40 ಅಡಿ ಶಿವನ ವಿಗ್ರಹದ ಎದುರು ಅಘೋರಿಗಳ 'ನಾನಿ' ಹಾಡು

ರಾಘವೇಂದ್ರ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ನಾನಿ ಚಿತ್ರಕ್ಕೆ ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ಇತ್ತೀಚೆನೆ ನಡೆಯಿತು.
ನಾನಿ ಚಿತ್ರ ತಂಡ
ನಾನಿ ಚಿತ್ರ ತಂಡ

ರಾಘವೇಂದ್ರ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ನಾನಿ ಚಿತ್ರಕ್ಕೆ ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣ ಇತ್ತೀಚೆನೆ ನಡೆಯಿತು. ಬೆಂಗಳೂರಿನ ಹೊರ ವಲಯದಲ್ಲಿ ಹಾಡಿಗಾಗಿ ಸೆಟ್ ಹಾಕಲಾಗಿತ್ತು. ನಲವತ್ತು ಅಡಿ ಎತ್ತರದ ಈಶ್ವರ ವಿಗ್ರಹ. 100 ಕ್ಕೂ ಹೆಚ್ಚು ಕಲಾವಿದರು ಹಾಗೂ ಅಘೋರಿ ವೇಷಧಾರಿಗಳು ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ನಾಯಕಿ ಪ್ರಿಯಾಂಕಳಿಗೆ ದೆವ್ವ ಬಿಡಿಸುವ ಈ ಹಾಡಿನಲ್ಲಿ ನಡೆಯಿತು.
ರಮೇಶ್ ಪಂಡಿತ್ ದೆವ್ವ ಬಿಡಿಸುವ ಮಂತ್ರವಾದಿಯಾಗಿ ಹಾಡಿನಲ್ಲಿ ಗಮನ ಸೆಳೆದರು. ಹೀಗೆ 40 ಅಡಿ ಶಿವನ ವಿಗ್ರಹ ಮೂರ್ತಿ ಮುಂದೆ  ನಾನಿ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯಿತು.

ಗುಜರಾತ್ ನ ಹಳ್ಳಿಯೊಂದರಲ್ಲಿ ಸರಿಸುಮಾರು 18 ವರ್ಷಗಳ ಹಿಂದೆ  ನಡೆದ ಬೆಂಕಿ ಆಕಸ್ಮಿಕದ ನೈಜ ಕಥೆಯನ್ನಾಧರಿಸಿ ನಿರ್ಮಾಣವಾಗುತ್ತಿರುವ ಚಿತ್ರ ನಾನಿ. ಹಂಸಲೇಖರ ಶಿಷ್ಯ ರಾಘವೇಂದ್ರ ಗೊಲ್ಲಹಳ್ಳಿ ಮೊದಲ ಬಾರಿಗೆ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ನೃತ್ಯ ನಿರ್ದೇಶಕ ತ್ರಿಭುವನ್ ಕೂಡ ಅಘೋರಿಯೊಬ್ಬನ ವೇಷ ಧರಿಸಿ ಕುಣಿಯುತ್ತಿದ್ದುದು ವಿಶೇಷವಾಗಿತ್ತು. ಅಘೋರಿಗಳ ಗುರುವಾಗಿ ರಮೇಶ್ ಪಂಡಿತ್ ಅಭಿನಯಿಸಿದ್ದರು. ಸೂರತ್ ನಿಂದ 70 ಕಿ.ಮೀ ದೂರದ ಸಾತಿವಾರ ಗ್ರಾಮದಲ್ಲಿನ ಮನೆಯೊಂದು ಆಕಸ್ಮಿಕವಾಗಿ ಸುಟ್ಟು ಕರಕಲಾಗುತ್ತದೆ. ಆ ಮನೆಯಲ್ಲಿದ್ದ 13 ವರ್ಷದ ಪುಟ್ಟ ಬಾಲಕಿ ನಾನಿ ಕೂಡ ಬೆಂದು ಹೋಗುತ್ತಾಳೆ. ಅಂದಿನಿಂದಲೂ ಆ ಮನೆ ಹಾಗೆ ಇದ್ದು  ಅದರಲ್ಲಿ ನಾನಿಯ ಆತ್ಮ ಇದೆಯೆಂದು ಹಳ್ಳಿಯ ಜನ ನಂಬಿದ್ದಾರೆ. ಅದಕ್ಕವರು ಸಾಕಷ್ಟು ನಿದರ್ಶನಗಳನ್ನು ಕೂಡ ಕೊಡುತ್ತಾರೆ. ಈ ಹಿಂದೆ ಬಣ್ಮದ ಕೊಡೆ ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದ ಬೇಬಿ ಸುಹಾಸಿನಿ ಉಲ್ಲಿ ನಾನಿಯಾಗಿ ಕಾಣಿಸಿಕೊಂಡಿದ್ದಾರೆ.
ಕಿರುತೆರೆ ಕಲಾವಿದ ಮನೀಶ್ ಆರ್ಯ ಹಾಗೂ ಪ್ರಿಯಾಂಕರಾವ್ ನಾಯಕಿಯಾಗಿ ನಟಿಸಿದ್ದಾರೆ.

