ಕ್ರಿಕೆಟ್

2ನೇ ಟೆಸ್ಟ್, 3ನೇ ದಿನದಾಟ ಅಂತ್ಯ: ಜುರೆಲ್ ಹೋರಾಟ ವ್ಯರ್ಥ, ಭಾರತ 246ಕ್ಕೆ ಆಲೌಟ್; ಆರಂಭಿಕ ಆಘಾತದ ಹೊರತಾಗಿಯೂ ನ್ಯೂಜಿಲೆಂಡ್‌ಗೆ ಬೃಹತ್ ಮುನ್ನಡೆ!

2ನೇ ಟೆಸ್ಟ್, 3ನೇ ದಿನದಾಟ ಅಂತ್ಯ: ಜುರೆಲ್ ಹೋರಾಟ ವ್ಯರ್ಥ, ಭಾರತ 246ಕ್ಕೆ ಆಲೌಟ್; ಆರಂಭಿಕ ಆಘಾತದ ಹೊರತಾಗಿಯೂ ನ್ಯೂಜಿಲೆಂಡ್‌ಗೆ ಬೃಹತ್ ಮುನ್ನಡೆ!
ಟೀಂ ಇಂಡಿಯಾ
Published On :

ಕ್ರೈಸ್ಟ್‌ಚರ್ಚ್: 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್ ಆಗಿದ್ದು, 2ನೇ ಇನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಮೂರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.

ಕ್ರೈಸ್ಟ್‌ಚರ್ಚ್ ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಭಾನುವಾರ ಭಾರತ 116 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಲ್ಲಿಂದ ಮೊದಲ ಇನಿಂಗ್ಸ್ ಮುಂದುವರಿಸಿತು.

ಆರಂಭಿಕ ಕುಸಿತದ ನಡುವೆಯೂ ಹೋರಾಟದ ಆಟವಾಡಿದ ಧ್ರುವ್ ಜುರೆಲ್ 88 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರಿಗೆ ಉತ್ತಮ ಸಾಥ್ ನೀಡಿದ ಆಕಾಶ್ ದೀಪ್ 29 ರನ್ ಗಳಿಸಿದರು.

ಈ ಜೋಡಿ ಎಂಟನೇ ವಿಕೆಟ್‌ಗೆ 46 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ಭಾರತ ಫಾಲೋಆನ್‌ನಿಂದ ಪಾರಾಗಲು ನೆರವಾಯಿತು. ಗುರುನೂರ್ ಬ್ರಾರ್ 10 ರನ್ ಗಳಿಸಿದರು. ಅಂತಿಮವಾಗಿ ಭಾರತ 246 ರನ್‌ಗಳಿಗೆ ತನ್ನ ಮೊದಲ ಇನಿಂಗ್ಸ್ ಮುಗಿಸಿತು.

ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ 4 ವಿಕೆಟ್ ಪಡೆದರೆ, ಜೇಕಬ್ ಡಫಿ, ಮ್ಯಾಟ್ ಹೆನ್ರಿ ಹಾಗೂ ನಾಥನ್ ಸ್ಮಿತ್ ತಲಾ 2 ವಿಕೆಟ್ ಕಬಳಿಸಿದರು.

ಕಿವೀಸ್ 2ನೇ ಇನ್ನಿಂಗ್ಸ್

ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗಳ ಮುನ್ನಡೆ ಪಡೆದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ ಆರಂಭಿಸಿತು. ಆರಂಭಿಕ ಆಟಗಾರ ಡೆವೊನ್ ಕಾನ್ವೆ 51 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕ ಟಾಮ್ ಲ್ಯಾಥಮ್ 8 ರನ್ ಗಳಿಸಿ ಔಟಾದರು.

ಹೆನ್ರಿ ನಿಕೋಲ್ಸ್ 22 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಇದರೊಂದಿಗೆ ದಿನದಾಟದ ಅಂತ್ಯಕ್ಕೆ ಆತಿಥೇಯ ನ್ಯೂಜಿಲೆಂಡ್ ತಂಡ ಒಟ್ಟು 243 ರನ್‌ಗಳ ಮುನ್ನಡೆ ಸಾಧಿಸಿದೆ.

ರಚಿನ್ ರವೀಂದ್ರ ಉತ್ತಮ ಬ್ಯಾಟಿಂಗ್

ದಿನದಾಟದ ಅಂತ್ಯಕ್ಕೆ ರಚಿನ್ ರವೀಂದ್ರ 46 ರನ್ ಹಾಗೂ ಡ್ಯಾರಿಲ್ ಮಿಚೆಲ್ 5 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಬಳಿಸಿದರು. ಇದೀಗ ನ್ಯೂಜಿಲೆಂಡ್ ತಂಡ ಒಟ್ಟು 243 ರನ್‌ಗಳ ಮುನ್ನಡೆಯಲ್ಲಿದ್ದು, ಪಂದ್ಯದ ನಾಲ್ಕನೇ ದಿನ ಭಾರತಕ್ಕೆ ಆತಿಥೇಯರ ಮುನ್ನಡೆಯನ್ನು ನಿಯಂತ್ರಿಸುವ ಸವಾಲು ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.