

ನಟ ಉಪೇಂದ್ರ ಆ್ಯಂಡ್ ತಂಡ ಉಪ್ಪಿ'ಟು' ತಯಾರಿಸಲು ಮೈದಾನಕ್ಕಿಳಿದಿದೆ. ಅಡುಗೆ ಮನೆಯಲ್ಲಿ ಉಪ್ಪಿಟ್ಟು ಮಾಡುವುದುಂಟು ಆದರೆ, ಮೈದಾನದಲ್ಲಿ ಎಂಥ ಉಪ್ಪಿಟ್ಟು ಮಾರಾಯ್ರೆ ಎನ್ನುವ ಹಾಗಿಲ್ಲ. ಯಾಕೆಂದರೆ ಇದು ಉಪೇಂದ್ರ ಅವರ ಸಿನಿಮಾ. ಇಲ್ಲಿ 'ಟು' ಎನ್ನುವುದನ್ನ ಹೇಗೆ ಬೇಕಾದರೂ ಅರ್ಥೈಸಿಕೊಳ್ಳಿ. ಉಪ್ಪಿ-2 ಅಂದ್ರೂ ಸರಿ, ಉಪ್ಪಿ'ಟ್ಟು' ಅಂತ ಕರೆದರೂ ಸರಿ. ಉಪೇಂದ್ರ ಸಿನಿಮಾಗಳ ಶೀರ್ಷಿಕೆಗಳ ಮಹಿಮೆಯೇ ಅಂಥಾದ್ದು.
ತುಂಬಾ ವರ್ಷಗಳ ನಂತರ ಅದ್ಧೂರಿಯಾಗಿ ತಮ್ಮದೇ ಹೋಂ ಬ್ಯಾನರ್ನಲ್ಲಿ 'ಉಪ್ಪಿ-2' ಆರಂಭಿಸಿದ ನಟ ಉಪೇಂದ್ರ ಬೇರೆಯವರ ಚಿತ್ರಗಳಲ್ಲೇ ಬ್ಯುಸಿಯಾಗಿಬಿಟ್ಟರು. ಒಂದು ಕಡೆ 'ಸೂಪರ್ರೋ ರಂಗ' ಚಿತ್ರಕರಣ ಮುಗಿಸಿದ್ದಾರೆ. ಮತ್ತೊಂದು ಕಡೆ 'ಬಸವಣ್ಣ' ಎದ್ದಿದ್ದಾನೆ. ಆದರೆ, ಈ ಚಿತ್ರ ವಿವಾದಗಳಲ್ಲೇ ಮುಳುಗಿದೆ. ಹೀಗಾಗಿ ಶೀರ್ಷಿಕೆಯೇ ಇಲ್ಲದೆ ಚಿತ್ರೀಕರಣಕ್ಕೆ ಹೊರಡಲು ನಿರ್ದೇಶಕ ಶ್ರೀನಿವಾಸರಾಜು ಹೊರಟಿದ್ದಾರೆ. ಇದರ ನಡುವೆ ಉಪ್ಪಿ ಒಪ್ಪಿಕೊಂಡ ಚಿತ್ರಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಲೇ ಇದ್ದವು. ಬಹುತೇಕ ಎಲ್ಲ ಚಿತ್ರಗಳು 'ಟೋಪಿವಾಲ'ಗಳೇ! ಹೀಗಾಗಿ ಸ್ವಂತ ಮನೆಯಲ್ಲಿ ಉಪ್ಪಿ'ಟು' ಮಾಡಲು ಉಪೇಂದ್ರ ಅವರಿಗೆ ಬಿಡುವು ಸಿಕ್ಕಿಲ್ಲ. ಈಗ ಎಲ್ಲವನ್ನೂ ಮುಗಿಸಿಕೊಂಡಿರುವ ಉಪೇಂದ್ರ ತಮ್ಮ ತಂಡದ ಸಮೇತ ಕಳೆದ ನಾಲ್ಕೈದು ದಿನಗಳಿಂದ ಮೈದಾನಕ್ಕಿಳಿದ್ದಾರೆ. ಅಲ್ಲಿಗೆ ಉಪ್ಪಿಟು ತಯಾರಾಗುತ್ತಿರುವ ಕುರುಹುಗಳು ಕಂಡು ಬರುತ್ತಿವೆ.
