ಕ್ರಿಕೆಟ್

'ಇಂತಹ ಹುಡುಗನನ್ನು ನಾನು ನೋಡಿಲ್ಲ'..ಆದ್ರೆ: ವೈಭವ್ ಸೂರ್ಯವಂಶಿ ಆಟಕ್ಕೆ ಇಂಗ್ಲೆಂಡ್ ದಿಗ್ಗಜ ಅಲಸ್ಟೈರ್ ಕುಕ್ ಫಿದಾ!

'ಇಂತಹ ಹುಡುಗನನ್ನು ನಾನು ನೋಡಿಲ್ಲ'..ಆದ್ರೆ: ವೈಭವ್ ಸೂರ್ಯವಂಶಿ ಆಟಕ್ಕೆ ಇಂಗ್ಲೆಂಡ್ ದಿಗ್ಗಜ ಅಲಸ್ಟೈರ್ ಕುಕ್ ಫಿದಾ!
ಅಲಿಸ್ಟರ್ ಕುಕ್ ಮತ್ತು ವೈಭವ್ ಸೂರ್ಯವಂಶಿ
Published On :

ನವದೆಹಲಿ: ಕೇವಲ 15ನೇ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಆಟಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಸರ್ ಅಲಸ್ಟೈರ್ ಕುಕ್ ಮನಸೋತಿದ್ದಾರೆ.

ಈ ವಯಸ್ಸಿನಲ್ಲಿ ವೈಭವ್ ತೋರಿಸುತ್ತಿರುವ ಬ್ಯಾಟಿಂಗ್ ಸಾಮರ್ಥ್ಯವನ್ನು ತಾವು ಹಿಂದೆಂದೂ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಯುವ ಆಟಗಾರನನ್ನು ಈಗಲೇ ಭಾರತ ತಂಡಕ್ಕೆ ಆಯ್ಕೆ ಮಾಡುವ ಆತುರ ಬೇಡ. ಆತನಿಗೆ ಇನ್ನಷ್ಟು ಕಲಿಯಲು ಮತ್ತು ಬೆಳೆಯಲು ಸಮಯ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ದಾಖಲೆಯ ದ್ವಿಶತಕ ಸಿಡಿಸಿದ್ದರು. ಅವರ ಸ್ಫೋಟಕ ಬ್ಯಾಟಿಂಗ್ ಬಳಿಕ ಭಾರತ ಹಿರಿಯ ತಂಡಕ್ಕೆ ಆಯ್ಕೆ ಮಾಡುವಂತೆ ಹಲವು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಇಂಗ್ಲೆಂಡ್ ಮಾಜಿ ನಾಯಕ ಅಲಸ್ಟೈರ್ ಕುಕ್ ಮಾತ್ರ ಈ ವಿಚಾರದಲ್ಲಿ ಆತುರದ ನಿರ್ಧಾರ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರುಗ್ರಾಮದ ಕ್ವೀನ್ ಎಲಿಜಬೆತ್ ಶಾಲೆಯಲ್ಲಿ ಖಾಸಗಿ ವಾಹಿನಿ ಜೊತೆ ಸಂದರ್ಶನದಲ್ಲಿ ವೈಭವ್ ಆಟದ ಬಗ್ಗೆ ಮಾತನಾಡಿದ ಕುಕ್, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

"ಒಬ್ಬ ಹುಡುಗ ಈ ರೀತಿ ಆಡುತ್ತಿರುವುದನ್ನು ನಾನು ಹಿಂದೆಂದೂ ನೋಡಿಲ್ಲ. ಆತನ ವಯಸ್ಸನ್ನು ಬದಿಗಿಟ್ಟರೂ, ಚೆಂಡನ್ನು ಇಷ್ಟು ನಿಖರವಾಗಿ, ಸ್ಥಿರವಾಗಿ ಮತ್ತು ಅಪಾರ ಶಕ್ತಿಯಿಂದ ಬಾರಿಸುವ ರೀತಿ ಅಸಾಧಾರಣವಾಗಿದೆ. ಬಹುತೇಕ ಪ್ರತಿ ವಾರವೂ ದಾಖಲೆಗಳನ್ನು ಮುರಿಯುತ್ತಿದ್ದಾನೆ" ಎಂದು ಕುಕ್ ಹೇಳಿದ್ದಾರೆ.

