ಬೆಂಗಳೂರು: ಕನ್ನಡ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಇಂದು ಬಿಡುಗಡೆಯಾಗಬೇಕಿದ್ದ ಮೊದಲ ಡಬ್ಬಿಂಗ್ ಚಿತ್ರ ಸತ್ಯದೇವ್ ಐಪಿಎಸ್ ಬೆಂಗಳೂರಿನಲ್ಲಿ ರದ್ದುಗೊಂಡಿದೆ.
ತಮಿಳಿನ ಸದ್ಯದೇವ್ ಐಪಿಎಸ್ ಚಿತ್ರ ಕನ್ನಡಕ್ಕೆ ಡಬ್ ಆದ ಮೊದಲ ಚಿತ್ರವಾಗಿದ್ದು ಈ ಚಿತ್ರ ಇಂದು ಬಿಡುಗಡೆಯಾಗಬೇಕಿತ್ತು. ಆದರೆ ಕನ್ನಡ ಪರ ಸಂಘಟನೆಗಳು ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಹಾಕಲಾಗಿದ್ದ ಸದ್ಯದೇವ್ ಐಪಿಎಸ್ ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು ಇದರಿಂದಾಗಿ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆ ರದ್ದುಗೊಂಡಿದೆ.
ಇನ್ನು ಡಬ್ಬಿಂಗ್ ಅನ್ನು ತೀವ್ರವಾಗಿ ವಿರೋಧಿಸುತ್ತಿರುವ ನಟ ಜಗ್ಗೇಶ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಬ್ಬಿಂಗ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಡಬ್ಬಿಂಗ್ ಚಿತ್ರ ರಿಲೀಸ್ ಮಾಡಿದ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರು, ಚಿತ್ರದುರ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಎಲ್ಲಿಯೂ ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆ ಆಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.
ತಮಿಳು ನಟ ಅಜಿತ್ ನಟಿಸಿರುವ ಎನ್ನೈ ಅರಿಂದಾಲ್ ಚಿತ್ರ ಕನ್ನಡದಲ್ಲಿ ಸತ್ಯದೇವ್ ಐಪಿಎಸ್ ಹೆಸರಿನಲ್ಲಿ ಡಬ್ ಆಗಿದೆ. ಇನ್ನು ಈ ಚಿತ್ರ ರಾಜ್ಯಾದ್ಯಂತ 60 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು.