ದುಲ್ಕರ್ ಸಲ್ಮಾನ್ ಸಿನಿಮಾ ನೋಡಿ ಕಣ್ಣೀರು ಹಾಕದಿದ್ದರೆ 1 ಕೋಟಿ: ಪುಷ್ಪ ಡೈರೆಕ್ಟರ್ ಸುಕುಮಾರ್ಗೆ ಅಲ್ಲು ಅರವಿಂದ್ ಚಾಲೆಂಜ್: ಹಾಗಾದ್ರೆ, ಗೆದ್ದಿದ್ಯಾರು?
ಹೈದರಾಬಾದ್: ದುಲ್ಕರ್ ಸಲ್ಮಾನ್ ನಟನೆಯ ಆಕಾಶಂಲೋ ಒಕ ತಾರ ಸಿನಿಮಾವನ್ನು ಕಣ್ಣೀರು ಹಾಕದೆ ಪೂರ್ತಿಯಾಗಿ ನೋಡಿದರೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಪುಷ್ಪ ಖ್ಯಾತಿಯ ನಿರ್ದೇಶಕ ಸುಕುಮಾರ್ ಅವರಿಗೆ ತಮಾಷೆಯ ಚಾಲೆಂಜ್ ಒಂದನ್ನು ಹಾಕಿದ್ದರು. ಒಂದು ವೇಳೆ ಸಿನಿಮಾ ನೋಡುವಾಗ ಭಾವುಕರಾಗಿ ಅತ್ತರೆ, ತಮಗೆ 1 ಲಕ್ಷ ರೂಪಾಯಿ ಕೊಡಬೇಕು ಎಂಬುದು ಈ ಪಂದ್ಯದ ಷರತ್ತಾಗಿತ್ತು. ಸವಾಲನ್ನು ಸ್ವೀಕರಿಸಿ ಥಿಯೇಟರ್ಗೆ ಹೋದ ಸುಕುಮಾರ್, ಚಿತ್ರದ ಭಾವನಾತ್ಮಕ ದೃಶ್ಯಗಳಿಗೆ ಮನಸೋತು ಕಣ್ಣೀರು ತಡೆಯಲಾಗದೆ ಪಂದ್ಯದಲ್ಲಿ ಸೋತಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಒಂದು ಕೋಟಿ ರೂಪಾಯಿ ಸವಾಲು
ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ನಿರ್ದೇಶಕ ಸುಕುಮಾರ್ಗೆ ಕರೆ ಮಾಡಿ ದುಲ್ಕರ್ ಸಲ್ಮಾನ್ ಅಭಿನಯದ ಆಕಾಶಂಲೋ ಒಕ ತಾರಾ ಸಿನಿಮಾವನ್ನು ನೋಡುವಂತೆ ತಿಳಿಸಿದ್ದರು. ಈ ವೇಳೆ ಒಂದು ತಮಾಷೆಯ ಹಾಗೂ ಕುತೂಹಲಕಾರಿ ಸವಾಲನ್ನು ಮುಂದಿಟ್ಟಿದ್ದರು. ಒಂದು ವೇಳೆ ಈ ಸಿನಿಮಾವನ್ನು ಪೂರ್ತಿಯಾಗಿ ನೋಡಿ ಕಣ್ಣೀರು ಹಾಕದೆ ಚಿತ್ರಮಂದಿರದಿಂದ ಹೊರಬಂದರೆ ತಾವು ಸುಕುಮಾರ್ ಅವರಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ನೀಡುವುದಾಗಿ ಅರವಿಂದ್ ಭರವಸೆ ನೀಡಿದ್ದರು. ಆದರೆ ಸಿನಿಮಾ ನೋಡುವಾಗ ಭಾವುಕರಾಗಿ ಕಣ್ಣೀರು ಹಾಕಿದರೆ ಸುಕುಮಾರ್ ಅವರು ತಮಗೆ ಒಂದು ಲಕ್ಷ ರೂಪಾಯಿ ನೀಡಬೇಕು ಎಂಬ ಷರತ್ತು ವಿಧಿಸಿದ್ದರು.
ಚಿತ್ರಮಂದಿರದಲ್ಲಿ ಭಾವುಕರಾದ ಪುಷ್ಪ ನಿರ್ದೇಶಕ
ಅಲ್ಲು ಅರವಿಂದ್ ಅವರ ಈ ಸವಾಲನ್ನು ಬಹಳ ಉತ್ಸಾಹದಿಂದಲೇ ಸ್ವೀಕರಿಸಿದ ಸುಕುಮಾರ್ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಚಿತ್ರದ ಕಥೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಸುಕುಮಾರ್ ಅವರ ಮನಸ್ಸನ್ನು ಎಷ್ಟರಮಟ್ಟಿಗೆ ತಟ್ಟಿದವೆಂದರೆ, ಅವರಿಗೆ ತಮ್ಮ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಿನಿಮಾ ಮುಗಿಯುವಷ್ಟರಲ್ಲಿ ಕಣ್ಣೀರು ಹಾಕಿದ ಸುಕುಮಾರ್, ಅಲ್ಲು ಅರವಿಂದ್ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಲ್ಲು ಅರವಿಂದ್ ಅವರಿಗೆ ಬರೆದ ಒಂದು ಲಕ್ಷ ರೂಪಾಯಿ ಚೆಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಅತ್ಯಂತ ದುಬಾರಿ ಸಲಹೆಯಾಗಿತ್ತು ಸರ್ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.
ಮುಂದುವರೆದು, ಪವನ್ ಸಾಧಿನೇನಿ ನಿರ್ದೇಶನದ ಆಕಾಶಂಲೋ ಒಕ ತಾರಾ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಸಾತ್ವಿಕಾ ವೀರವಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಶ್ರುತಿ ಹಾಸನ್ ಹಾಗೂ ರುಹಾನಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಗನಯಾತ್ರಿಯಾಗುವ ದೊಡ್ಡ ಕನಸು ಕಾಣುವ ಸಾಮಾನ್ಯ ಹುಡುಗಿಯೊಬ್ಬಳ ಜೀವನ ಮತ್ತು ಆಕೆಯ ಕನಸನ್ನು ನನಸು ಮಾಡಲು ಮಧ್ಯಮ ವರ್ಗದ ಮೆಕ್ಯಾನಿಕ್ ಒಬ್ಬ ಹೇಗೆ ಬೆಂಬಲವಾಗಿ ನಿಲ್ಲುತ್ತಾನೆ ಎಂಬ ಹೃದಯಸ್ಪರ್ಶಿ ಕಥೆಯನ್ನು ಈ ಸಿನಿಮಾ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

