ಕಾರು ಅಪಘಾತ: ಕೂದೆಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟಿ ಕಂಗನಾ
ಮುಂಬೈ: ಸಿಮ್ರನ್ ಚಿತ್ರದ ಚಿತ್ರೀಕರಣಕ್ಕಾಗಿ ಅಮೆರಿಕಾಗೆ ತೆರಳಿರುವ ಬಾಲಿವುಡ್ ನಟಿ ಕಂಗನಾ ಅವರ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆ ಅಂತರಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ.
ನಟಿ ಕಂಗನಾ, ಅಂಗರಕ್ಷಕ ಹಾಗೂ ಸಿಮ್ರನ್ ಚಿತ್ರ ತಂಡದ ಕೆಲವರು ಕಾರಿನಲ್ಲಿ ಹೋಟೆಲ್ ವೊಂದಕ್ಕೆ ಹೋಗುತ್ತಿದ್ದರು. ಕಾರಿನ ಹಿಂದಿನ ಸೀಟಿನಲ್ಲಿ ಕಂಗನಾ ಹಾಗೂ ಚಿತ್ರದ ತಂಡದವರು ಕುಳಿತುಕೊಂಡಿದ್ದರು.
ಕಾರು ಚಾಲನೆ ಮಾಡುತ್ತಿದ್ದಾಗ ಚಾಲಕನಿಗೆ ಇದ್ದಕ್ಕಿಂತೆ ಎಡಬಿಡದಂತೆ ಕೆಮ್ಮು ಬಂದಿದೆ. ಕೆಮ್ಮನ್ನು ನಿಯಂತ್ರಿಸಲು ಚಾಲಕನಿಗೆ ಸಾಧ್ಯವಾಗಿಲ್ಲ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಕೂಡಲೇ ಕಂಗನಾ ಅವರ ಅಂಗರಕ್ಷಕ ಕಾರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ತಡೆಗೋಡೆಯೊಂದಕ್ಕೆ ಕಾರು ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
ನಟಿ ಕಂಗನಾ ಅವರ ತಲೆಗೆ ಪೆಟ್ಟುಬಿದ್ದಿದ್ದು, ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಮ್ರನ್ ಚಿತ್ರದ ನಿರ್ಮಾಪಕ ಶೈಲೇಶ್ ಆರ್ ಸಿಂಗ್ ಅವರು, ಕೂದಲೆಳೆ ಅಂತರದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಂಗನಾ ಅತ್ಯಂತ ಧೈರ್ಯದ ಹುಡುಗಿಯಾಗಿದ್ದಾಳೆ. ಅಪಘಾತವಾಗಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