ಸಂಗೀತ ನಿರ್ದೇಶಕ ರಾಜನ್ 80ರ ಸಂಭ್ರಮ: ಸಂಗೀತ ಸುಧೆಯಲ್ಲಿ ಮಿಂದೆದ್ದ ಬೆಂಗಳೂರಿಗರು!

ಭಾನುವಾರದ ಸಂಜೆ ಅರ್ಧಕ್ಕರ್ಧ ಬೆಂಗಳೂರು ಮಳೆಯಲ್ಲಿ ತೋಯ್ದು ಹೋದಂತಿದ್ದರೆ ಕುಮಾರ ಸ್ವಾಮಿ ಲೇಔಟ್‍ನ ದಯಾನಂದ್ ಸಾಗರ್ ಕಾಲೇಜು ಸಭಾಂಗಣದಲ್ಲಿ ಮಾತ್ರ ಸಂಗೀತ ಪ್ರೇಮಿಗಳೆಲ್ಲಾ ಮಿಂದು ಹೋಗಿದ್ದರು...
ರಾಜನ್
ರಾಜನ್

ಭಾನುವಾರದ ಸಂಜೆ ಅರ್ಧಕ್ಕರ್ಧ ಬೆಂಗಳೂರು ಮಳೆಯಲ್ಲಿ ತೋಯ್ದು ಹೋದಂತಿದ್ದರೆ ಕುಮಾರ ಸ್ವಾಮಿ ಲೇಔಟ್‍ನ ದಯಾನಂದ್ ಸಾಗರ್ ಕಾಲೇಜು ಸಭಾಂಗಣದಲ್ಲಿ ಮಾತ್ರ ಸಂಗೀತ ಪ್ರೇಮಿಗಳೆಲ್ಲಾ ಮಿಂದು ಹೋಗಿದ್ದರು. ಆದರೆ ಅದಕ್ಕೆ ಕಾರಣ ಮಳೆಯಾಗಿರಲಿಲ್ಲ; ತುಂಬಿ ಹರಿದ ರಾಜನ್ ನಾಗೇಂದ್ರರ ಸಂಗೀತ ರಸಧಾರೆಯ ಪ್ರಭಾವ ಹಾಗಿತ್ತು! ಮಹಾ ಸಿಮೆಂಟ್‍ನವರು ಪ್ರಾಯೋಜಿಸಿದ್ದ ‘ರಾಜನ್ ಸಹಸ್ರ ಚಂದ್ರದರ್ಶನ’ ಕಾರ್ಯಕ್ರಮ ಶುರುವಾಗಿದ್ದು ಸಂಗೀತ ನಿರ್ದೇಶಕ ರಾಜನ್‍ರ ‘ಸಪ್ತ ಸ್ವರಾಂಜಲಿ’ ಸಂಗೀತ ವಿದ್ಯಾರ್ಥಿಗಳ ಗಣೇಶ ಪ್ರಾರ್ಥನೆಯೊಂದಿಗೆ. ಅದಕ್ಕೂ ಮೊದಲು ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ, ಹಿರಿಯ ನಿರ್ದೇಶಕ ಕೆಎಸ್‍ಎಲ್‍ಸ್ವಾಮಿ, ರಾಮಚಂದ್ರ ಗುರೂಜಿ, ಶಿವಕುಮಾರ ಸ್ವಾಮಿ ಮೊದಲಾದವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಗಿತ್ತು.

