

ಹುಡುಗಿಯರ ಚಿತ್ರ ಎಂದೇ ಖ್ಯಾತವಾಗಿರುವ ರಿಂಗ್ ರೋಡ್ ಶುಭ ಚಿತ್ರ ತಂಡ ಬಿಡುಗಡೆಯ ವಿಷಯದಲ್ಲಿ ಮಗ್ನವಾಗಿರುವಾಗ ಚಿತ್ರಕ್ಕೊಂದು ವಿಘ್ನ ಬಂದೊಂದಗಿದೆ. ಅದು ಟೈಟಲ್ ಸಂಬಂಧಪಟ್ಟಿದ್ದು. ಆದರೆ ಅದು ಫಿಲ್ಮ್ ಛೇಂಬರ್ ಕಡೆಯಿಂದ ಎಂದರೆ ಯಾರಿಗಾದರು ಅಚ್ಚರಿಯಾಗಬಹುದು. ಆದರೂ ಇದು ನಿಜ. ಹುಡುಗಿಯರು ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಯ ಸಂಭ್ರಮದ ಗೂಸ್ ಬಂಪ್ಸ್ ಫೀಲ್ ಮಾಡಿಕೊಳ್ಳತ್ತಿರುವಾಗ ರಿಂಗ್ರೋಡ್ ನಲ್ಲಿ ಈ ಹಂಪ್ಸ್ ಗಳ ಕಾಟ ಶುರುವಾಗಿದೆ.
ಆದರೆ ವಿಚಿತ್ರ ಎಂದರೆ ಚಿತ್ರ ತಂಡ ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಆದ ಕಾರಣ ಈ ಚಿತ್ರಕ್ಕೊಂದು ಟೈಟಲ್ ಸಮಸ್ಯೆ ಇದೆ ಎಂಬುದೇ ಯಾರಿಗೂ ಗೊತ್ತಿಲ್ಲ.
ಚಿತ್ರದ ಬಿಡುಗಡೆಯ ಸಮಯದಲ್ಲಿ ಚಿತ್ರಕ್ಕೆ ಟೈಟಲ್ ಸಮಸ್ಯೆ ಯಾಕೆ ಬಂತು ಎಂದು ಕೇಳಿದರೆ ಅದಕ್ಕೊಂದು ಹಿಸ್ಟರಿಯೇ ಇದೆ. ಚಿತ್ರ ಶುರುಮಾಡಿದಾಗ ಚಿತ್ರ ತಂಡ ರಿಜಿಸ್ಟರ್ ಮಾಡಿಸಲು ಹೊರಟ ಹೆಸರು ರಿಂಗ್ರೋಡ್ ಶೋಭಾ. ಆದರೆ ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಕಾಲ. ಹಾಗಾಗಿ ರಿಂಗ್ರೋಡ್ ಶುಭಾ ಎಂಬ ಹೆಸರೇ ಫೈನಲ್ ಆಯಿತು. ಇದರ ನಂತರ ಇತ್ತೀಚೆಗೆ ಈ ಹೊಸ ಟೈಟಲ್ಗೂ ಕಿರಿಕಿರಿ ಶುರುವಾಯಿತು.
