ನಟಿ ಆರತಿ ಅಗರ್ವಾಲ್
ನಟಿ ಆರತಿ ಅಗರ್ವಾಲ್

3 ಕೆಜಿ ತೂಕ ಕಳೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಆರತಿ ಅಗರ್ವಾಲ್..?

"ಜಂಕ್ಷನ್ ಲೋ ಜಯಮಾಲಾ" ಎಂಬ ನಾಯಕಿ ಪ್ರಧಾನ ಚಿತ್ರಕ್ಕಾಗಿ 3 ಕೆಜಿ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಹೃದಯಾಘಾತಕ್ಕೆ ಒಳಗಾಗಿ ಆರತಿ ಅಗರ್ವಾಲ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ...
Published on

ಹೈದರಾಬಾದ್: ಶನಿವಾರ ಹೃದಯಾಘಾತಕ್ಕೆ ಒಳಗಾಗಿ ಮತಪಟ್ಟಿದ್ದ ತೆಲುಗು ಚಿತ್ರ ನಟಿ ಆರತಿ ಅಗರ್ವಾಲ್ ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡುತ್ತಿದ್ದು, ಬೊಜ್ಜು ಸಮಸ್ಯೆಯಿಂದಾಗಿ ಪಾರಾಗಲು ಆರತಿ ಪಡೆದಿದ್ದ ಚಿಕಿತ್ಸೆಯೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಬೊಜ್ಜಿನ ಸಮಸ್ಯೆಯಿಂದಾಗಿ ಬಹುದಿನಗಳಿಂದ ಬಳಲುತ್ತಿದ್ದ ನಟಿ ಆರತಿ ಅಗರ್ವಾಲ್ ಇದೇ ಕಾರಣಕ್ಕಾಗಿ ಹಲವು ಅವಕಾಶಗಳನ್ನು ಕಳೆದುಕೊಂಡಿದ್ದರು. ಅವರು ನಾಯಕ ನಟಿಯಾಗಿ ಅಭಿನಯಿಸಿದ ಅಂದಾಲ ರಾಮುಡು ಚಿತ್ರದ ಬಳಿಕ ಆರತಿಗೆ ಅವಕಾಶಗಳ ಬರ ಎದುರಾಯಿತು. ಈ ನಡುವೆ ವೈಯುಕ್ತಿಕ ಜೀವನದಲ್ಲಿಯೂ ನೆಮ್ಮದಿ ಕಳೆದುಕೊಂಡ ಆರತಿ ಅಗರ್ವಾಲ್ 2005ರಲ್ಲಿ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಪಟ್ಟಿದ್ದರು. ನಟ ತರುಣ್ ಅವರೊಂದಿಗಿನ ಸಂಬಂಧದ ಕುರಿತಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಊಹಾಪೋಹಗಳಿಂದ ತೀವ್ರ ನೊಂದಿದ್ದ ಆರತಿ ಅಗರ್ವಾಲ್ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿ ಉಳಿಸಲಾಗಿತ್ತು. ನಂತರ ಒಂದಷ್ಟು ದಿನ ಮಾಧ್ಯಮಗಳಿಂದ ದೂರವುಳಿದಿದ್ದ ಆರತಿ ಅಗರ್ವಾಲ್ 2007ರಲ್ಲಿ ಉಜ್ವಲ್ ಕುಮಾರ್ ಎಂಬ ಉಧ್ಯಮಿಯನ್ನು ಮದುವೆಯಾಗುವ ಮೂಲಕ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಬರುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದರು. ಆದರೆ ಕೆಲವೇ ವರ್ಷಗಳಲ್ಲಿ ವೈವಾಹಿಕ ಜೀವನದಲ್ಲಿಯೂ ಸಮಸ್ಯೆ ಉಂಟಾದಾಗ 2009ರಲ್ಲಿ ತಮ್ಮ ಪತಿಗೆ ವಿಚ್ಛೇದನ ನೀಡಿ ಹೊರಬಂದರು.