ವಿಶೇಷ ಅಂದರೆ ಈ ಚಿತ್ರದ ಮೂಲಕ ಉಪೇಂದ್ರ ಬಾಲಿವುಡ್, ಟ್ಯಾಲಿವುಡ್, ಕಾಲಿವುಡ್... ಹೀಗೆ ಎಲ್ಲ ವುಡ್ಗಳನ್ನು ಬಿಟ್ಟು ಸೀದಾ ರಷ್ಯಾಗೆ ಕೈ ಹಾಕಿದ್ದಾರೆ. ಹಾಗಂತ ರಷ್ಯಾ ಕಥೆಯನ್ನು ಉಪ್ಪಿ-2ನಲ್ಲಿ ತರುತ್ತಿಲ್ಲ. ಬದಲಾಗಿ ರಷ್ಯಾ ನಟಿಯನ್ನು ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಕರೆತರುತ್ತಿದ್ದಾರೆ. ಈ ರಷ್ಯಾ ಬಾಲೆಯ ಹೆಸರು ಕ್ರಿಸ್ಟಿನಾ ಅಕೀವಾ. ಮೂಲ ರಷ್ಯಾ ನೆಲೆಯಾದರೂ ಈಗಾಗಲೇ ಈಕೆ ಹಿಂದಿ ಮತ್ತು ತೆಲುಗು ಚಿತ್ರಗಳ ಮೂಲಕ ಭಾರತಕ್ಕೆ ಬಂದಿದ್ದಾಳೆ. ಆಸ್ಟ್ರೇಲಿಯಾದ ಮಾಡೆಲ್ ಆಗಿರುವ ಈಕೆ 'ಯಮಲ ಪಗಲ ದಿವಾನಾ 2' ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರ ಆದಿ ಅಭಿನಯದ 'ಗಾಳಿಪಟಂ' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾಳೆ. ಈ ಎರಡೂ ಚಿತ್ರಗಳ ನಂತರ ಕನ್ನಡಕ್ಕೆ ಕಾಲಿಡುತ್ತಿದ್ದಾಳೆ. ಮಾಡೆಲಿಂಗ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ರಷ್ಯಾ ರಾಣಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಗೆಲುವು ಸಿಕ್ಕಿಲ್ಲ. ಅಂಥ ಗೆಲುವು ಕ್ರಿಸ್ಟಿನಾಳಿಗೆ ಕನ್ನಡದಲ್ಲಿ ದೊರೆಯಲಿದೆಯೇ?
ಇನ್ನು ಉಪ್ಪಿ-2 ಚಿತ್ರಕ್ಕೆ ಪಾರುಲ್ ಯಾದವ್ ಮತ್ತೊಬ್ಬ ನಾಯಕಿ. ನಟ ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್ಗೆ ಆಗ್ಬಿಟೈತೆ' ಹಾಡಿನ ಮೂಲಕ ಗಾಂಧಿನಗರದಲ್ಲಿ ಹೆಸರು ಗಳಿಸಿದ ನಟಿ ಈಕೆ. ಆ ನಂತರ 'ನಂದೀಶ' 'ಬಚ್ಚನ್' ಚಿತ್ರಗಳ ನಾಯಕಿಯಾದಳು. ಇದರ ನಡುವೆ 'ಶ್ರಾವಣಿ ಸುಬ್ರಮಣ್ಯ' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದಳು. ಇದರ ಜೊತೆಗೆ ಮಲೆಯಾಳಂ, ತಮಿಳು, ಹಿಂದಿ ಹಾಗೂ ಬೋಜ್ಪುರಿ ಚಿತ್ರಗಳಲ್ಲೂ ಅಭಿನಯಿಸಿದ ಪಾರುಲ್, ವಿಜಯ್ ಜೊತೆಗೆ ನಟಿಸಿರುವ 'ಶಿವಾಜಿನಗರ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಅಪೂರ್ವ' ಎನ್ನುವ ಚಿತ್ರಕ್ಕೂ ನಾಯಕಿಯಾಗಿರುವ ಪಾರುಲ್, ಉಪ್ಪಿ ಜೊತೆಗೆ ಕಾಣಿಸಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. 'ನಾನು ಉಪ್ಪಿ-2 ಚಿತ್ರದಲ್ಲಿ ನಟಿಸುತ್ತಿದ್ದೇನೆ. ಆದರೆ, ಪಾತ್ರದ ಬಗ್ಗೆ ಏನೂ ಕೇಳಬೇಡಿ. ಉಪೇಂದ್ರ ಅವರೂ ಸಹ ನನಗೆ ಏನೂ ಹೇಳಿಲ್ಲ' ಎನ್ನುತ್ತಾರೆ ಪಾರುಲ್.
ಅಂದಹಾಗೆ ನಟಿ ಪ್ರಿಯಾಂಕ ಉಪೇಂದ್ರ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಾ? ಹಾಗೊಂದು ಸುದ್ದಿ ಇದೆ. ಆದರೆ ಅದು ನಾಯಕಿಯಾಗಿ ಅಲ್ಲ, ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬುದು ಮತ್ತೊಂದು ಸುದ್ದಿ. ಯಾವುದು ಸರಿ ಎಂಬುದನ್ನು ಉಪೇಂದ್ರ ಅವರೇ ಹೇಳಬೇಕು. ಒಟ್ಟಿನಲ್ಲಿ ಉಪ್ಪಿ-2ಕ್ಕೆ ಇಬ್ಬರು ನಾಯಕಿಯರು ಸೇರಿಕೊಂಡಿದ್ದಾರೆ.
= ಆರ್.ಕೇಶವಮೂರ್ತಿ