ಬೆಂಕಿಗಾಹುತಿಯಾದ ಚಿತ್ರಮಂದಿರ
ಬೆಂಕಿಗಾಹುತಿಯಾದ ಚಿತ್ರಮಂದಿರ

ಉದ್ಘಾಟನೆಗೂ ಮೊದಲೇ ಸುಟ್ಟು ಕರಕಲಾದ ರಾಣಾ ಕುಟುಂಬದ "ಸುರೇಶ್ ಮಹಲ್" ಚಿತ್ರಮಂದಿರ

ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕುಟುಂಬದ ಒಡೆತನವಿರುವ ಸುರೇಶ್ ಮಹಲ್ ಚಿತ್ರಮಂದಿರ ಉದ್ಘಾಟನೆಗೂ ಮೊದಲೇ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.

ಅಮರಾವತಿ: ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕುಟುಂಬದ ಒಡೆತನವಿರುವ ಸುರೇಶ್ ಮಹಲ್ ಚಿತ್ರಮಂದಿರ ಉದ್ಘಾಟನೆಗೂ ಮೊದಲೇ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚೀರಾಲ ಟೌನ್ ನಲ್ಲಿರುವ "ಸುರೇಶ್ ಮಹಲ್" ಚಿತ್ರಮಂದಿರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಅವಘಡದಿಂದ ಲಕ್ಷಾಂತರ ರು ಮೌಲ್ಯದ ಪೀಠೋಪಕರಣಗಳು ಸುಟ್ಟು ಹೋಗಿವೆ.  ಮೂಲಗಳ ಪ್ರಕಾರ ಆರು ತಿಂಗಳ ಹಿಂದಷ್ಟೇ ಈ ಚಿತ್ರಮಂದಿರವನ್ನು ನವೀಕರಣಕ್ಕಾಗಿ ಮುಚ್ಚಲಾಗಿತ್ತು. ಬಳಿಕ ಚಿತ್ರಮಂದಿರಕ್ಕೆ ಅತ್ಯಾಧುನಿಕ ಸೇವೆಗಳನ್ನು ಒದಗಿಸಿ ನವೀಕರಣ ಕೆಲಸ ಸಾಗುತ್ತಿತ್ತು. ಚಿತ್ರ ಮಂದಿರ ಇನ್ನು ಕೆಲವೇ  ದಿನಗಳಲ್ಲಿ ಉದ್ಘಾಟನೆಯಾಗಬೇಕಿತ್ತು. ಆಷ್ಟರಲ್ಲೇ ಈ ದುರಂತ ಸಂಭವಿಸಿದೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸುಮಾರು 6 ಅಗ್ನಿಶಾಮಕ ವಾಹನಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆಯೇ ಆದರೂ ಅಷ್ಟು ಹೊತ್ತಿಗಾಗಲೇ ಚಿತ್ರಮಂದಿರ ಸಂಪೂರ್ಣ ಸುಟ್ಟು ಹೋಗಿದೆ.  ಘಟನೆಯಲ್ಲಿ ಯಾವುದೇ ಕಾರ್ಮಿಕರಿ ಸಾವು-ನೋವುಗಳಾದ ಕುರಿತು ವರದಿಯಾಗಿಲ್ಲ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆ ಚೀರಾಲ ಟೌನ್ ನಲ್ಲಿ ರಾಣಾ ಚಿಕ್ಕಪ್ಪ ನಟ ವೆಂಕಟೇಶ್ ಕುಟುಂಬದ ಮಾಲೀಕತ್ವದ ಎರಡು ಚಿತ್ರಮಂದಿರಗಳಿದ್ದು, ಕೆಲದಿನಗಳಿಂದ ಅವುಗಳ ನವೀಕರಣ ನಡೆದಿತ್ತು. ಅವುಗಳಲ್ಲಿ ಒಂದು ಈ  ಸುರೇಶ್ ಮಹಲ್ ಚಿತ್ರಮಂದಿರವಾಗಿತ್ತು. ಇದರ ನವೀಕರಣ ಮುಗಿದಿದ್ದು, ಇಂದು ಬಿಡುಗಡೆ ಆಗುತ್ತಿರುವ ರಾಣಾರ ' ನೇನೇ ರಾಜು ನೇನೆ ಮಂತ್ರಿ' ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಗುರುವಾರ  ಚಿತ್ರಮಂದಿರದಲ್ಲಿ ಅಳಿದುಳಿದ ಸಣ್ಣಪುಟ್ಟ ಕೆಲಸ ಮಾಡಿಸುತ್ತಿರುವಾಗ ಇದ್ದಕ್ಕಿದ್ದಂತೆ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬಹುತೇಕ ಚಿತ್ರಮಂದಿರ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದೆ.

ಸ್ಥಳೀಯ ಕಾರ್ಮಿಕರು ಅಭಿಪ್ರಾಯ ಪಡುವಂತೆ ಚಿತ್ರಮಂದಿರದಲ್ಲಿ ನವೀಕರಣದ ಅಂತಿಮ ಕಾರ್ಯಗಳು ನಡೆಯುತ್ತಿತ್ತು. ಸಣ್ಣ ಪುಟ್ಟ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು. ಬಹುಶಃ ವೆಲ್ಡಿಂಗ್ ಮಾಡುವಾಗ ಅದರ ಕಿಡಿ ಹಾರಿ ಈ ದುರಂತ  ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಅಂತೆಯೇ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕೂಡ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿರಾಲ ಟೌನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಎಲ್ಲ ಸರಿಯಾಗಿದಿದ್ದರೆ ನಟ ರಾಣಾ ದಗ್ಗುಬಾಟಿ ಅವರು ಈ ಚಿತ್ರಮಂದಿರವನ್ನು ಉದ್ಘಾಟಿಸಿ, ಅವರ ಅಭಿನಯದ ಚಿತ್ರ "ನೇನೇ ರಾಜು ನೇನೇ ಮಂತ್ರಿ" ಚಿತ್ರ ಇದೇ ಚಿತ್ರಮಂದಿರದಲ್ಲಿ ರಿಲೀಸ್ ಆಗಬೇಕಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com