ಬೆಂಗಳೂರು: ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ 'ಚೌಕ' ಸಿನೆಮಾದಲ್ಲಿ ಈಗಾಗಲೇ ನಾಲ್ಕು ಜನ ಹೀರೋಗಳು ನಾಲ್ಕು ಹೀರೋಯಿನ್ ಗಳಿದ್ದಾರೆ. ಈಗ ಜೊತೆಗೆ ಸಿನೆಮಾದಲ್ಲಿ ಮಾನ್ವಿತಾ ಹರೀಶ್ ಕೂಡ ಅತಿಥಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
'ಕೆಂಡಸಂಪಿಗೆ' ಸಿನೆಮಾ ಮೂಲಕ ಗಮನ ಸೆಳೆದಿದ್ದ ನಟಿ, ಸೂರಿ ಅವರ 'ಟಗರು' ಸಿನಿಮಾದಲ್ಲಿಯೂ ಪಾತ್ರ ಪಡೆದಿದ್ದಾರೆ. ಮಾನ್ವಿತಾ ಜೊತೆಗೆ ಹಿರಿಯ ನಟ ಕಾಶಿನಾಥ್ ಕೂಡ 'ಚೌಕ' ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದ್ವಾರಕೀಶ್ ಪಿಕ್ಚರ್ ನ 50 ನೆಯ ಸಿನೆಮಾ 'ಚೌಕ'ದಲ್ಲಿನ ಮತ್ತೊಂದು ವಿಶೇಷ ಎಂದರೆ ನಟ ಸುದೀಪ್ ಕೂಡ ಕಾಣಿಸಿಕೊಳ್ಳುತ್ತಿರುವುದು.
ದ್ವಾರಕೀಶ್ ಅವರ ಪುತ್ರ ಯೋಗೀಶ್ ಮತ್ತು ನಿರ್ದೇಶಕ ತರುಣ್, ನಟ ಸುದೀಪ್ ಅವರ ಗೆಳೆಯರಾಗಿರುವುದರಿಂದ, ಸುದೀಪ್ ಈ ಯೋಜನೆಯ ಭಾಗವಾಗುತ್ತಾರೆ ಎಂದು ತಿಳಿದುಬಂದಿದೆ.
ಆದರೆ ಈ ನಟ ಸಿನೆಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮುಂದಿನ ದಿಗಳಲ್ಲಿ ತಿಳಿಯಲಿದೆ. 25 ತಂತ್ರಜ್ಞರು ಕೂಡ ಒಟ್ಟಾಗಿರುವ 'ಚೌಕ' ಸಿನೆಮಾದ ಆಡಿಯೋ ಗಣೇಶ ಚತುರ್ಥಿಗೆ ಬಿಡುಗಡೆಯಾಗಲಿದೆ.