

ವಾಸ್ತು ಪ್ರಕಾರವೇ ಹೇಳುವುದಾದರೆ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ, ನಟ ಕಂ ನಿರ್ದೇಶಕ ಬಿ. ಸುರೇಶ್ ಅವರಿಗೊಂದು ಹಿಂದಿ ಸಿನಿಮಾ ಮಾಡಬೇಕಿತ್ತು. ಹೀಗಾಗಿ ಸುರೇಶ್ ಅವರು ಭಟ್ಟರನ್ನು ಮುಂಬೈಫ್ಲೈಟ್ ಹತ್ತಿಸಿದರು. ಅದು ಏನಾಯಿತೋ ಗೊತ್ತಿಲ್ಲ. ಈ ನಡುವೆ ಬೀಸು ಮತ್ತು ಭಟ್ಟರ ನಡುವೆ ಏನೋ ನಡೆದಿದೆ ಎನ್ನುವ ಸುಖಾಸುಮ್ಮನೆ ಗುಸು ಗುಸು ಮಾತುಗಳು ಜೋರಾಗಿ ಕೇಳಿಬಂದವು. ಆದರೆ, ಈಗ ಅದೇ ಜೋಡಿಯಿಂದ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರ ಯಾವುದು ಗೊತ್ತಾ?
ನಿರ್ದೇಶಕ ಯೋಗರಾಜ್ ಭಟ್ರ ವಾಸ್ತು ಪ್ರಕಾರ ಸಿನಿಮಾ ಇನ್ನೇನು ಬಿಡುಗಡೆಯ ಹಂತಕ್ಕೆ ಬಂದಿದೆ. ನವರಸ ನಾಯಕ ಜಗ್ಗೇಶ್, ರಕ್ಷಿತ್ ಶೆಟ್ಟಿ, ಐಶಾನಿ ಮುಂತಾದವರ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ವಾಸ್ತು ಪ್ರಕಾರ ಮುಗಿಸಿರುವ ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಯಾವುದು? ಎನ್ನುವ ಚರ್ಚೆ ಆಗಲೇ ಶುರುವಾಗಿದೆ.
ಇದು ಗಾಳಿ ಸುದ್ದಿಯೂ ಅಲ್ಲ. ಗಾಸಿಪ್ಪೂ ಅಲ್ಲ. ಗಟ್ಟಿಯಾಗಿ 'ಬೀಸು'ತ್ತಿರುವ ಈ ಸುದ್ದಿಯ ಹಿಂದೆ ಸಾಹಿತ್ಯ ಲೋಕದ ದಿಗ್ಗಜ ಕೆ.ಪಿ ಪೂರ್ಣಚಂದ್ರ ತೇಜಸ್ವಿಯ ಕಾದಂಬರಿ ಸದ್ದು ಮಾಡುತ್ತಿದೆ. ಹೌದು, ಮೂಡಿಗೆರೆಯ ತೇಜಸ್ವಿ ಅವರು ಪ್ರಸಿದ್ಧ ಕಾದಂಬರಿ ಕಾರ್ವಾಲೋ ಈಗ ಬೆಳ್ಳಿಪರದೆಯನ್ನು ಅಲಂಕರಿಸಲಿದ್ದು, ಈ ನಿಟ್ಟಿನಲ್ಲಿ ಎಲ್ಲ ತಯಾರಿಗಳೂ ನಡೆಯುತ್ತಿವೆ. ತೇಜಸ್ವಿ ಅವರ ಕಾದಂಬರಿ ಸಿನಿಮಾ ಆಗುತ್ತಿರುವ ವಿಚಾರವನ್ನು ಯೋಗರಾಜ್ ಭಟ್ ಹಾಗೂ ಬಿ. ಸುರೇಶ್ ಗುಟ್ಟಾಗಿಯೇ ಇಟ್ಟಿದ್ದಾರೆ.