ಬಳಿಕ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದ್ದರಾದರೂ ಅವು ಯಾವುವೂ ಆರತಿ ಅವರನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರುವಂತೆ ಮಾಡುವಲ್ಲಿ ವಿಫಲವಾಗಿದ್ದವು. ಹೀಗಾಗಿ ದೊಡ್ಡ ಹಿಟ್ ಗಾಗಿ ಕಾದಿದ್ದ ಆರತಿ ಅಗರ್ವಾಲ್ ಅವರಿಗೆ ಬಂದಿದ್ದೇ "ಜಂಕ್ಷನ್ ಲೋ ಜಯಮಾಲಾ" ಎಂಬ ನಾಯಕಿ ಪ್ರಧಾನ ಚಿತ್ರ. ಕಥೆ ಕೇಳುತ್ತಿದ್ದಂತೆಯೇ ಚಿತ್ರಕ್ಕೆ ಓಕೆ ಎಂದ ಅವರು ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾದರು. ಸುಮಾರು 89 ಕೆಜಿಗಳಷ್ಟು ತೂಕವಿದ್ದ ಆರತಿ ಬೊಜ್ಜು ನಿವಾರಣಾ ಚಿಕಿತ್ಸೆಗೆ ಒಳಗಾಗಿದ್ದರು.

ಬಳಿಕ ತಮ್ಮ ತೂಕವನ್ನು 63 ಕೆಜಿಗಳಿಗೆ ಇಳಿಸಿಕೊಂಡಿದ್ದರು. ಆದರೆ ಇಷ್ಟಕ್ಕೇ ಸುಮ್ಮನಾಗದ ಆರತಿ ಮತ್ತೆ ಮೂರು ಕೆಜಿ ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ತಮ್ಮ ಹುಟ್ಟೂರಾದ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಲಿಪೋಸಕ್ಷನ್‌ (ಚರ್ಮದ ಕೆಳಗಿನ ಕೊಬ್ಬು ತೆಗೆವ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ವಿಫಲವಾಗಿ ಆರತಿ ಅವರು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

ಇನ್ನು ಈ ಬಗ್ಗೆ ನಿನ್ನೆ ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡಿರುವ ಅವರ ಮ್ಯಾನೇಜರ್, ಆರತಿ ಬಹುದಿನಗಳಿಂದ ಸ್ಥೂಲಕಾಯ ಮತ್ತು ಶ್ವಾಸಕೋಶ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಲಿಪೋಸಕ್ಷನ್‌ (ಚರ್ಮದ ಕೆಳಗಿನ ಕೊಬ್ಬು ತೆಗೆವ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ವಿಫ‌ಲಗೊಂಡು ಪರಿಸ್ಥಿತಿ ಬಿಗಡಾಯಿಸಿ ಹೃದಯಾಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಚಿಕಿತ್ಸೆ ಫಲಕಾರಿಯಾಗಿದ್ದರೆ ಇದೇ ಜೂನ್ 20ರಂದು ಆರತಿ ಅಗರ್ವಾಲ್ ಭಾರತಕ್ಕೆ ವಾಪಸಾಗಿ ಜಂಕ್ಷನ್ ಲೋ ಜಯಮಾಲಾ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಜಂಕ್ಷನ್ ಲೋ ಜಯಮಾಲಾ ಚಿತ್ರವು ತೆಲುಗಿನ ಖ್ಯಾತ ಲೇಖಕ ಸುಬ್ರಮಣ್ಯ ಅವರು ಬರೆದಿರುವ ಕ್ಯಾಬರೇ ಡ್ಯಾನ್ಸರ್ ಕಾದಂಬರಿಯ ಆಧಾರಿತವಾದ ಚಿತ್ರವಾಗಿದ್ದು, ಚಿತ್ರದಲ್ಲಿ ಆರತಿ ಅಗರ್ವಾಲ್ ದ್ವಿಪಾತ್ರಾಭಿನಯದಲ್ಲಿ ಕಾಣಿಸಿಕೊಳ್ಳಬೇಕಿತ್ತು.

ಇನ್ನು ಆರತಿ ಅಗರ್ವಾಲ್ ಅವರು ಇತ್ತೀಚೆಗೆ ನಟಿಸಿದ ಚಿತ್ರಗಳಾದ ರಣಂ-2 ಈಗಾಗಲೇ ಬಿಡುಗಡೆಯಾಗಿದ್ದು, ಆಪರೇಷನ್ ಗ್ರೀನ್ ಹಂಟ್ ಚಿತ್ರ ಈಗಷ್ಟೇ ತೆರೆಕಾಣಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com