ಆಸ್ಕರ್ ರೇಸ್ ನಲ್ಲಿ ಬಾಹುಬಲಿ..?

ಭಾರತದ ಅತಿದೊಡ್ಡ ಮೋಷನ್ ಪಿಕ್ಚರ್ ಎಂಬ ಖ್ಯಾತಿಗಳಿಸಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳುತ್ತಿದೆಯೇ..?
ಬಾಹುಬಲಿ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
ಬಾಹುಬಲಿ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)

ಹೈದರಾಬಾದ್: ಭಾರತದ ಅತಿದೊಡ್ಡ ಮೋಷನ್ ಪಿಕ್ಚರ್ ಎಂಬ ಖ್ಯಾತಿಗಳಿಸಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ  ನಾಮ ನಿರ್ದೇಶನಗೊಳುತ್ತಿದೆಯೇ..?

ಹೌದು..ಇಂತಹುದೊಂದು ಅನುಮಾನ ಇದೀಗ ತೆಲುಗು ಫಿಲ್ಮ್ ನಗರದಲ್ಲಿ ಹಬ್ಬಿದೆ. ತನ್ನ ವಿಶಿಷ್ಟ ಮೇಕಿಂಗ್ ಮತ್ತು ಭಾರಿ ಬಜೆಟ್ ನಿಂದಲೇ ಚರ್ಚೆಗೆ ಗ್ರಾಸವಾಗಿದ್ದ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿಯ ಕದ ತಟ್ಟುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿ ಪ್ರಸ್ತುತ ಹೈದರಾಬಾದಿನಲ್ಲಿ ಮೊಕ್ಕಾಂ ಹೂಡಿದ್ದು, ಚಿತ್ರಗಳ ಪಟ್ಟಿ ತಯಾರಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಆಸ್ಕರ್ ಪ್ರಶಸ್ತಿಗೆ 45 ಭಾರತೀಯ ಚಿತ್ರಗಳನ್ನು ಆಯ್ಕೆ ಮಾಡುವ ಸಲುವಾಗಿ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಅಮುಲ್ ಪಾಲೇಕರ್ ನೇತೃತ್ವದ ಆಯ್ಕೆ ಸಮಿತಿ  ಸದಸ್ಯರು ಹೈದರಾಬಾದಿನಲ್ಲಿ ತಳವೂರಿದ್ದು, ಭಾರತೀಯ ಚಿತ್ರಗಳ ಪಟ್ಟಿ ತಯಾರಿಸುತ್ತಿದ್ದಾರೆ. ಇನ್ನು ತೆಲುಗು ಫಿಲ್ಮ್ ಚೇಂಬರ್ ಕೂಡ ಅಧಿಕೃತವಾಗಿ ಬಾಹುಬಲಿಯನ್ನು ಆಸ್ಕರ್  ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಅಧಿಕೃತವಾಗಿ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ತೆಲುಗು ಚಿತ್ರರಂಗದ ವತಿಯಿಂದ ಬಾಹುಬಲಿ ಆಸ್ಕರ್ ಪ್ರಶಸ್ತಿಯ  ರೇಸ್ ಗೆ ಸಿದ್ಧವಾಗುತ್ತಿದೆ.

ಇನ್ನು ಆಯ್ಕೆ ಸಮಿತಿ ಈಗಾಗಲೇ ಸಿದ್ದಪಡಿಸಿದೆ ಎಂದು ಹೇಳಲಾಗುತ್ತಿರುವ ಪಟ್ಟಿಯಲ್ಲಿ ಅಮಿರ್ ಖಾನ್ ನಟನೆಯ ಪಿಕೆ, ಅನುರಾಗ್ ಕಶ್ಯಪ್ ಅವರ ಅಗ್ಲಿ, ವಿಶಾಲ್ ಭಾರದ್ವಾಜ್ ಅವರ  ಹೈದರ್, ಪ್ರಿಯಾಂಕಾ ಛೋಪ್ರಾ ಅವರ ಮೇರಿಕೋಮ್ ಚಿತ್ರಗಳಿದ್ದು, ಈ ಘಟಾನುಘಟಿಗಳ ಚಿತ್ರಗಳೊಂದಿಗೆ ಬಾಹುಬಲಿ ಕೂಡ ಸ್ಪರ್ಧಿಸುವ ಸಾಧ್ಯತೆ ಇದೆ. ಇದಲ್ಲದೆ ಇತ್ತೀಚೆಗೆ  ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಮಸಾನ್, ತಮಿಳಿನ ಕಾಕಾಮುಟ್ಟೈ, ಉಮ್ರಿಕಾ ಚಿತ್ರಗಳು ಆಸ್ಕ್ರರ್ ರೇಸ್ ನಲ್ಲಿವೆ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ದೇಶಕ  ಕೆ.ವಿಶ್ವನಾಥ್ ಅವರ ಸ್ವಾತಿಮುತ್ಯಂ ಚಿತ್ರದ ಬಳಿಕ ಈ ವರೆಗೂ ಯಾವುದೇ ತೆಲುಗು ಚಿತ್ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರಲಿಲ್ಲ. ಒಂದು ವೇಳೆ ಬಾಹುಬಲಿ ಆಸ್ಕರ್ ಪ್ರಶಸ್ತಿ  ಪಟ್ಟಿಗೆ ಆಯ್ಕೆಯಾದರೆ ಸ್ವಾತಿಮುತ್ಯಂ ಬಳಿಕ ಆಯ್ಕೆಯಾದ 2ನೇ ತೆಲುಗು ಚಿತ್ರ ಎಂಬ ಖ್ಯಾತಿಪಡೆಯಲಿದೆ.

ತನ್ನ ಮೇಕಿಂಗ್ ನಿಂದಲೇ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಾಹುಬಲಿ ಚಿತ್ರ ಕಳೆದ ಜುಲೈ 10 ರಂದು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ  ತೆರೆಕಂಡಿತ್ತು. ಅಷ್ಟೇ ಅಲ್ಲದೇ ಚಿತ್ರದ ಗಳಿಕೆ ಈ ವರೆಗೂ ಸುಮಾರು 600 ಕೋಟಿ ರುಗಳಾಗಿದ್ದು, ಇದೂ ಕೂಡ ಒಂದು ದಾಖಲೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com