
ಬೆಂಗಳೂರು: ಬಾಲಿವುಡ್ ನಟ, ಗಾಯಕ ಲಕ್ಕಿ ಅಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಎಂಟು ದುಷ್ಕರ್ಮಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ತಡ ರಾತ್ರಿ ಯಲಹಂಕ ಸಮೀಪದ ಲಕ್ಕಿ ಅಲಿ ಅವರ ಫಾರ್ಮ್‌ಹೌಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ರೌಡಿಗಳಾದ ಹರೀಶ್, ನವೀನ್, ಅವರ 6 ಸಹಚರರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಮುನ್ನಾ, ಆಸಿಫ್ ಅಲಿ ಎಂಬುವರ ಸೂಚನೆ ಮೇರೆಗೆ ಲಕ್ಕಿ ಅಲಿ ಅವರ ಮೇಲೆ ದಾಳಿ ನಡೆಸಲು ಬಂದಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಆದರೆ, ಭಾನುವಾರ ಕಾರ್ಯಕ್ರಮವೊಂದರರಲ್ಲಿ ಭಾಗವಹಿಸಲು ಲಕ್ಕಿ ಅಲ್ಲಿ ಅವರು ದೆಹಲಿಗೆ ತೆರಳಿದ್ದು, ಫಾರ್ಮ್‌ಹೌಸ್‌ನಲ್ಲಿರಲಿಲ್ಲ.
ಯಲಹಂಕ ಸಮೀಪದ ಲಕ್ಕಿ ಅಲಿ ಅವರ ಪಿತ್ರಾರ್ಜಿತ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ನಡೆಯುತ್ತಿದೆ. ಕಾನೂನು ಸಮರದಲ್ಲಿ ಲಕ್ಕಿ ಅಲಿ ಅವರು ಯಶಸ್ಸು ಗಳಿಸುವುದನ್ನು ತಪ್ಪಿಸಿ, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿರುವವರೇ ಈ ದಾಳಿ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಈ ಹಿಂದೆ ಒಮ್ಮೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದ ಲಕ್ಕಿ ಅಲಿ, ತಮ್ಮ ಜೀವಕ್ಕೆ ಬೆದರಿಕೆ ಇರುವುದರಿಂದ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ತನಿಖೆ ವೇಳೆ ದುಷ್ಕರ್ಮಿಗಳ ಉದ್ದೇಶ ಏನೆಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement