ನಟ-ನಿರ್ದೇಶಕ ಉಪೇಂದ್ರಗೆ ಗೌರವ ಡಾಕ್ಟರೇಟ್

ಖ್ಯಾತ ನಟ ಮತ್ತು ನಿರ್ದೇಶಕ ಸೂಪರ್ ಸ್ಟಾರ್ ಉಪೇಂದ್ರ ಅವರು ಶೀಘ್ರದಲ್ಲಿಯೇ ಗೌರವ ಡಾಕ್ಟರೇಟ್ ಗೆ ಪಾತ್ರರಾಗಲಿದ್ದಾರೆ ಎಂದು ತಿಳಿದುಬಂದಿದೆ...
ನಟ ಉಪೇಂದ್ರ (ಸಂಗ್ರಹ ಚಿತ್ರ)
ನಟ ಉಪೇಂದ್ರ (ಸಂಗ್ರಹ ಚಿತ್ರ)

ಬೆಂಗಳೂರು: ಖ್ಯಾತ ನಟ ಮತ್ತು ನಿರ್ದೇಶಕ ಸೂಪರ್ ಸ್ಟಾರ್ ಉಪೇಂದ್ರ ಅವರು ಶೀಘ್ರದಲ್ಲಿಯೇ ಗೌರವ ಡಾಕ್ಟರೇಟ್ ಗೆ ಪಾತ್ರರಾಗಲಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ವಿಭಿನ್ನ ನಟನೆ ಮತ್ತು ನಿರ್ದೇಶನದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಟ-ನಿರ್ದೇಶಕ ಉಪೇಂದ್ರ ಅವರು ಶೀಘ್ರದಲ್ಲಿಯೇ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ  ಪಾತ್ರರಾಗಲಿದ್ದಾರೆ. ಉಪೇಂದ್ರ ಅವರು ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಗಮನಿಸಿ ಕಾಂಬೋಡಿಯಾದ ಅಂಕೋರೋ ವಿಶ್ವವಿದ್ಯಾಲಯ ಉಪೇಂದ್ರ ಅವರಿಗೆ  ಶೀಘ್ರದಲ್ಲಿಯೇ ಗೌರವ ಡಾಕ್ಟರೇಟ್ ಪುರಸ್ಕಾರವನ್ನು ಪ್ರದಾನ ಮಾಡಲಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಉಪೇಂದ್ರ ಅವರಿಗೆ ಅಂಕೋರ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ. 1968 ಸೆಪ್ಟೆಂಬರ್ 18ರಲ್ಲಿ ಕುಂದಾಪುರದಲ್ಲಿ ಜನಿಸಿದ ಉಪೇಂದ್ರ  ಅವರು, 1992ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಕ್ಕೂ ಮೊದಲು ಖ್ಯಾತ ನಿರ್ದೇಶಕ ಕಾಶೀನಾಥ್ ಅವರ  ಬಳಿಯಲ್ಲಿ ಹಲವು ವರ್ಷಗಳ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿದ್ದರು. 1993ರಲ್ಲಿ ಶ್ ಎಂಬ ಹಾರರ್ ಕಥಾನಕದ ಚಿತ್ರವನ್ನು ನಿರ್ದೇಶಿಸಿದರು. ಬಳಿಕ 1995ರಲ್ಲಿ ರೌಡಿಸಂ ಹಿನ್ನಲೆಯಲ್ಲಿ  ಮೂಡಿಬಂದ ನಟ ಶಿವರಾಜ್ ಕುಮಾರ್ ಅವರು ನಟಿಸಿದ್ದ ಓಂ ಚಿತ್ರ ಉಪೇಂದ್ರ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಸಹಕಾರಿಯಾಯಿತು.

ಆ ಬಳಿಕ ಆಪರೇಷನ್ ಅಂತ, ಎ, ಸ್ವಸ್ತಿಕ್, ಉಪೇಂದ್ರ, ಸೂಪರ್, ಉಪ್ಪಿ-2 ನಂತಹ ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿದರು. ಇದಲ್ಲದೆ ಹಲವು ನಿರ್ದೇಶಕರೊಂದಿಗೆ ನಟರಾಗಿ ಸಾಕಷ್ಟು  ಚಿತ್ರಗಳಲ್ಲಿ  ಉಪೇಂದ್ರ ಅಭಿನಯಿಸಿದ್ದಾರೆ. ಅಭಿನಯ ಮಾತ್ರವಲ್ಲ, ಗೀತರಚನೆ ಮತ್ತು ಸಂಭಾಷಣೆ ರಚನೆಯಲ್ಲಿಯೂ ಉಪೇಂದ್ರ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com