
ಬೆಂಗಳೂರು: ಖ್ಯಾತ ನಟ, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದ್ದು, ಸಮಾಧಿ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ದಿ. ಬಾಲಕೃಷ್ಣ ಕುಟುಂಬಸ್ಥರು ಮತ್ತೆ ತಕರಾರು ತೆಗೆದಿದ್ದಾರೆ ಎಂದು ತಿಳಿದುಬಂದಿದೆ.
ಅಭಿಮಾನ್ ಸ್ಟುಡಿಯೋಗೆ ಸೇರಿದ 10 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ವಿಷ್ಣುವರ್ಧನ್ ಸಮಾಧಿ ಸ್ಮಾರಕ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ವಿಷ್ಣು ಪ್ರತಿಷ್ಠಾನ ಟ್ರಸ್ಟ್‌ಗೆ ನೀಡಲು ನಟ ಬಾಲಣ್ಣನ ಕುಟುಂಬ ವರ್ಗ ಸಮ್ಮತಿಸಿತ್ತಾದರೂ, ಇಂದು ಆ 2 ಎಕರೆ ಜಾಗದಲ್ಲಿ ತಂತಿಬೇಲಿ ನಿರ್ಮಿಸಲು ತೆರಳಿದ್ದ ಸಿಬ್ಬಂದಿ ಕಾರ್ಯಕ್ಕೆ ಬಾಲಣ್ಣನ ಮಕ್ಕಳು ಹಾಗೂ ಮೊಮ್ಮಗ ಅಡ್ಡಿಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಅಭಿಮಾನ್ ಸ್ಟುಡಿಯೋಗೆ ಸೇರಿದ 10 ಎಕರೆ ಜಾಗದಲ್ಲಿ 2 ಎಕರೆ ಜಾಗವನ್ನು ವಿಷ್ಣುವರ್ಧನ್ ಸಮಾಧಿ ಸ್ಮಾರಕ ನಿರ್ಮಿಸಲು ಸರಕಾರಕ್ಕೆ ಹಾಗೂ ವಿಷ್ಣು ಪ್ರತಿಷ್ಠಾನ ಟ್ರಸ್ಟ್‌ಗೆ ನೀಡಲು ನಟ ಬಾಲಣ್ಣನ ಕುಟುಂಬ ವರ್ಗ ಸಮ್ಮತಿಸಿತ್ತು. ಈ ಸಂಬಂಧ ಖುದ್ದು ಸರ್ಕಾರಕ್ಕೆ ಮುಚ್ಚಳಿಕೆ ಕೂಡ ಪತ್ರ ಬರೆದುಕೊಟ್ಟಿದ್ದರು. ಪತ್ರದಲ್ಲಿ 2 ಎಕರೆ ಜಾಗವನ್ನು ವಿಷ್ಣು ಪ್ರತಿಷ್ಠಾನಕ್ಕೆ ನೀಡುತ್ತಿದ್ದು, ಈ ಜಾಗದ ಮೇಲೆ ಬಾಲಣ್ಣನ ಕುಟುಂಬದವರಿಗೆ ಯಾವುದೇ ಹಕ್ಕಿರುವುದಿಲ್ಲ. ಜತೆಗೆ ಯಾವುದೇ ಕೋರ್ಟಿನಲ್ಲೂ ಈ ಬಗ್ಗೆ ತಾವು ಪ್ರಶ್ನಿಸುವುದಿಲ್ಲ. ಒಂದು ವೇಳೆ ಮಾತು ತಪ್ಪಿದರೆ ಸರ್ಕಾರ ಸೂಕ್ತ ಶಿಸ್ತು ಕ್ರಮ ಜರುಗಿಸಲಿ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈ ಪತ್ರಕ್ಕೆ ನಟ ಬಾಲಕೃಷ್ಣ ಅವರ ಮಗಳಾದ ಗೀತಾಬಾಲಿ, ಮಗ ಬಿ. ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಸಹಿ ಮಾಡಿದ್ದರು.
ಆದರೆ ಈ ಜಾಗದಲ್ಲಿ ಇಂದು ಬೆಳಿಗ್ಗೆ ವಿಷ್ಣು ಪ್ರತಿಷ್ಠಾನದ ಸಿಬ್ಬಂದಿ ತಂತಿಬೇಲಿ ನಿರ್ಮಿಸಲು ಮುಂದಾಗಿದ್ದ ವೇಳೆ ಬಾಲಕೃಷ್ಣ ಕುಟುಂಬ ಅಡ್ಡಿಪಡಿಸಿತು. ಯಾವುದೇ ಕಾರಣಕ್ಕೂ ಜಾಗ ಬಿಟ್ಟುಕೊಡುವುದಿಲ್ಲ ಎಂದು ತಕರಾರು ತೆಗೆದಿದ್ದಾರೆ. ನಟ ಬಾಲಣ್ಣನ ಕುಟುಂಬದವರ ಈ ಕ್ರಮಕ್ಕೆ ವಿಷ್ಣು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಹ ನೀಡಲಾಗಿದೆ ಎಂದು ತಿಳಿದುಬಂದಿದೆ.
Advertisement