ವೈಭವ್ ಬ್ಯಾಟಿಂಗ್ ಶೈಲಿಗೆ ಕುಕ್ ಅಚ್ಚರಿ!

ವೈಭವ್ ಅವರ ಬ್ಯಾಟಿಂಗ್‌ನಲ್ಲಿರುವ ವೇಗ ಮತ್ತು ಹೊಡೆತಗಳ ವೈವಿಧ್ಯ ಕುಕ್ ಅವರನ್ನು ಹೆಚ್ಚು ಆಕರ್ಷಿಸಿದೆ. ಸಾಮಾನ್ಯವಾಗಿ ಬ್ಯಾಟರ್‌ಗಳು ತಮಗೆ ಅನುಕೂಲಕರವಾದ ದಿಕ್ಕಿನಲ್ಲಿ ಚೆಂಡನ್ನು ಬಾರಿಸಲು ಕಾಯುತ್ತಾರೆ. ಆದರೆ ವೈಭವ್ ಮೈದಾನದ ಯಾವುದೇ ಭಾಗಕ್ಕೆ ಸಿಕ್ಸರ್ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕುಕ್ ಅಭಿಪ್ರಾಯಪಟ್ಟಿದ್ದಾರೆ.

"ವೈಭವ್ ಯಾವುದೇ ಚೆಂಡನ್ನು ಮೈದಾನದ ಯಾವುದೇ ಭಾಗಕ್ಕೆ ಸಿಕ್ಸರ್ ಬಾರಿಸಬಲ್ಲರು ಎಂಬಂತೆ ಕಾಣುತ್ತಾರೆ. ಆಫ್ ಸೈಡ್ ಮತ್ತು ಮಿಡ್ ವಿಕೆಟ್ ಭಾಗದಲ್ಲಿ ಅವರ ಹೊಡೆತಗಳು ವಿಶೇಷವಾಗಿವೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಟೆಗೆ 90 ಮೈಲಿ ವೇಗದಲ್ಲಿ ಬರುವ ಚೆಂಡುಗಳನ್ನೂ ವೈಭವ್ ಸುಲಭವಾಗಿ ಎದುರಿಸುತ್ತಿರುವುದು ಗಮನಾರ್ಹ. ಚೆಂಡಿನ ವೇಗ ಮತ್ತು ದಿಕ್ಕನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೊಡೆತ ಬಾರಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಕುಕ್ ಹೇಳಿದ್ದಾರೆ.

ಭಾರತ ತಂಡಕ್ಕೆ ಆಯ್ಕೆ ಮಾಡುವ ಆತುರ ಬೇಡ!

ವೈಭವ್ ಅವರನ್ನು ಭಾರತ ಹಿರಿಯ ತಂಡಕ್ಕೆ ಸೇರಿಸಬೇಕೆಂಬ ಅಭಿಮಾನಿಗಳ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಕುಕ್, ಆಯ್ಕೆ ವಿಚಾರದಲ್ಲಿ ತಾಳ್ಮೆ ವಹಿಸುವಂತೆ ಹೇಳಿದ್ದಾರೆ. "ಮುಂದಿನ ಹಂತಕ್ಕೆ ತಲುಪಬೇಕಾದರೆ ವೈಭವ್ ಈಗಾಗಲೇ ಮಾಡುತ್ತಿರುವ ಪರಿಶ್ರಮಕ್ಕಿಂತಲೂ ಹೆಚ್ಚಿನ ಶ್ರಮ ವಹಿಸಬೇಕು. ಹೊಸ ವಿಚಾರಗಳನ್ನು ಕಲಿಯಲು ಮತ್ತು ತಮ್ಮ ಆಟದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಿದ್ಧರಿರಬೇಕು. ಅವರು ಕಲಿಯುವ ಆಸಕ್ತಿ ಹೊಂದಿರುವ ಆಟಗಾರನಂತೆ ಕಾಣುತ್ತಾರೆ. ಸರಿಯಾದ ಸಮಯದಲ್ಲಿ ಕೋಚ್‌ಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿರಬೇಕು" ಎಂದು ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್‌ಗೆ ಹೋಲಿಕೆ ಬೇಡ!

