ಚೆನ್ನೈ: ೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿಗೂಢವಾಗಿ ಮುಳುಗಿಹೋದ ಪಾಕಿಸ್ತಾನದ ಸಬ್ ಮೆರೀನ್ ಪಿ ಎನ್ ಘಜಿ ಬಗೆಗಿನ ಕಥೆ ಹೊಂದಿರುವ ರಾಣಾ ದಗ್ಗುಬಾಟಿ ನಟನೆಯ 'ಘಜಿ' ಸಿನೆಮಾ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಗಮನ ಸೆಳೆದಿದೆ. ನೀರ ಕೆಳಗೆ ನಡೆಯುವ ಈ ಥ್ರಿಲ್ಲರ್ ಅದ್ಭುತವಾಗಿದೆ ಎಂದಿದ್ದಾರೆ ನಿರ್ದೇಶಕ.
"ಕ್ಯಾಪ್ಟನ್ ಮತ್ತು ತಂಡದಿಂದ ಅದ್ಭುತ ಷೋ. ತೆರೆಯಲ್ಲಿ ಮತ್ತು ತೆರೆಯ ಹಿಂದೆ ಕೂಡ. 'ಘಜಿ' ಚಿತ್ರತಂಡ ಅತ್ಯುತ್ತಮ ಕೆಲಸ ಮಾಡಿದೆ. ರಾಣಾ ಅವರಿಗೆ ಅಭಿನಂದನೆಗಳು" ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ಸಂಕಲ್ಪ್ ನಿರ್ದೇಶನದ ಈ ಸಿನೆಮಾದಲ್ಲಿ ರಾಣಾ ಲೆಫ್ಟಿನೆಂಟ್ ಕಮ್ಯಾಂಡರ್ ಅರ್ಜುನ್ ವರ್ಮಾ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನೆಮಾ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಹಿಂದಿಯಲ್ಲಿ ಸಿನೆಮಾದ ಹೆಸರು 'ದ ಘಜಿ ಅಟ್ಯಾಕ್' ಎಂದಿದ್ದು, ಕೆ ಕೆ ಮೆನನ್, ಅತುಲ್ ಕುಲಕರ್ಣಿ ಮತ್ತು ತಾಪಸೀ ಪನ್ನು ಕೂಡ ನಟಿಸಿದ್ದಾರೆ.
ನಿರ್ದೇಶಕರೇ ಬರೆದಿರುವ 'ಬ್ಲೂ ಫಿಶ್' ಆಧಾರಿತ ಸಿನೆಮಾ 'ಘಜಿ'. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಎಎ ಫಿಲಂಸ್ ಸಹಯೋಗದಲ್ಲಿ 'ದ ಘಜಿ ಅಟ್ಯಾಕ್'ನಿರ್ಮಾಣವಾಗುತ್ತಿದೆ.
ಭಾರತದ ಸಬ್ ಮೆರೀನ್ ಎಸ್ ೨೧ ರ ನೌಕಾ ಅಧಿಕಾರಿ ಮತ್ತು ಅವರ ತಂಡ ನೀರಿನ ತಳದಲ್ಲಿ ೧೮ ದಿನಗಳ ಕಾಲ ಸತತವಾಗಿ ವಾಸಿಸುವ ರೋಚಕ ಸತ್ಯಾಂಶ ಕೂಡ ಸಿನೆಮಾದ ಹೈಲೈಟ್.