ಬೆಂಗಳೂರು: 'ಹೆಬ್ಬುಲಿ' ಸಿನೆಮಾ ಬಗ್ಗೆ ನಿಮಗೆ ಕುತೂಹಲ ಇದೆಯೇ? ಹಾಗಿದ್ದರೆ ಅವರ ಟ್ವಿಟ್ಟರ್ ಲೋಕವನ್ನು ಆಗಾಗ ಎಡತಾಕಿ. ನಟ ಸುದೀಪ್ ಅವರೇ ತಮ್ಮ ಮುಂದಿನ ಸಿನೆಮಾದ ಹಾಡುಗಳ ಟೀಸರ್ ಗಳನ್ನು ಮತ್ತು ಟ್ರೇಲರ್ ಗಳನ್ನು ಜನಪ್ರಿಯ ಸಾಮಾಜಿಕ ತಾಣದ ಮೂಲಕ ಬಿಡುಗಡೆ ಮಾಡುತ್ತಿರುವುದು ವಿಶೇಷ.
ಟ್ವಿಟ್ಟರ್ ನಲ್ಲಿ ಬಹಳಷ್ಟು ಅನುಯಾಯಿಗಳನ್ನು ಹೊಂದಿರುವ ಕಿಚ್ಚ, ಈ ವೇದಿಕೆಯನ್ನು ತಮ್ಮ ಸಿನೆಮಾ ಪ್ರಚಾರಕ್ಕಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿ ಹಾಡಿನ ಟೀಸರ್ ಎರಡು ದಿನಗಳ ಅಂತರದಲ್ಲಿ ಬಿಡುಗಡೆಯಾಗಲಿದೆಯಂತೆ.
ಅಂತಿಮ ಪ್ರತಿಯನ್ನು ಹೊರತರಲು ಈಗ 'ಹೆಬ್ಬುಲಿ' ತಂಡ ಶ್ರಮಿಸುತ್ತಿದೆ. ಮುಂದಿನ ವಾರ ಸೆನ್ಸಾರ್ ಸಮಿತಿಗೆ ತಮ್ಮ ಸಿನೆಮಾವನ್ನು ಸಲ್ಲಿಸಲಿದ್ದಾರಂತೆ.
ಉಮಾಪತಿ ಫಿಲಂಸ್ ಮತ್ತು ಎಸ್ ಆರ್ ವಿ ಪ್ರೊಡಕ್ಷನ್ಸ್ ಸಹಯೋಗದಲ್ಲಿ ರಘುನಾಥ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಸುದೀಪ್ ಕಮಾಂಡೋ ಅವತಾರದಲ್ಲಿ ಕಾಣಿಸಿಕೊಂಡಿರುವದು ವಿಶೇಷ. ರವಿಚಂದ್ರನ್ ಸುದೀಪ್ ಅವರ ಸಹೋದರನಾಗಿ ಕಾಣಿಸಿಕೊಳ್ಳುತ್ತಿರುವುದು ಮತ್ತು ಸುದೀಪ್ ಅವರ ಹೊಸ ನೋಟ ಕೂಡ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಹೆಬ್ಬುಲಿ ನಾಯಕ ನಟಿ ಅಮಲಾ ಪೌಲ್ ಕನ್ನಡ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರವಿ ಕಿಶನ್, ರವಿ ಶಂಕರ್, ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿರುವ ಇತರ ನಟರು.
ಅರ್ಜುನ್ ಜನ್ಯ 'ಹೆಬ್ಬುಲಿ'ಗೆ ಸಂಗೀತ ನೀಡಿದ್ದು, ಕರುಣಾಕರ್ ಸಿನೆಮ್ಯಾಟೋಗ್ರಾಫರ್.