ಆದರೂ, ಭಟ್ಟರ ಮುಂದಿನ ಸಿನಿಮಾ ಯಾವುದು? ಎನ್ನುವ ಪ್ರಶ್ನೆಯ ಹಿಂದೆ ಹೇಗೋ ಕರ್ವಾಲೋ ಸಿನಿಮಾ ಆಗುತ್ತಿರುವ ಸುದ್ದಿ ಹೊರಬಿದ್ದಿದೆ. ಸದ್ಯ ಈ ಸುದ್ದಿಯನ್ನು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ. ಆದರೂ ಇಬ್ಬರ ವಲಯದಲ್ಲಿ ಕಾರ್ವಾಲೋ ಕಾದಂಬರಿ ಗಾಳಿ ಜೋರಾಗಿಯೇ ಬೀಸುತ್ತಿದೆ.
ಈಗಾಗಲೇ ಸಂಬಂಧಪಟ್ಟವರಿಂದ ಸಿನಿಮಾ ಮಾಡುವುದಕ್ಕಾಗಿ ಕಾದಂಬರಿಯ ಹಕ್ಕುಗಳನ್ನು ತೆಗೆದುಕೊಳ್ಳಲಾಗಿದೆ. ಬಿ. ಸುರೇಶ್ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರ. ಪಕ್ಕಾ ಕಮರ್ಷಿಯಲ್ ಆಗಿಯೇ ಮೇಕಿಂಗ್ ಮಾಡುವ ಯೋಜನೆ ಇದೆ. ಅಲ್ಲದೆ ಕಾದಂಬರಿಗೆ ಯಾವುದೇ ಚ್ಯುತಿ ಬಾರದಂತೆ ಸಿನಿಮಾಗಾಗಿ ಇಡೀ ಕಾದಂಬರಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿಯೇ ಯೋಗರಾಜ್ ಭಟ್, ತಮ್ಮ ತಂಡದ ಜತೆ ಸೇರಿ ಚಿತ್ರಕಥೆ ಬರೆಯುವುದಕ್ಕೆ ಕೂತಿದ್ದಾರಂತೆ. ವಾಸ್ತು ಪ್ರಕಾರ ಸಿನಿಮಾ ತೆರೆಗೆ ಬಂದ ಕೂಡಲೇ ಕರ್ವಾಲೋ ಪುಸ್ತಕವನ್ನು ಸಿನಿಮಾ ಆಗಿಸುವ ಕೆಲಸಕ್ಕೆ ಚಾಲನೆ ದೊರೆಯಲಿದೆ. ಹಾಗೆ ನೋಡಿದ್ರೆ ತೇಜಸ್ವಿ ಅವರ ಸಾಹಿತ್ಯಕ್ಕೂ ಮತ್ತು ಸಿನಿಮಾ ಪರದೆಗೂ ತುಂಬಾ ಅಂತರವೇನು ಇಲ್ಲ. ಈಗಾಗಲೇ ಅವರದ್ದೇ 'ಅಬಚೂರಿನ ಪೋಸ್ಟಾಫೀಸ್' 'ತಬರನ ಕಥೆ' 'ಕುಬಿ ಮತ್ತು ಇಯಾಲ' ಕೃತಿಗಳು ಈಗಾಗಲೇ ಸಿನಿಮಾ ರೂಪ ಪಡೆದುಕೊಂಡಿವೆ. ಅಲ್ಲದೆ ಜುಗಾರಿ ಕ್ರಾಸ್, ಕೃಷ್ಣೇಗೌಡರ ಆನೆ, ಚಿದಂಬರ ರಹಸ್ಯ, ಯಮಳ ಪ್ರಶ್ನೆ, ಮಾಯಾಮೃಗ, ಪರಿಸರದ ಕಥೆ... ಇವು ನಾಟಕಗಳಾಗಿವೆ. ವಿಶೇಷ ಎಂದರೆ ಈಗ ಸಿನಿಮಾ ಆಗಲು ಹೊರಟಿರುವ ಕರ್ವಾಲೋ ಕಾದಂಬರಿಯೂ ರಂಗವೇದಿಕೆಯಲ್ಲಿ ಪ್ರದರ್ಶನವಾಗಿದೆ. ಕೆಎಸ್‌ಡಿಎಲ್ ಚಂದ್ರ ಇದನ್ನು ನಿರ್ದೇಶಿಸಿದ್ದರು.