ಹಾಗಾಗಿ ಚಿತ್ರ ತಂಡ ಸರಿ ನಮಗೆ ಶುಭಾನೂ ಬೇಡ, ಶೋಭಾನೂ ಬೇಡ ಬರಿ ರಿಂಗ್ರೋಡ್ ಅಂತ ಟೈಟಲ್ ಕೊಡಿ ಅಂತ ಕೇಳಿತು. ಆದರೆ ಛೇಂಬರ್ನ ಮುಖ್ಯ ವ್ಯಕ್ತಿಗಳಲ್ಲೊಬ್ಬರಾದ ಭಾಮಾ ಗಿರೀಶ್ ಚಿತ್ರತಂಡದವರಿಗೆ ಫೋನ್ ಮಾಡಿ ' ಅಯ್ಯೋ ಪರವಾಗಿಲ್ಲ ರಿಂಗ್ರೋಡ್ ಶುಭ ಅಂತಲೇ ಇಟ್ಕೊಳ್ಳಿ. ಏನೂ ತೊಂದ್ರೆ ಇಲ್ಲ' ಅಂದ್ರು. ಹಾಗಾಗಿ ಚಿತ್ರ ತಂಡ ನಿರಾಳವಾಗಿ ಶೂಟಿಂಗ್ ಮಾಡಿತು. ಚಿತ್ರ ಆಡಿಯೋ ಕೂಡ ಬಿಡುಗಡೆ ಆಯಿತು. ಪತ್ರಿಕೆಗಳಲ್ಲಿ ಜಾಹೀರಾತುಗಳೂ ಬಂದವು. ಹುಡುಗಿಯರೇ ಸೇರಿ ಮಾಡುತ್ತಿರುವ ಚಿತ್ರ ಎಂಬ ಕಾರಣಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಆದರೆ, ಎಲ್ಲವನ್ನೂ ಮಾಡಿದ್ದು ರಿಂಗ್ರೋಡ್ ಶುಭ ಎಂಬ ಹೆಸರಲ್ಲಿ.
ಈಗ ಈ ಟೈಟಲ್ ಸಮಸ್ಯೆ ಇದೆ ಅಂತ ಗೊತ್ತಾಗಿದ್ದೂ ಕೂಡ ಒಂದು ರೀತಿಯಲ್ಲಿ ವಿಚಿತ್ರ. ಚಿತ್ರದ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಒಂದು ವಾರದ ಕೆಳಗೆ ತಮ್ಮ ಸ್ನೇಹಿತೆಯೊಂದಿಗೆ ಫಿಲ್ಮ್ ಛೇಂಬರ್ನಲ್ಲಿ ಕೂತಿದ್ದರು.
ಸರಿ ಸಿನಿಮಾ ಮಾಡ್ತಾ ಇದಾರೆ ಅಂದ ಮೇಲೆ ಛೇಂಬರ್ನಲ್ಲಿ ಏನೋ ಕೆಲಸ ಇರಬಹುದು ಬಿಡಿ ಅಂದುಕೊಳ್ಳಬಹುದು... ಆದರೆ ಮರುದಿನ ಕೂಡ ಅವರು ಅಲ್ಲೇ ಕೂತಿದ್ದರು. ಅದರ ಮರುದಿನ ಮತ್ತು ಅದರ ಮರುದಿನ ಕೂಡ ಮತ್ತೆ ಮತ್ತೆ ಅಲ್ಲೇ ಅವರ ದರ್ಶನ ಆಯಿತು. ಕುತೂಹಲದಿಂದ ವಿಚಾರಿಸಿದಾಗ ಈ ಟೈಟಲ್ ಸಮಸ್ಯೆ ಹೊರಬಿತ್ತು. ಚಿತ್ರವೊಂದನ್ನು ಸೆನ್ಸಾರ್ ಮಾಡಿಸುವಾಗ ಛೇಂಬರ್ ಕಡೆಯಿಂದ ಟೈಟಲ್ ರಿಜಿಸ್ಟ್ರೇಷನ್ ಬಗ್ಗೆ ಸೆನ್ಸಾರ್ ಮಂಡಳಿಗೆ ಒಂದು ಲೆಟರ್ ಕೊಡಬೇಕಾದದ್ದು ನಿಯಮ.