ರಾಜನ್‍ರಿಗೆ ಶಿಷ್ಯವರ್ಗದಿಂದ ಗುರುವಂದನೆ ಸಂದಾಯವಾಗುತ್ತಿದ್ದಂತೇ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೂಡ ಪತ್ನಿ ಸಮೇತರಾಗಿ ವೇದಿಕೆಯೇರಿದರು. ನಾನು ಸಹ 1969ರಿಂದಲೇ ರಾಜನ್‍ರ ಶಿಷ್ಯ ಎಂದ ಅವರು ಗುರುವಂದನೆಗೈದರು. ‘ಇವರ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡುವ ಅವಕಾಶ ಪಡೆದಿರುವುದು ನಾನೇ. ನನ್ನ ಹೆಮ್ಮೆ ಸಂಖ್ಯೆಗಷ್ಟೇ ಸೀಮಿತವಲ್ಲ; ಅವರಿಂದ ಸ್ವರಭಿಕ್ಷೆಯನ್ನೇ ಪಡೆದಿದ್ದೇನೆ. ಇಂದಿಗೂ ನಾನು ಸಂಗೀತ ಕಾರ್ಯಕ್ರಮ ನೀಡಲು ಹೋದಲ್ಲಿ ಅದರಲ್ಲಿ 25% ದಷ್ಟು ಹಾಡುಗಳು ರಾಜನ್ ನಾಗೇಂದ್ರರ ಸಂಗೀತದ್ದೇ ಆಗಿರುತ್ತದೆ. ನನ್ನ ಗಾಯನ ಬದುಕಿನ ಬಗ್ಗೆ ನಾನೇನಾದರೂ ಪುಸ್ತಕ ಬರೆದಲ್ಲಿ ಅದರ ದೊಡ್ಡ ಅಧ್ಯಾಯವಾಗಿ ರಾಜನ್ ಇರುತ್ತಾರೆ. ಅವರಿಗೆ ಹಾಡಿ ಸಂತೃಪ್ತಿ ನೀಡುವುದು ಕಷ್ಟ. ಒಂದು ಸಣ್ಣ ಸ್ವರದ ಏರಿಳಿತವಾದರೂ 30 ಟೇಕ್ ತನಕ ತೆಗೆದುಕೊಂಡು ಹೋಗಿ ತಿದ್ದುವ ಮಹಾನುಭಾವ ಅವರು’ ಎಂದ ಎಸ್ಪಿಬಿ ‘ಒನ್ ಮೋರ್ ಟೇಕ್’ ಎಂದು ರಾಜನ್ ದನಿಯಲ್ಲಿ ಹೇಳಿದಾಗ ಸಭೆಯಲ್ಲಿ ಕರತಾಡನ ತುಂಬಿತು. ಕನ್ನಡದ ಜನಪ್ರಿಯ ಗೀತೆಗಳನ್ನು ತಮ್ಮ ಮಾತೃಭಾಷೆಯಲ್ಲಿಯೂ ಹಾಡಬೇಕೆನ್ನುವ ಆಶೆಯಿಂದ ‘ಬಾನಲ್ಲು ನೀನೇ’ ಮೊದಲಾದ ಹಾಡುಗಳನ್ನು ತೆಲುಗಲ್ಲಿಯೂ ಬಳಸುವಂತೆ ತಾನೇ ಒತ್ತಡ ಹೇರುತ್ತಿದ್ದೆನೆಂಬುದನ್ನೂ ಎಸ್‍ಪಿಬಿಯವರು ಸ್ಮರಿಸಿಕೊಂಡರು. ಇದೇ ಸಮಯದಲ್ಲಿ ಡ್ರಮ್ ಮಾಸ್ಟರ್ ಶಿವಮಣಿ, ಗಾಯಕಿ ಬಿಕೆ ಸುಮಿತ್ರಾ, ನಿರ್ದೇಶಕ ಭಗವಾನ್ ಮೊದಲಾದ ಗಣ್ಯರು ಕೂಡ ರಾಜನ್‍ರಿಗೆ ವಂದನೆ-ಅಭಿನಂದನೆಗಳನ್ನು ಸಲ್ಲಿಸಿದರು. ರಾಜನ್‍ರಂತೂ ಮೊದಲೇ ಆಯೋಜಿಸಿದ್ದಂತೆ ತಮ್ಮ ಬೆಳವಣಿಗೆಗೆ ಕಾರಣಕರ್ತೃಗಳಾದ ಎಸ್‍ಪಿಬಿ, ಕೆಎಸ್‍ಎಲ್‍ಸ್ವಾಮಿ, ಭಗವಾನ್, ಕವಿ ದೊಡ್ಡರಂಗೇಗೌಡ, ನಟ ಶಿವರಾಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಮುದ್ದು ಮೋಹನ್, ಲಹರಿ ವೇಲು ಮತ್ತು ಅತಿಥಿಗಳಾಗಿ ಆಗಮಿಸಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್, ಮನೋಮೂರ್ತಿ.. ಹೀಗೆ ಹಲವಾರು ಮಂದಿಗೆ ಫಲ, ತಾಂಬೂಲ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