ವೈಭವ್ ಅವರ ಆಟವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳಿಗೆ ಹೋಲಿಸಲಾಗುತ್ತಿದೆ. ಆದರೆ, ಇಂತಹ ಹೋಲಿಕೆಗಳು ಯುವ ಆಟಗಾರನ ಮೇಲೆ ಅನಗತ್ಯ ಒತ್ತಡ ಸೃಷ್ಟಿಸಬಹುದು ಎಂದು ಕುಕ್ ಎಚ್ಚರಿಸಿದ್ದಾರೆ.

"ಸಚಿನ್ ತೆಂಡೂಲ್ಕರ್ ಅವರೊಂದಿಗೆ ವೈಭವ್ ಅವರನ್ನು ಹೋಲಿಸುವುದು ಸ್ವಲ್ಪ ಅನ್ಯಾಯ. ಸಚಿನ್ ಆಡಿದ ಕಾಲಘಟ್ಟವೇ ವಿಭಿನ್ನವಾಗಿತ್ತು. ಅವರಂತೆ ಯಾರನ್ನೂ ಹೋಲಿಕೆ ಮಾಡಬಾರದು. ವೈಭವ್ ತಮ್ಮದೇ ರೀತಿಯಲ್ಲಿ ಕ್ರಿಕೆಟಿಗನಾಗಿ ಬೆಳೆಯಲು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ.

ಸಚಿನ್ ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಟಿ20 ಕ್ರಿಕೆಟ್ ಇರಲಿಲ್ಲ. ಹೀಗಾಗಿ ವೈಭವ್ ಮೇಲೆ ಸಚಿನ್ ಅವರ ಸಾಧನೆಯ ನಿರೀಕ್ಷೆಗಳನ್ನು ಹೇರಬಾರದು. ತಮ್ಮದೇ ಗುರಿ ಮತ್ತು ನಿರೀಕ್ಷೆಗಳನ್ನು ರೂಪಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕುಕ್ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸವಾಲು ಎದುರಾಗಬಹುದು

ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ವೈಭವ್ ತೋರಿಸುತ್ತಿರುವ ಆಕ್ರಮಣಕಾರಿ ಆಟವನ್ನು ಟೆಸ್ಟ್ ಕ್ರಿಕೆಟ್‌ನಲ್ಲೂ ಮುಂದುವರಿಸುವುದು ಸುಲಭವಲ್ಲ ಎಂದು ಕುಕ್ ಹೇಳಿದ್ದಾರೆ.

ವಿಶೇಷವಾಗಿ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ಚೆಂಡು ಎರಡೂ ದಿಕ್ಕಿನಲ್ಲಿ ಸ್ವಿಂಗ್ ಆಗುವುದರಿಂದ ಬ್ಯಾಟರ್‌ಗಳಿಗೆ ಸವಾಲು ಎದುರಾಗುತ್ತದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಪ್ರತಿಯೊಂದು ಸಂದರ್ಭದಲ್ಲೂ ಒಂದೇ ರೀತಿಯ ಆಟವಾಡಲು ಸಾಧ್ಯವಿಲ್ಲ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಅವರ ಪ್ರತಿಭೆ ಮತ್ತಷ್ಟು ಅರಳಲು ಆತುರಪಡಿಸದೆ ಸಮಯ ಮತ್ತು ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬುದು ಅಲಸ್ಟೈರ್ ಕುಕ್ ಅವರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.