ಆ ಲೆಟರ್ಗಾಗಿ ನಿರ್ದೇಶಕಿ ಪ್ರಿಯಾ ಛೇಂಬರ್ಗೆ ಬಂದಿದ್ದರು. ಆದರೆ, 'ಏನೂ ತೊಂದ್ರೆ ಇಲ್ಲ ರಿಂಗ್ ರೋಡ್ ಶುಭಾ ಅಂತಲೇ ಟೈಟಲ್ ಇಟ್ಕೊಳಿ' ಎಂದಿದ್ದ ಭಾಮಾ ಗಿರೀಶ್ ಈ ಟೈಟಲ್ ಕೊಡಿಸೋಕೆ ಒಂದು ವಾರ ಈ ಹುಡುಗಿಯರನ್ನು ಅಲೆಸಿ, ನಂತರ 'ಅಯ್ಯೋ ಈ ಗ ಈ ವಿಷಯವನ್ನು ಎಕ್ಸಿಕ್ಯೂಟಿವ್ ಕಮಿಟಿಗೆ ಕೊಟ್ಟಿದ್ದೇನೆ. ಅಲ್ಲಿ ಅವರು, ಸುಮ್ನೆ ಯಾಕ್ರಿ ಕಿರಿಕಿರಿ ಅವರೇ ಕೇಳಿದ್ರಲ್ಲ ಬರೀ ರಿಂಗ್ ರೋಡ್ ಅಂತ ಟೈಟಲ್ ಕೊಡಿ ಅಂತ, ಅದನ್ನೇ ಕೊಟ್ಬಿಡಿ. ಈ ಶುಭ ಎಲ್ಲ ಬೇಡ ಅಂದ್ರು ' ಅಂತ ವರಾತ ತೆಗೆದಿದ್ದಾರೆ.
ಆದರೆ ಚಿತ್ರದ ಎಳ್ಲಾ ಪ್ರಕ್ರಿಯೆಗಳನ್ನೂ ರಿಂಗ್ರೋಡ್ ಶುಭ ಎಂಬ ಹೆಸರಲ್ಲೇ ಮಾಡಿರುವ ಚಿತ್ರತಂಡ ಈ ದಿಢೀರ್ ಬದಲಾವಣೆಗೆ ಹೇಗೆ ಒಗ್ಗಿಕೊಳ್ಳಲು ಸಾಧ್ಯ. ಅಲ್ಲದೆ ಇದೆಲ್ಲದಕ್ಕೂ ಆಸಕ್ತಿಕರ ಸಂಗತಿ ಎಂದರೆ ಇದೇ ಫಿಲ್ಮ್ ಛೇಂಬರ್ನ ಭಾಮಾ ಗಿರೀಶ್ ಮತ್ತು ಸ್ವತಃ ಛೇಂಬರ್ನ ಅಧ್ಯಕ್ಷರಾದ ಗಂಗರಾಜು ಅವರು ನಗರದ ಪಬ್ ಒಂದರಲ್ಲಿ ನಡೆದ ರಿಂಗ್ ರೋಡ್ ಶುಬ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ, ರಿಂಗ್ರೋಡ್ ಶುಭ ಎಂದು ಸ್ಪಷ್ಟವಾಗಿ ಬರೆದಿದ್ದ ಸಿಡಿಗಳನ್ನು ತಮ್ಮ ಕೈಯಲ್ಲಿ ಹಿಡಿದು ಪ್ರದರ್ಶಿಸುತ್ತ ಕ್ಯಾಮೆರಾಗಳಿಗೆ ಪೋಸು ಕೊಟ್ಟಿದ್ದರು.
ಆಗ ಈ ಟೈಟಲ್ನ ಬಗ್ಗೆ ಯಾವ ಚಕಾರವನ್ನೂ ಎತ್ತಿರಲಿಲ್ಲ. ಹಾಗಾಗಿ ಈಗ ಅದ್ಯಾಕೆ ಛೇಂಬರ್ಗೆ ಟೈಟಲ್ ಒಂದು ಸಮಸ್ಯೆ ಆಯಿತು ಎನ್ನುವುದು ರಿಂಗ್ರೋಡ್ನಲ್ಲಿ ಎದ್ದಿರುವ ಪ್ರಶ್ನೆ. ಅಂದ ಹಾಗೆ ನಮ್ಮ ಛೇಂಬರ್ ಇಂಥಹ ಸಿಲ್ಲಿ ಕೆಲಸಗಳನ್ನು ಮಾಡುವುದು ಹೊಸದೇನಲ್ಲ. ಆದರೂ ಮತ್ತೆ ಮತ್ತೆ ಸುದ್ದಿಗೆ ಆಹಾರವಾಗುವ ಸಿಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ ಈ ಟೈಟಲ್ ಸಮಸ್ಯೆಗೊಂದು ಇತಿಶ್ರೀ ಹಾಡಬೇಕಿದೆ ನಮ್ಮ ಛೇಂಬರ್.