

ಬೆಂಗಳೂರು: ತಮ್ಮ ಸಿನೆಮಾಗಳಲ್ಲಿ ನಟರ ನೋಟದ ಬಗ್ಗೆ ವಿಶೇಷ ಆಸ್ಥೆ ವಹಿಸುವ ನಿರ್ದೇಶಕ ಪ್ರೇಮ್, ಮುಂದಿನ ಸಿನೆಮಾ 'ದ ವಿಲನ್'ನಲ್ಲೂ ಇದರಿಂದ ಹಿಂದೆ ಬಿದ್ದಿಲ್ಲ.
ಸಿನೆಮಾದಲ್ಲಿ ನಾಯಕನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರಿಗೆ ಸಂಪೂರ್ಣವಾಗಿ ವಿಭಿನ್ನ ನೋಟ ನೀಡಲು ನಿರ್ದೇಶಕ ಮುಂದಾಗಿದ್ದಾರೆ. ನಿರ್ದೇಶಕರೇ ವೈಯಕ್ತಿಕವಾಗಿ ನಟರು ತೊಡಲಿರುವ ವಿಗ್ ಗಳ ವಿನ್ಯಾಸದಲ್ಲಿ ಭಾಗಿಯಾಗಿದ್ದು, ಮುಂಬೈನಲ್ಲಿ ವಿನ್ಯಾಸ ಆಗಲಿರುವ ಈ ವಿಗ್ ಗಳ ಬೆಲೆ ಒಂದಕ್ಕೆ 4 ಲಕ್ಷವಂತೆ!
ಈ ಹಿಂದೆ ಪುನೀತ್ ರಾಜಕುಮಾರ್ ನಟನೆಯ 'ರಾಜ್ ದ ಶೋಮ್ಯಾನ್' ಸಿನೆಮಾಗೂ ಇಂತಹ ಒಂದು ವಿಭಿನ್ನ ಪ್ರಯತ್ನಕ್ಕೆ ಪ್ರೇಮ್ ಮುಂದಾಗಿದ್ದವರು.
ಈಗ ಈ ಜನಪ್ರಿಯ ನಟರನ್ನು ಒಟ್ಟಿಗೆ ತಂದಿರುವ ದೊಡ್ಡ ಬಜೆಟ್ ಸಿನೆಮಾದ ಮುಹೂರ್ತವನ್ನು ಆಗಸ್ಟ್ 12 ರನು ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆಸಲು ನಿರ್ಮಾಪಕ ಸಿ ಆರ್ ಮನೋಹರ್ ಮುಂದಾಗಿದ್ದಾರೆ. ಈ ಹಿಂದೆ ಕೂಡ ಹಲವಾರು ಸಿನೆಮಾಗಳ ಮುಹೂರ್ತವನ್ನು ಅಲ್ಲಿಯೇ ನಡೆಸಿದ್ದ ಪ್ರೇಮ್, ದೇವಾಲಯ ಅದೃಷ್ಟ ತರುವ ನಂಬಿಕೆ ಹೊಂದಿದ್ದಾರೆ.
ಆದರೆ ಸಿನೆಮಾದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗಲಿದ್ದು, ಮೊದಲಿಗೆ ಸುದೀಪ್ ಅವರ ಭಾಗ ಚಿತ್ರೀಕರಣಗೊಳ್ಳಲಿದೆಯಂತೆ. ನಂತರ ಶಿವಣ್ಣ ಸೆಟ್ ಸೇರಲಿದ್ದಾರೆ. ನಾಯಕನಟಿಯ ಪಾತ್ರಕ್ಕೆ ಖ್ಯಾತ ದಕ್ಷಿಣ ಭಾರತದ ನಟಿ ತಮನ್ನಾ ಅವರನ್ನು ಕೇಳಿಕೊಳ್ಳಲಾಗಿದ್ದು, ಇನ್ನು ಧೃಢೀಕರಣ ಸಿಕ್ಕಿಲ್ಲ.
'ದಿ ವಿಲನ್' ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ಒದಗಿಸಲಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡಲಿದ್ದಾರೆ.