

ಬೆಂಗಳೂರು: ಸಿನಿಮಾ ನಿರ್ಮಾಪಕ ಕಡೂರ್ ಉಮೇಶ್ (48) ಮೇಲೆ ಅವರ ಅಳಿಯನೇ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಾಯಗೊಂಡಿದ್ದ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
`ಸುಂಟರಗಾಳಿ' ಸೇರಿದಂತೆ ಕೆಲವು ಚಿತ್ರಗಳನ್ನು ಉಮೇಶ್ ನಿರ್ಮಿಸಿದ್ದಾರೆ. ಅವರ ಅಳಿಯ ಮಹೇಶ್ (28) ಎಂಬಾತನೇ ಹಲ್ಲೆ ನಡೆಸಿದ್ದು, ಈಗ ತಲೆಮರೆಸಿಕೊಂಡಿದ್ದಾನೆ. ಕೋರಮಂಗಲ ನಿವಾಸಿ ಮಹೇಶ್ ಹಾಗೂ ಪತ್ನಿ ನಡುವೆ ಕೌಟುಂಬಿಕ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕೆ ಮಹೇಶನಿಂದ ದೂರವಾಗಿ ತಂದೆ ಉಮೇಶ್ ಮನೆಗೆ ಬಂದಿದ್ದರು.
ಗುರುವಾರ ರಾತ್ರಿ ಮಾವನ ಮನೆಗೆ ತೆರಳಿದ್ದ ಮಹೇಶ್, ತನ್ನ ಪತ್ನಿಯನ್ನು ಮನೆಗೆ ಕಳುಹಿಸುವಂತೆ ಕೋರಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು ಮಧ್ಯಪ್ರವಶಿಸಿದ ಮಾವ ಉಮೇಶ್, ಮನೆಯಿಂದ ಹೊರಡುವಂತೆ ಅಳಿಯ ಮಹೇಳನಿಗೆ ಸೂಚಿಸಿದ್ದಾರೆ. ಇದರಿಂದ ಕುಪಿತಗೊಂಡ ಮಹೇಶ್, ಉಮೇಶ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ರಕ್ತಸ್ರಾವವಾಗಿ ಕುಸಿದು ಬಿದ್ದ ಉಮೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಾರಿಯಾಗಿರುವ ಮಹೇಶ್ಗಾಗಿ ಶೋಧ ನಡೆದಿದೆ ಎಂದು ಸುಬ್ರಮಣ್ಯನಗರ ಪೊಲೀಸರು ಹೇಳಿದ್ದಾರೆ