ವಿದೇಶ

ಲಾಸ್ ಏಂಜಲೀಸ್‌ನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು, ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ತುರ್ತು ಸೂಚನೆ!-Video

ಲಾಸ್ ಏಂಜಲೀಸ್‌ನಲ್ಲಿ ಪ್ರಬಲ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲು, ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ತುರ್ತು ಸೂಚನೆ!-Video
ಲಾಸ್ ಏಂಜಲೀಸ್ ನಲ್ಲಿ ಪ್ರಬಲ ಭೂಕಂಪನ
Published On :

ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್‌ನಲ್ಲಿ ಶನಿವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲೇ ಭೂಕಂಪನ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಭೂಕಂಪದ ಪರಿಣಾಮ ಹಲವು ಮನೆಗಳು ಹಾಗೂ ಕಟ್ಟಡಗಳಿಗೂ ಹಾನಿಯಾಗಿದೆ.

ಭೂಕಂಪದ ತೀವ್ರ ಕಂಪನದಿಂದಾಗಿ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (LAX) ಇಳಿಯಲು ಮುಂದಾಗಿದ್ದ ವಿಮಾನವೊಂದರ ಲ್ಯಾಂಡಿಂಗ್ ಅನ್ನು ರದ್ದುಗೊಳಿಸಿ, ಮತ್ತೆ ಮೇಲಕ್ಕೆ ಹಾರುವಂತೆ ಸೂಚಿಸಲಾಗಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಸ್ಥಳೀಯ ಕಾಲಮಾನ ಶನಿವಾರ ಬೆಳಗ್ಗೆ ಸುಮಾರು 9.30ಕ್ಕೆ ಲಾಸ್ ಏಂಜಲೀಸ್ ಸಮೀಪದ ಮ್ಯಾನ್‌ಹ್ಯಾಟನ್ ಬೀಚ್ ಕರಾವಳಿಯಿಂದ ಸುಮಾರು 6 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ.

ಭೂಮಿಯ ಸುಮಾರು 7.6 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ. ಭೂಕಂಪದ ಬೆನ್ನಲ್ಲೇ ಹಲವು ಬಾರಿ ಭೂಮಿ ಕಂಪಿಸಿದ್ದು, 40ಕ್ಕೂ ಹೆಚ್ಚು ಕಂಪನಗಳು (Aftershocks) ವರದಿಯಾಗಿವೆ.

ವಿಮಾನ ನಿಲ್ದಾಣದಲ್ಲಿ ಗಾಜು ಪುಡಿ ಪುಡಿ

ಭೂಕಂಪದ ಪರಿಣಾಮ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 7ರಲ್ಲಿ ಗಾಜಿನ ಕಿಟಕಿಗಳು ಒಡೆದಿವೆ. ಕೆಲವು ಕಡೆ ಚಾವಣಿಯ ಫಲಕಗಳು ಕೆಳಗೆ ಬಿದ್ದಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಡೆಲ್ಟಾ ಏರ್‌ಲೈನ್ಸ್‌ನ ವಿಮಾನವೊಂದು ಲ್ಯಾಂಡಿಂಗ್‌ಗೆ ಸಿದ್ಧವಾಗಿತ್ತು.

ಆದರೆ ಭೂಮಿ ಕಂಪಿಸುತ್ತಿರುವುದನ್ನು ಗಮನಿಸಿದ ವಾಯು ಸಂಚಾರ ನಿಯಂತ್ರಕರು ವಿಮಾನವನ್ನು ಮತ್ತೆ ಮೇಲಕ್ಕೆ ಹಾರಿಸುವಂತೆ (Go Around) ಸೂಚಿಸಿದ್ದಾರೆ. ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಮತ್ತೊಂದು ಡೆಲ್ಟಾ ವಿಮಾನಕ್ಕೂ ಇದೇ ರೀತಿಯ ಸೂಚನೆ ನೀಡಲಾಗಿತ್ತು ಎಂದು ವರದಿಯಾಗಿದೆ.

ಮನೆಗಳ ಚಿಮಣಿ ಕುಸಿತ, ರಿಫೈನರಿಯಲ್ಲಿ ಹೊಗೆ

ಮ್ಯಾನ್‌ಹ್ಯಾಟನ್ ಬೀಚ್‌ನಲ್ಲಿ ಭೂಕಂಪದ ಪರಿಣಾಮ ಮನೆಯೊಂದರ ಚಿಮಣಿ ಕುಸಿದಿದೆ. ಎಲ್ ಸೆಗುಂಡೊ ಪ್ರದೇಶದಲ್ಲಿ ಕೆಲವು ಕಟ್ಟಡಗಳ ಹೊರಭಾಗಕ್ಕೆ ಹಾನಿಯಾಗಿದ್ದು, ಗಾಜುಗಳು ಒಡೆದಿವೆ. ಹಲವು ಮನೆಗಳಲ್ಲಿ ವಸ್ತುಗಳು ಕೆಳಗೆ ಬಿದ್ದಿವೆ.

ಇದೇ ವೇಳೆ, ಎಲ್ ಸೆಗುಂಡೊದಲ್ಲಿರುವ ಚೆವ್ರಾನ್ ತೈಲ ಸಂಸ್ಕರಣಾಗಾರದಿಂದ ದಟ್ಟ ಹೊಗೆ ಕಾಣಿಸಿಕೊಂಡಿದೆ. ಭೂಕಂಪದಿಂದಾಗಿ ಸಂಸ್ಕರಣಾಗಾರದ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಗಳು ಕಾರ್ಯನಿರ್ವಹಿಸಿದ್ದು, ಹೆಚ್ಚುವರಿ ಅನಿಲವನ್ನು ಹೊರಹಾಕುವ ಪ್ರಕ್ರಿಯೆ ಆರಂಭವಾಗಿದ್ದರಿಂದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಕಂಪನಿ ತಿಳಿಸಿದೆ.

106 ಅಗ್ನಿಶಾಮಕ ಕೇಂದ್ರಗಳಿಂದ ಪರಿಶೀಲನೆ

ಭೂಕಂಪದ ಹಿನ್ನೆಲೆಯಲ್ಲಿ ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ನಗರದ 106 ಅಗ್ನಿಶಾಮಕ ಕೇಂದ್ರಗಳ ಸಿಬ್ಬಂದಿಯನ್ನು ಕಟ್ಟಡಗಳು ಮತ್ತು ಮೂಲಸೌಕರ್ಯಗಳ ಪರಿಶೀಲನೆಗೆ ನಿಯೋಜಿಸಿತ್ತು.

ಮ್ಯಾನ್‌ಹ್ಯಾಟನ್ ಬೀಚ್‌ನ ಪಿಯರ್ ಸೇರಿದಂತೆ ಕೆಲವು ಕರಾವಳಿ ಪ್ರದೇಶಗಳಲ್ಲಿನ ಸಾರ್ವಜನಿಕ ಸ್ಥಳಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ನಗರದಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ದೊಡ್ಡ ಮಟ್ಟದ ಕಟ್ಟಡ ಹಾನಿಯೂ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯಾ ರಾಜ್ಯದ ತುರ್ತು ಸೇವೆಗಳ ಕಚೇರಿ ಸ್ಥಳೀಯ ಆಡಳಿತದೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಭೂಕಂಪದ ನಂತರದ ಕಂಪನಗಳ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

2014ರ ಬಳಿಕ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.