ತುಳುನಾಡಿನ ಗಜೇಂದ್ರನ್ ಎಂಬುವವರು ಈ ಬೃಹತ್ ಶಿವನ ವಿಗ್ರಹವನ್ನುನಿರ್ಮಿಸಿದ್ದು ಈ ಹಿಂದೆ ಮಗಧೀರ, ಶಿವ, ಸಾರಥಿ ಮದಲಾದ ಚಿತ್ರಗಳಿಗೆ ಶಿವನ ಮೂರ್ತಿಯನ್ನು ಇವರೇ ತಯಾರಿಸಿದ್ದರು. ಈ ಶಿವನ ವಿಗ್ರಹದ ಬಳಿ ಸುಮಾರು 5 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದೆ.
ನಾನಿಯ ಆತ್ಮವನ್ನು ಹೊಡೆದೋಡಿಸಲು ನಾಯಕ ಹಾಗೂ ನಾಯಕಿ ಮತ್ತು ಅಘೋರಿಗಳು ಶಿವನನ್ನು ಪ್ರಾರ್ಥಿಸಿ  ಹಾಡುತ್ತಿರುವ ದೃಷ್ಯದೊಂದಿಗೆ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳಲಿದೆ. ಗುಜರಾತ್ ನಲ್ಲಿ ಘಟನೆ ನಡೆದ ಆ ಮನೆಯಲ್ಲೂ ಮೂರು ದಿವಗಳ ಕಾಲ ಚಿತ್ರೀಕರಣ ನಡೆಸಿಕೊಂಡು ಬಂದಿದ್ದೇವೆ. ಈ ವರೆಗೆ ಒಟ್ಟು 41 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು ಈ ಹಾಡು ಹಾಗೂ ಸಣ್ಣ ಪುಟ್ಟ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗುವುದು. ಒಟ್ಟು 5 ದಿನಗಳ ಕಾಲ ನಡೆಯಲಿರುವ ಈ ಹಾಡಿಗೆ 25 ಲಕ್ಷ ರೂ. ಖರ್ಚಾಗಲಿದೆ. ಎಂದು ಹಾಡಿನ ಹಾಗೂ ಚಿತ್ರದ ಬಗ್ಗೆ ನಿರ್ದೇಶಕ ರಾಘವೇಂದ್ರ ಸಂಪೂರ್ಣ ವಿವರ ನೀಡಿದರು.

ಗುಂಡ್ಲುಪೇಟೆ ಸುರೇಶ್ ನಾನಿಯ ಕಥೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಾನಿ ಚಿತ್ರದ ಮೂಹೂರ್ತದ ದಿನವೂ ಸಾವಿರಾರು ದೀಪಗಳೊಂದಿಗೆ ರಮೇಶ್ ಪಂಡಿತ್ ಅಘೋರಿ ವೇಷದಲ್ಲಿ ಶಿವನನ್ನು ಆರಾಧಿಸುವ ಸನ್ನಿವೇಶವನ್ನು ಸೆರೆ ಹಿಡಿಯಲಾಯಿತು. ಹಿರಿಯ ಕಲಾವಿದೆ ಸುಹಾಸಿನಿ ಈ ಚಿತ್ರದಲ್ಲಿ ಬಾಲಕಿ ನಾನಿಯ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ತಂದೆಯಾಗಿ ನಟ ಜೈ ಜಗದೀಶ್, ಅಭಿನಯಿಸಿದ್ದಾರೆ. ರಮೇಶ್ ಕುಮಾರ್ ಜೈನ್ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com