ಸಿನಿಮಾ ಲೇಖನ

ಅತ್ತೆ ಮಗಳ ಉಡುಪು ಬದಲಾಗುತ್ತಾ?

ಅತ್ತೆ ಮಗಳ ಉಡುಪು ಬದಲಾಗುತ್ತಾ?
Published On :

ಮಾಣಿಕ್ಯ ಚಿತ್ರದ ಬೆನ್ನಲ್ಲೇ ಸುದೀಪ್ ಇನ್ನೊಂದು ರಿಮೇಕ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅಣ್ಣಯ್ಯ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರಿಗಾಗಿ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸಿ, ನಿರ್ದೇಶಿಸುವ ಪ್ಲ್ಯಾನ್ ಹಾಕಿಕೊಂಡಿದ್ದರು. ಹಾಗಂತ ಅವರೇ ಸೋಶಿಯಲ್ ನೆಟ್‌ವರ್ಕಿಂಗ್ ತಾಣಗಳಲ್ಲಿ ಹಾಕಿಕೊಂಡಿದ್ದೂ ಆಗಿತ್ತು. ಪವನ್ ಕಲ್ಯಾಣ್ ಅಭಿನಯದ 'ಅತ್ತಾರಂಟಿಕಿ ದಾರೇದಿ' ಚಿತ್ರವನ್ನು ರಿಮೇಕ್ ಮಾಡುವ ಮೂಡಿನಲ್ಲಿದ್ದರು ಸುದೀಪ್. ಆದರೆ ಅದ್ಯಾಕೋ ಸುದೀಪ್ ಅಭಿಮಾನಿಗಳು, ಹಿತೈಷಿಗಳಿಗೆ ಈ ಸುದ್ದಿ ಅಷ್ಟಾಗಿ ರುಚಿಸಲಿಲ್ಲ ಅನಿಸುತ್ತೆ. ಈ ಬಗ್ಗೆ, 'ಈಗಷ್ಟೇ ಒಂದು ರಿಮೇಕ್ ಮಾಡಿ ಮುಗಿಸಿದ್ದೀರ, ಮತ್ತೆ ಒಂದರ ಬೆನ್ನ ಹಿಂದೆ ಇನ್ನೊಂದು ರಿಮೇಕ್ ಮಾಡುವ ಅಗತ್ಯವಿದೆಯೇ' ಎಂಬುದು ಅಭಿಮಾನಿಗಳ ಅಸಮಾಧಾನವಾಗಿತ್ತು. ಅದೂ ನಿಜವೇ ಬಿಡಿ. ರಿಮೇಕ್ ಎಂಬುದೊಂದಷ್ಟೇ ಅಲ್ಲದೆ, ಅತ್ತಾರಂಟಿಕಿ ದಾರೇದಿ ಚಿತ್ರದ ಕಥೆ ಕೂಡ ಅಸಾಧಾರಣವಾದುದ್ದೇನಲ್ಲ. ತಂದೆಯ ತಂಗಿ ಮನೆಯವರು ಒಪ್ಪದ ಹುಡುಗನನ್ನು ಮದುವೆಯಾಗಿ ದೂರ ಹೋಗುವುದು, ಆಕೆಯ ಮಗಳನ್ನು ನಾಯಕ ಲವ್ ಮಾಡೋದು ಹೀಗೆ 'ಅತ್ತೆ ಮಗಳ ಉಡುಪು ನೋಡಿರಿ, ಅಯ್ಯಯ್ಯೋ ಸೀರೆ ಹೋಗಿ ಪ್ಯಾಂಟು ಬಂತು ರೀ' ಎನ್ನುವ ಬೇರೆ ಬೇರೆ ವೇಷದಲ್ಲಿರುವ ಅದೇ ಕಥೆಗಳೂ ಕನ್ನಡದಲ್ಲೂ ಬೇಕಾದಷ್ಟು ಬಂದು ಹೋಗಿವೆ. ಸುದೀಪ್‌ರ ಕ್ಯಾಲಿಬರ್‌ಗೆ ಅಂಥ ಕಥೆ ಬೇಕಿರಲಿಲ್ಲ. ಅಲ್ಲದೆ ಮಾಣಿಕ್ಯ ಹಿಟ್ ಆಗಿದ್ದನ್ನು 'ಎಷ್ಟೇ ಆದರೂ ಅದು ತೆಲುಗು ಚಿತ್ರ' ಎಂದು ತೆಲುಗಿನ ಕೆಲವು ಸ್ಟಾರ್‌ಗಳು ಕಾಲೆಳೆಯುತ್ತಿರುವ ಹೊತ್ತಲ್ಲಿ ಇನ್ನೊಂದು ತೆಲುಗು ರಿಮೇಕ್ ಖಂಡಿತಾ ಬೇಕಿರಲಿಲ್ಲ. ಮೂಲಗಳ ಪ್ರಕಾರ ಸುದೀಪ್ 'ಈ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಅತ್ತಾರಂಟಿಕಿ ದಾರೇದಿ ಚಿತ್ರ ರಿಮೇಕ್ ಮಾಡುವುದರ ಬಗ್ಗೆ ಇನ್ನೊಮ್ಮೆ ಯೋಚನೆ ಮಾಡುತ್ತೇನೆಟ ಎಂದು ಹೇಳಿದ್ದಾರೆ. ಅಂತೂ ಅಭಿಮಾನಿಗಳ ಮಾತು ಕೇಳಿ ಕಿಚ್ಚ ಸುದೀಪ್ ತಮ್ಮ ಮನಸ್ಸು ಬದಲಾಯಿಸುವ ಬಗ್ಗೆ ಯೋಚನೆಯನ್ನಾದರೂ ಮಾಡುತ್ತಿದ್ದಾರೆ ಎಂಬುದು ಒಳ್ಳೆಯ ಬೆಳವಣಿಗೆ.


-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.