

ಬೆಂಗಳೂರು: ಫೆಬ್ರವರಿಯಲ್ಲಿ ಎರಡು ಖ್ಯಾತ ಹಳೆಯ ಕನ್ನಡ ಸಿನೆಮಾಗಳು ಮತ್ತೆ ಬಿಡುಗಡೆ ಕಾಣಲಿವೆ. ಡಾ. ರಾಜ ಕುಮಾರ್ ಅವರ 'ರಾಜ ನನ್ನ ರಾಜ' ಮತ್ತು ಡಾ. ವಿಷ್ಣುವರ್ಧನ್ ಅವರ 'ಸಾಹಸ ಸಿಂಹ' ಈಗ ಡಿಜಿಟಲ್ ಆವೃತ್ತಿಯಲ್ಲಿ ಮರುಬಿಡುಗಡೆಯಾಗುತ್ತಿರುವ ಸಿನೆಮಾಗಳು. ಎರಡು ಸಿನೆಮಾಗಳು ಕರ್ನಾಟಕದಾದ್ಯಂತ್ಯ ೩೦-೪೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ.
ಪ್ರತಿ ವರ್ಷ ಈ ರೀತಿಯ ಒಂದೊಳ್ಳೆ ಹಳೆಯ ಸಿನೆಮಾವನ್ನು ಡಿಜಿಟಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಪಣ ತೊಟ್ಟಿದ್ದಾರೆ 'ರಾಜಾ ನನ್ನ ರಾಜಾ' ಸಿನೆಮಾವನ್ನು ಮತ್ತೆ ಬಿಡುಗಡೆ ಮಾಡುತ್ತಿರುವ ವಿತರಕ ಆನಂದ್ ಕುಮಾರ್. ಅವರು ಈ ಪ್ರಕ್ರಿಯೆಗೆ ೩೫ ಲಕ್ಷ ಹಣವನ್ನು ವ್ಯಯಿಸಿದ್ದಾರಂತೆ.
ಎ ವಿ ಶೇಷಗಿರಿ ರಾವ್ ನಿರ್ದೇಶನದ 'ರಾಜಾ ನನ್ನ ರಾಜ' ಸಿನೆಮಾಗೆ ಜಿ ಕೆ ವೆಂಕಟೇಶ್ ಅವರ ಅತ್ಯದ್ಭುತ ಸಂಗೀತ ಸಂಯೋಜನೆಯಿತ್ತು. ಆರತಿ ನಾಯಕ ನಟಿಯಾಗಿ ನಟಿಸಿದ್ದರು.
'ಸಾಹಸ ಸಿಂಹ' ಸಿನೆಮಾವನ್ನು ಮತ್ತೆ ಬಿಡುಗಡೆ ಮಾಡುತ್ತಿರುವ ಎಂ ರಾಜು ಅವರ ಪ್ರಕಾರ "ಇದು ಹಣಕ್ಕಾಗಿ ಮಾಡುತ್ತಿರುವುದಲ್ಲ. ನಾನು ವಿಷ್ಣು ಅವರ ದೊಡ್ಡ ಅಭಿಮಾನಿ. ಅದಕ್ಕಾಗಿ ಮಾಡುತ್ತಿದ್ದೇನೆ" ಎನ್ನುತ್ತಾರೆ.
೧೯೮೨ ರಲ್ಲಿ ಬಿಡುಗಡೆಯಾದ 'ಸಾಹಸಸಿಂಹ' ಸಿನೆಮಾವನ್ನು ಜೋ ಸೈಮನ್ ನಿರ್ದೇಶಿಸಿದ್ದರು.