ಸ್ನೇಹಿತರೇ ನಿಮಗೆ ಸ್ವಾಗತ ಎಂಬ ಜನಪ್ರಿಯ ಗೀತೆಯೊಂದಿಗೆ ಆರಂಭಗೊಂಡ ರಸಸಂಜೆಯಲ್ಲಿ ತೇರಾನೇರಿ, ಹಳ್ಳಿಯಾದರೇನು ಶಿವಾ, ಜೇನಿನ ಹೊಳೆಯೋ, ನಾವಾಡುವ ನುಡಿಯೇ ಮೊದಲಾದ ಗೀತೆಗಳಿಗೆ ಅವರ ಶಿಷ್ಯವೃಂದ ದನಿಯಾಯಿತು. ‘ಎಂದೆಂದೂ ನಿನ್ನನ್ನು ಮರೆತು’ ಗೀತೆಗೆ ಬದ್ರಿ ಪ್ರಸಾದ್ ಜೊತೆಗೆ ವಾಣಿ ಜಯರಾಮ್ ಕೊರಳು ನೀಡಿದ್ದು ವಿಶೇಷವಾಗಿತ್ತು. ಅನುರಾಧ ಭಟ್ ಕಂಠದಲ್ಲಿ ‘ಇಂದು ಎನಗೆ ಗೋವಿಂದಾ’ ಹಾಡಿನಿಂದ ಭಕ್ತಿ ತಂದರೆ, ಸಿಂಚನಾ ದೀಕ್ಷಿತ್ ‘ಒಮ್ಮೆ ನಿನ್ನನ್ನೂ ಕಣ್ತುಂಬಾ’ ಎಂದು ಪ್ರೇಮದ ಸಿಂಚನ ನಡೆಸಿದರು. ‘ಪವಡಿಸು ಪರಮಾತ್ಮ’ ಮತ್ತು ‘ಉಷೆ ಮೂಡಿದಾಗ’ ಹಾಡುಗಳು ಖುದ್ದು ಎಸ್ಪಿಬಿ ಕಂಠದಲ್ಲಿ ಮೊಳಗಿದ ಬಳಿಕ, ಶಿವಮಣಿಯ ಡ್ರಮ್‍ಬೀಟ್ಸ್‍ನಲ್ಲಿ ಶ್ರೋತೃಗಳ ಚಪ್ಪಾಳೆಯೂ ಐಕ್ಯವಾಯಿತು. ಕಾರ್ಯಕ್ರಮದುದ್ದಕ್ಕೂ ಫಣಿರಾಮಚಂದ್ರರ ನಿರ್ದೇಶನದ ತಮಾಷೆಯ ರೂಪಕಗಳೊಂದಿಗೆ ಹಾಡುಗಳು ಮೂಡಿದ್ದು ಮತ್ತು ಅವುಗಳಲ್ಲಿ ರಾಜನ್ ಶಿಷ್ಯರೊಂದಿಗೆ ರವೀಂದ್ರನಾಥ್ ಮತ್ತು ವಿ ಮನೋಹರ್ ಕೂಡ ಪಾಲ್ಗೊಂಡಿದ್ದು ವಿಭಿನ್ನವಾಗಿತ್ತು. ವೇದಿಕೆಯಲ್ಲಿರಿಸಲಾದ ಪರದೆಯ ಮೇಲೆ ಬಂದು ಪಾರ್ವತಮ್ಮ ರಾಜಕುಮಾರ್, ಭಾರತೀ ವಿಷ್ಣುವರ್ಧನ್ ರಾಜನ್‍ರಿಗೆ ಶುಭಕೋರಿದರೆ ಹಂಸಲೇಖಾ, ಎಸ್‍ವಿ ರಾಜೇಂದ್ರ ಸಿಂಗ್ ಬಾಬು, ಶಿವರಾಜ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಮೊದಲಾದವರು ಒಂದಷ್ಟು ಹಾಡುಗಳ ಹಿನ್ನೆಲೆಯನ್ನು ನೆನಪಿಸಿದ ವೀಡಿಯೋ ನಿರೂಪಣೆ ಪ್ರದರ್ಶಿಸಲ್ಪಟ್ಟಿತು. ಪೂರ್ತಿ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿಯನ್ನು ನಟಿ ವಿನಯಾಪ್ರಕಾಶ್ ವಹಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com