ಚೀನಾ: ಆಮೀರ್ ಖಾನ್ ರ ಪಿಕೆ ದಾಖಲೆ ಮುರಿಯಲಿರುವ ಬಾಹುಬಲಿ

ಬಾಹುಬಲಿ ಚಿತ್ರ ಮತ್ತೊಂದು ದಾಖಲೆಗೆ ಸಜ್ಜಾಗಿದ್ದು, ಚೀನಾದಲ್ಲಿ ತೆರೆಕಂಡು ದಾಖಲೆ ನಿರ್ಮಿಸಿದ್ದ ಪಿಕೆ ಚಿತ್ರದ ದಾಖಲೆಯನ್ನು ಬಾಹುಬಲಿ ಮುರಿಯಲಿದೆ ಎಂದು ಹೇಳಲಾಗುತ್ತಿದೆ.
ಬಾಹುಬಲಿ ಮತ್ತು ಪಿಕೆ ಚಿತ್ರ (ಸಂಗ್ರಹ ಚಿತ್ರ)
ಬಾಹುಬಲಿ ಮತ್ತು ಪಿಕೆ ಚಿತ್ರ (ಸಂಗ್ರಹ ಚಿತ್ರ)

ಬೀಜಿಂಗ್: ಭಾರತೀಯ ಚಿತ್ರರಂಗದಲ್ಲಿ ತನ್ನ ಮೇಕಿಂಗ್ ನಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿ, ಗಳಿಕೆಯಲ್ಲೂ ದಾಖಲೆ ನಿರ್ಮಿಸಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಮತ್ತೊಂದು ದಾಖಲೆಗೆ ಸಜ್ಜಾಗಿದ್ದು, ಚೀನಾದಲ್ಲಿ ತೆರೆಕಂಡು ದಾಖಲೆ ನಿರ್ಮಿಸಿದ್ದ ಪಿಕೆ ಚಿತ್ರದ ದಾಖಲೆಯನ್ನು ಬಾಹುಬಲಿ ಮುರಿಯಲಿದೆ ಎಂದು ಹೇಳಲಾಗುತ್ತಿದೆ.

ಚೀನಾದಲ್ಲಿ ತೆರೆಕಂಡ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗಳಿಸಿದ್ದ ಪಿಕೆ ಚಿತ್ರ ಸುಮಾರು 5000 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಆದರೆ ಈಗ ಬಾಹುಬಲಿ ಸುಮಾರು 6000 ಸ್ಕ್ರೀನ್ ಗಳಲ್ಲಿ  ತೆರೆಕಾಣುವ ಮೂಲಕ ನೂತನ ದಾಖಲೆಗೆ ಸಜ್ಜಾಗುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ ಬಾಹುಬಲಿ "ದಿ ಬಿಗಿನಿಂಗ್" ಚೀನೀ ಭಾಷೆಗೆ ಡಬ್ ಆಗಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಚಿತ್ರ  ಚೀನಾ ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದೆ. ಹೀಗಾಗಿ ಚಿತ್ರತಂಡ ಕಳೆದ ವಾರ ಚೀನಾದಲ್ಲಿ ಚಿತ್ರದ ಪ್ರಚಾರದಲ್ಲಿ ತೊಡಗಿತ್ತು ಎಂದು ತಿಳಿದುಬಂದಿದೆ.

ಪಿಕೆ ದಾಖಲೆ ಮುರಿಯಲಿದೆಯೇ ಬಾಹುಬಲಿ?
ಇನ್ನು 5000 ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದ ಅಮೀರ್ ಖಾನ್ ಅಭಿನಯದ ಪಿಕೆ ಚಿತ್ರ ಚೀನಾದಲ್ಲಿ 100 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು. ಇದೀಗ ಆದೇ  ಮಾರ್ಗದಲ್ಲಿರುವ ಬಾಹುಬಲಿ ಚಿತ್ರ ಅದಕ್ಕಿಂತಲೂ ಹೆಚ್ಚು ಅಂದರೆ 6500 ಸ್ಕ್ರೀನ್ ಗಳಲ್ಲಿ ಏಕಕಾಲದಲ್ಲಿ ತೆರೆಕಾಣುತ್ತಿದ್ದು, ಪಿಕೆ ಚಿತ್ರದ ಗಳಿಕೆಯನ್ನು ಮೀರಿಸಲಿದೆ ಎಂಬ ಮಾತುಗಳು  ಕೇಳಿಬರುತ್ತಿವೆ.

ಏತನ್ಮಧ್ಯೆ ಬಾಹುಬಲಿ-2 (ದಿ ಕನ್ ಕ್ಲೂಷನ್) ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಸಾಹಸ ಮಯ ದೃಶ್ಯಗಳನ್ನು  ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಅಂತೆಯೇ ಚಿತ್ರವನ್ನು ಘೋಷಣೆ ಮಾಡಿರುವ ದಿನದಂದೇ ತೆರೆಗೆ ತರಲು ಸಿದ್ಧತೆ ನಡೆಸಿರುವ ನಿರ್ದೇಶಕ ರಾಜಮೌಳಿ ಅನ್ ಸ್ಪಾಟ್ ಎಡಿಟಿಂಗ್ ವ್ಯವಸ್ಥೆಯನ್ನು  ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಂದೆರ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ಚಿತ್ರದ ಎಡಿಟಿಂಗ್ ಕೂಡ ಅಲ್ಲೇ ಆಗುವುದರಿಂದ ಚಿತ್ರೀಕರಣ ಮತ್ತು ಚಿತ್ರೀಕರಣ ಬಳಿಕದ  ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಚಿತ್ರತಂಡ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com