇರುವ ಕತೆಗೆ ಪ್ರೀತಿಯನ್ನು ಬ್ಲೆಂಡ್ ಮಾಡಿ ಮನು ಚೆನ್ನಾಗಿಯೇ ರೂಪಿಸಿದ್ದಾರೆ. ಅವರಿಗೆ ಗೆಲುವಾಗಲಿ.
- ಎನ್ನೆಸ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


