

ಆ ವಯಸ್ಸಿನಲ್ಲಿ ನನಗೆ ಸಿನಿಮಾ ನೋಡೋದು ಹೇಗೆ ಅಂತಾನೇ ಗೊತ್ತಿರಲಿಲ್ಲ. ಆದರೆ ಕಿಶನ್ 9 ನೇ ವಯಸ್ಸಿನಲ್ಲಿ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದಾನೆ ಎಂದರೆ, ಆತನಲ್ಲಿ ಎಲ್ಲರಲ್ಲೂ ಇರದ ವಿಶೇಷವಾದ ಪ್ರತಿಭೆ ಇದೆ. ಅದು ಇನ್ನಷ್ಟು ಬೆಳೆಯಲಿ ಎಂದು ಆಶಿಸಿದ್ದು ಬಾಲಿವುಡ್‌ನ ನಿರ್ದೇಶಕ ನಿರ್ಮಾಪಕ ಅನೀಝ್ ಬಾಜ್ಮಿ.
ಹೀಗೇ ಯಾರೋ ಕಾಸ್ಟಿಂಗ್ ಡೈರೆಕ್ಟರ್ ಮೂಲಕ ಕಿಶನ್ ಬಗ್ಗೆ ಗೊತ್ತಾಗಿ ಅವನ ಬಗ್ಗೆ ತಿಳಿದುಕೊಂಡು ಅವನ ಸಿನಿಮಾ ನೋಡಿದ ನಂತರ ಈಗ ಅನೀಝ್ ಬಾಜ್ಮಿ ಮತ್ತು ಕಿಶನ್ ಭಾಂದವ್ಯ ಅವರು ಕಿಶನ್ ಚಿತ್ರದಲ್ಲಿ ಅಭಿನಯಿಸುವವರೆಗೆ ಬಂದು ನಿಂತಿದೆ.
ಕಿಶನ್ ನಿರ್ದೇಶನದ ಕೇರಾಫ್ ಫುಟ್‌ಪಾತ್ 2 ಚಿತ್ರದ ಶೂಟಿಂಗ್‌ಗಾಗಿ ಮೊನ್ನೆ ಬೆಂಗಳೂರಿಗೆ ಬಂದಿದ್ದ ಅನೀಝ್ ಪುಟ್ಟ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದರು. ಚಿತ್ರತಂಡ ಸಂಪ್ರದಾಯಸ್ಥ ಶೈಲಿಯಲ್ಲಿ ಮೈಸೂರು ಪೇಟಾ ತೊಡಿಸಿ, ಶಾಲು ಹೊದೆಸಿ ಸನ್ಮಾನ ಮಾಡಿದ ಮೇಲೆ ಮಾತನಾಡಿದ ಅನೀಝ್ 'ವೆಲ್‌ಕಮ್, ನೋ ಎಂಟ್ರಿ, ಸಿಂಗ್ ಈಸ್ ಕಿಂಗ್ ಮುಂತಾದ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ನೋ ಎಂಟ್ರಿ ಮತ್ತು ವೆಲ್‌ಕಮ್ ಚಿತ್ರಗಳ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದೇನೆ. ನಿರ್ದೇಶಕನಾಗಿ ನಟರಿಗೆ ಅಭಿನಯ ಮಾಡಿ ತೋರಿಸುತ್ತಿದ್ದೆ. ಆದರೆ ಅದೇ ಬೇರೆ ಇದೇ ಬೇರೆ. ಈಗ ಒಬ್ಬ ಪೂರ್ಣಪ್ರಮಾಣದ ನಟನಾಗಿ ನಾನು ಹೇಗೆ ಅಭಿನಯಿಸುತ್ತೇನೆ ಎಂಬ ಬಗ್ಗೆ ನನಗೇ ಕುತೂಹಲವಿದೆ' ಎಂದರು. ಚಿತ್ರದಲ್ಲಿ ಅವರು ಪೆಟ್ರೋಲ್ ಬಂಕ್ ಮಾಲೀಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರದ ಒಂದು ದಿನದ ಶೂಟಿಂಗ್‌ನಲ್ಲಿ ಅವರು ಭಾಗಿಯಾಗಿದ್ದಾರೆ. ಚಿತ್ರದ ಪಾತ್ರವೊಂದಕ್ಕೆ '10, 20 ಸೆಕೆಂಡುಗಳಲ್ಲಿ ನಾವು ಮಾಡುವ ತಪ್ಪನ್ನು ಸರಿಪಡಿಸಿಕೊಳ್ಳಬೇಕಾದರೆ ಅದಕ್ಕೆ 10, 20 ವರ್ಷಗಳೂ ಹಿಡಿಯಬಹುದು' ಎಂಬ ಸಲಹೆ ನೀಡುವ ಪಾತ್ರ ಅವರದ್ದಂತೆ. ಕಿಶನ್‌ರ ತಂದೆ ಶ್ರೀಕಾಂತ್ ಮಾತನಾಡಿ, ಅನೀಝ್‌ರಂಥ ದೊಡ್ಡ ನಿರ್ದೇಶಕರು ಕಿಶನ್‌ನಂಥ ಹುಡುಗನ ಚಿತ್ರವನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಭಾರತೀಯ ಚಿತ್ರರಂಗದ ಬೆಳವಣಿಗೆಗೆ ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಅಂದಿನ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಇತರ ನಟರಾದ ಡಿಂಗ್ರಿ ನರೇಶ್, ಜೆ.ಕೆ, ದೆಹಲಿ ಮೂಲದ ದೀಪಕ್ ಪಟೇಲ್ ಮುಂತಾದವರಿದ್ದರು. ಚಿತ್ರದ ಮೂರು ಪ್ರಮುಖ ಪಾತ್ರಗಳಲ್ಲಿ ನರೇಶ್, ದೀಪಕ್ ಮತ್ತು ಕಿಶನ್ ಕಾಣಿಸಿಕೊಳ್ಳಲಿದ್ದರೆ ಜೆ.ಕೆಗೆ ಇಲ್ಲಿ ವಿಲನ್ ಪಾತ್ರವಂತೆ. ಈ ಪೈಕಿ ಡಿಂಗ್ರಿ ನರೇಶ್ ನೀನಾಸಂನಿಂದ ಬಂದಿರುವ ಶ್ರೇಷ್ಠ ಪ್ರತಿಭೆ. ಈತ ಚಿತ್ರರಂಗದಲ್ಲಿ ನಿಜಕ್ಕೂ ದೊಡ್ಡ ಹೆಸರು ಮಾಡುತ್ತಾನೆ ಎಂದು ಶ್ರೀಕಾಂತ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಬಾಲಾಪರಾಧಿಗಳ ಬಗೆಗೆ ಕೇಂದ್ರಿತವಾದ ಕಥೆ ಹೊಂದಿರುವ ಕೇರಾಫ್ ಪುಟ್‌ಪಾತ್ 2 ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು ಚಿತ್ರದ ಎರಡು ಹಾಡುಗಳ ಕೆಲಸ ಮಾತ್ರ ಬಾಕಿ ಇದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.
= ಹರಿ