

ಇಂದು ಸೀರಿಯಲ್ನಿಂದ ಬೆಳಕಿಗೆ ಬಂದ ಅದೆಷ್ಟೋ ಪ್ರತಿಭೆಗಳು ಚಲನಚಿತ್ರ ಕ್ಷೇತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಆ ಪಟ್ಟಿಗೆ ಇವರು ಸೇರುವುದಿಲ್ಲ. ಕಿರುತೆರೆ ಮತ್ತು ಹಿರಿತೆರೆ ಎಂಬ ಭೇದವಿಲ್ಲದೆ ನಟನೆಯನ್ನು ಎಂಜಾಯ್ ಮಾಡುತ್ತಿರುವ ಈ ಕಲಾವಿದನ ಹೆಸರು ದಿಲೀಪ್ರಾಜ್.
ಚಿಕ್ಕಂದಿನಲ್ಲಿ ಯಾವ ಕ್ಷೇತ್ರದತ್ತ ಒಲವಿತ್ತು?
ಬಾಲ್ಯದಲ್ಲಿ ಇದೇ ಫೀಲ್ಡ್ಗೆ ಹೋಗಬೇಕೆಂಬ ಪ್ಲಾನ್ ನನಗಿರಲಿಲ್ಲ. ಸ್ಕೂಲ್ನಲ್ಲಿ ಕಲಿಯುತ್ತಿರುವಾಗ ನಾಟಕ, ಡ್ಯಾನ್ಸ್ನತ್ತ ಆಸಕ್ತಿ ಇತ್ತು. ಆದರೆ ಸಂಪೂರ್ಣವಾಗಿ ನಾನು ಮೊದಲು ತೊಡಗಿಸಿಕೊಂಡದ್ದು ರಂಗಕಲೆಯಲ್ಲಿ. ಅದೂ ಡಿಗ್ರಿ ಕಲಿಕೆಯ ಸಮಯದಲ್ಲಿ.
ಮೊದಲ ಬಾರಿ ಅವಕಾಶ ಸಿಕ್ಕಿದ್ದು ಹೇಗೆ?
ಅಂದು ನಮ್ಮ ಕಾಲೇಜಿನಲ್ಲಿ ಇಂಟರ್ ಲೆವೆಲ್ ಥಿಯೇಟರ್ ಕಾಂಪಿಟಿಷನ್ ನಡೆಸಿದ್ದರು. ಮತ್ತೊಬ್ಬ ದ್ರೋಣ ನಾಟಕದಲ್ಲಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಸಿಕ್ಕಿತು. ನನ್ನ ನಟನೆಯನ್ನು ನೋಡಿದ ನಿರ್ದೇಶಕರೊಬ್ಬರು ಕಂಬದ ಮನೆ ಎಂಬ ಟೆಲಿಫಿಲ್ಮ್ಗೆ ಅವಕಾಶ ನೀಡಿದರು.
ಇದುವರೆಗೆ ನಿಮ್ಮದು ಎಷ್ಟು ಧಾರಾವಾಹಿಗಳಾದವು?
ಇಲ್ಲಿಯವರೆಗೆ ಜನನಿ, ಚದುರಂಗ, ಅರ್ಧಸತ್ಯ, ಮಳೆಬಿಲ್ಲು, ರಂಗೋಲಿ, ಮಾಂಗಲ್ಯ, ರಥಸಪ್ತಮಿ, ಪ್ರೀತಿ ಇಲ್ಲದ ಮೇಲೆ, ಪ್ರೀತಿಗಾಗಿ, ಪುರುಷೋತ್ತಮ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ.
ಕಿರುತೆರೆ ನಿಮಗೆ ಏನು ಕಲಿಸಿಕೊಟ್ಟಿತು?
ಪ್ರತಿಯೊಂದು ಪಾತ್ರದಲ್ಲೂ ಒಂದೊಂದು ವಿಷಯ ಕಲಿಯುವಂತಿತ್ತು. ನಟನೆಯ ಬಗ್ಗೆ ರಂಗಭೂಮಿಯಲ್ಲಿ ತಿಳಿದುಕೊಂಡಿದ್ದೆ. ಆದರೆ ಟೆಕ್ನಿಕ್ ವಿಷಯದಲ್ಲಿ ಧಾರಾವಾಹಿಯ ನಟನೆ ತುಂಬಾನೇ ಸಹಕಾರಿಯಾಯ್ತು.
ಸಿನಿಮಾ ಕ್ಷೇತ್ರದತ್ತ ಅವಕಾಶ ಹೇಗೆ ಅರಸಿ ಬಂತು?
ಸಿನಿಮಾಕ್ಕೆ ನನಗೆ ಅವಕಾಶ ಸಿಕ್ಕಿದ್ದು ಬಯಸದೇ ಬಂದ ಭಾಗ್ಯ. ಬಾಯ್ಫ್ರೆಂಡ್ ಎಂಬ ಚಲನಚಿತ್ರದಲ್ಲಿ ನಾನು ಚಿಕ್ಕ ಪಾತ್ರ ನಿರ್ವಹಿಸಬೇಕಾಗಿತ್ತು. ನಾಯಕ ನಟನಿಗಾಗಿ ಹುಡುಕಾಟದಲ್ಲಿದ್ದ ಚಿತ್ರತಂಡ ಅಚಾನಕ್ ಆಗಿ ನನ್ನನ್ನೇ ನಾಯಕನಾಗಿ ಆಯ್ಕೆ ಮಾಡಿತ್ತು. ಪೋಲೀಸ್ ಕ್ವಾರ್ಟರ್ಸ್, ನನ್ ಲವ್ ಮಾಡ್ತೀಯಾ, ಮಹಾನದಿ, ಕ್ಷಣ ಕ್ಷಣ, ಗಾನಬಜಾನ, ಲವ್ಗುರು, ಮಿಲನ, ಟೋನಿ, ಬರ್ಫಿ, ಕ್ರೇಜಿಸ್ಟಾರ್, ನನ್ ಲೈಫಲ್ಲಿ, ಮಿಂಚಾಗಿ ನೀನು ಬರಲು, ಲೂಟಿ, ಮರ್ಯಾದೆ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದೇನೆ.
ಒಂದು ವೇಳೆ ನೀವು ನಟನಾ ಮಾಧ್ಯಮಕ್ಕೆ ಬರದಿದ್ದರೆ ಯಾವ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ರಿ?
ಖಂಡಿತಾ ಯೋಚಿಸಲೂ ಆಗುತ್ತಿಲ್ಲ. ನಮ್ಮ ಮನೆಯಲ್ಲಿ ಮೊದಲು ನಾನು ಚಿತ್ರರಂಗಕ್ಕೆ ಹೋಗುವುದು ಇಷ್ಟವಿರಲಿಲ್ಲ. ಆದರೆ ನಾನು ಸೀರಿಯಸ್ ಆಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ ನಂತರ ನನ್ನ ಬಗ್ಗೆ ಅವರಿಗೆ ಭರವಸೆ ಬಂತು.
ಅಭಿಮಾನಿಗಳು ನಿಮ್ಮನ್ನು ಹೆಚ್ಚು ಇಷ್ಟಪಟ್ಟಂಥ ಪಾತ್ರ ಯಾವುದು?
ರಂಗೋಲಿ, ಮಳೆಬಿಲ್ಲು ಧಾರಾವಾಹಿಗಳಲ್ಲಿ ಮಾಡಿದ ನನ್ನ ಪಾತ್ರವನ್ನು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ. ಇದಲ್ಲದೆ ಮಿಲನ ಮತ್ತು ಬಾಯ್ಫ್ರೆಂಡ್ ಚಿತ್ರದಲ್ಲಿನ ನಟನೆಗೂ ಪ್ರಶಂಸೆ ಬಂದಿದೆ.
ರಂಗಭೂಮಿಯಲ್ಲಿ ನಿಮ್ಮ ಸಾಧನೆಯ ಬಗ್ಗೆ ಹೇಳಿ.
ನನ್ನ ತಂದೆ ನಾಟಕದಲ್ಲಿ ನಟಿಸುತ್ತಿದ್ದರಂತೆ. ದೃಷ್ಟಿ, ನವರಂಗ ನಾಟಕ ಶಾಲೆ ಮತ್ತು ಹವ್ಯಾಸಿ ನಾಟಕ ರಂಗಗಳಲ್ಲಿ ಹಯವದನ, ಅಂಜುಮಲ್ಲಿಗೆ, ವಾಸಂತಿ ಜೇನಾನಿ, ಒಂದು ಸೈನಿಕ ವೃತ್ತಾಂತ ಸೇರಿದಂತೆ ಅನೇಕ ನಾಟಕದಲ್ಲಿ ಅಭಿನಯಿಸಿದರು. ಇತ್ತೀಚೆಗೆ ಟ್ರೆಡ್ಮಿಲ್ ಎಂಬ ನಾಟಕದಲ್ಲಿ ಅಭಿನಯಿಸಿದ್ದೇನೆ.
ರಿಯಾಲಿಟೀ ಶೋಗಳಲ್ಲಿ ತೊಡಗಿಸಿಕೊಂಡಿದ್ದೀರಾ?
ಹೌದು. ಈ ಹಿಂದೆ ಢೀ ಫಾರ್ ಡೇಂಜರ್, ಸೂಪರ್ಕ್ವೀನ್ಸ್, ಸೂಪರ್, ಹಾಕು ಹೆಜ್ಜೆ ಹಾಕು ರಿಯಾಲಿಟೀ ಶೋಗಳಿಗೆ ನಿರೂಪಕನಾಗಿದ್ದೆ. ಕುಣಿಯೋಣು ಬಾರಾ ಎಂಬ ರಿಯಾಲಿಟೀ ಶೋದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದೆ.
ಬೇರೆ ಅವಾರ್ಡ್ಗಳೇನಾದರೂ ಬಂದಿವೆಯೇ?
ಲವ್ಗುರು ಚಿತ್ರಕ್ಕೆ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಅವಾರ್ಡ್ ಸಿಕ್ಕಿತ್ತು. ಪರಿಚಯ ಚಿತ್ರಕ್ಕೆ ನಾಯಕ ತರುಣ್ಗೆ ವಾಯ್ಸ್ ಡಬ್ ಮಾಡಿದ್ದಕ್ಕೆ ಶ್ರೇಷ್ಠ ಕಂಠದಾನ ಕಲಾವಿದ ಪ್ರಶಸ್ತಿ ಸಿಕ್ಕಿದೆ.ಟಿ
= ನವೀನ್ಭಟ್, ಇಳಂತಿಲ