ಈಗಿರುವ ಕೆಲವು ಪ್ರಶ್ನೆ. ನಿರ್ದೇಶಕ ಯೋಗರಾಜ್ ಭಟ್ ಇಡೀ ಕಾದಂಬರಿಯನ್ನು ಯಥಾವತ್ತಾಗಿ ಬೆಳ್ಳಿಪರದೆಗೆ ಅಳವಡಿಸುತ್ತಾರೆ? ಅಥವಾ ಸಿನಿಮಾಗಾಗಿ ಏನಾದರೂ ಬದಲಾವಣೆ ಮಾಡಿಕೊಳ್ಳಬಹುದಾ? ಎನ್ನುವುದು ಸದ್ಯದ ಕುತೂಹಲ. ಆದರೆ, ಬಿ. ಸುರೇಶ್‌ರ ಸಿನಿಮಾ ಪ್ರೀತಿ, ಯೋಗರಾಜ್ ಭಟ್ಟರ ಸಿನಿಮಾ ವ್ಯಾಕರಣ ಬಲ್ಲವರಿಗೆ ಇವರಿಂದ ಕರ್ವಾಲೋ ಕಾದಂಬರಿ ಅಪರೂಪದ ಸಿನಿಮಾ ಆಗಿ ಮೂಡಿಬರುತ್ತದೆಂಬ ನಂಬಿಕೆಯಂತೂ ಇದೆ.
ಅಂದಹಾಗೆ ಇಲ್ಲಿ ತೇಜಸ್ವಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು? ಹಾಗೆ ಇಡೀ ಕಾದಂಬರಿಯಲ್ಲಿ ತೇಜಸ್ವಿಯಷ್ಟೇ ಮತ್ತೊಂದು ಕ್ಯಾರೆಕ್ಟರ್ ಪ್ರಮುಖವಾಗಿದ್ದು, ಈ ಪಾತ್ರವನ್ನು ಯಾರು ಮಾಡಲಿದ್ದಾರೆ? ಎನ್ನುವ ಪ್ರಶ್ನೆಗೆ ಕನ್ನಡ ಇಬ್ಬರು ಐಕಾನ್‌ಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅಲ್ಲದೆ ಈ ಇಬ್ಬರಿಗೂ ತೇಜಸ್ವಿ ಅವರ ಸಾಹಿತ್ಯದ ಕೃಷಿ ಗೊತ್ತಿದ್ದು, ಈ ಇಬ್ಬರು ಕರ್ವಾಲೋ ಚಿತ್ರದಲ್ಲಿ ಪಾತ್ರ ಮಾಡಲಿದ್ದಾರಂತೆ. ಒಟ್ಟಿನಲ್ಲಿ ತುಂಬಾ ವರ್ಷಗಳ ನಂತರ ತೇಜಸ್ವಿ ಅವರ ಕೃತಿ ಸಿನಿಮಾ ಆಗುವ ಯೋಗ ಕೈ ಪಾತ್ರವಾಗುತ್ತಿದ್ದು, ಮೂಡಿಗೆರೆಯಿಂದ ಗಾಂಧಿನಗರದ ಕಡೆಗೆ ಕರ್ವಾಲೋ ಗಾಳಿ ಬೀಸುತ್ತಿದೆ.
ತೇಜಸ್ವಿ ಅವರ ಕರ್ವಾಲೋ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎನ್ನುವುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆ ಬಗ್ಗೆ ಏನು ಅಂದುಕೊಂಡಿರಲಿಲ್ಲ. ಆದರೆ, ಯೋಗರಾಜ್ ಭಟ್ಟರ ಜತೆ ಸಿನಿಮಾ ಮಾಡುವುದು ನಿಜ. ಯಾವ ಕಥೆ ಅಥವಾ ಕರ್ವಾಲೋ ಕಾದಂಬರಿನಾ? ಹೀಗೆ ಯಾವುದು ಅಂತಿಮಗೊಂಡಿಲ್ಲ.
-ಬಿ. ಸುರೇಶ್
-ಕೇಶು